ನವ ದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಇನ್ನಷ್ಟು ತೀವ್ರಗೊಂಡಿರುವ ನಡುವೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಾಲಿ ನಡೆಯುತ್ತಿರುವ ವಿಚಾರಣೆಯನ್ನು ಜೂನ್ 20ಕ್ಕೆ ಮುಂದೂಡುವಂತೆ ಮನವಿ ಮಾಡಿದ್ದಾರೆ. ಸತತ ಮೂರು ದಿನಗಳ ಕಾಲ ವಿಚಾರಣೆ ನಡೆಸಿದ ಇ.ಡಿ ಅಧಿಕಾರಿಗಳು ಗುರುವಾರ (ಜೂನ್ 16) ಒಂದು ದಿನದ ವಿರಾಮವನ್ನು ನೀಡಿದ್ದರು. ಈ ನಡುವೆ ರಾಹುಲ್ ಗಾಂಧಿ ಹೊಸ ಮನವಿ ಮಾಡಿದ್ದು, ಇದಕ್ಕೆ ಜಾರಿ ನಿರ್ದೇಶನಾಲಯ ಯಾವ ಪ್ರತಿಕ್ರಿಯೆ ನೀಡಬಹುದು ಎಂಬ ಕುತೂಹಲ ಮೂಡಿದೆ. ಸದ್ಯದ ಸೂಚನೆ ಪ್ರಕಾರ ರಾಹುಲ್ ಗಾಂಧಿ ಅವರು ಶುಕ್ರವಾರ ವಿಚಾರಣೆಗೆ ಹಾಜರಾಗಬೇಕಾಗಿದೆ.
ನ್ಯಾಷನಲ್ ಹೆರಾಲ್ಡ್ ಹಣ ಲೇವಾದೇವಿ ಹಗರಣಕ್ಕೆ ಸಂಬಂಧಿಸಿ ಇ.ಡಿ ಅಧಿಕಾರಿಗಳು ಜೂನ್ 13, 14 ಮತ್ತು 15ರಂದು ಮೂರು ದಿನ ರಾಹುಲ್ ಗಾಂಧಿ ಅವರ ವಿಚಾರಣೆಯನ್ನು ನಡೆಸಿದ್ದಾರೆ. ಮೂರು ದಿನದಲ್ಲಿ 30 ಗಂಟೆಗಳ ಕಾಲ ವಿಚಾರಣೆ ನಡೆದಿದೆ. ಈ ವೇಳೆ ಅಧಿಕಾರಿಗಳು ನೂರಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ. ಇವುಗಳಲ್ಲಿ ಹೆಚ್ಚಿನ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಸಮರ್ಪಕ ಉತ್ತರ ನೀಡಿಲ್ಲ ಎಂಬ ಮಾಹಿತಿ ಇದೆ. ಅದರ ಜತೆಗೆ ಯಂಗ್ ಇಂಡಿಯಾ ಸಂಸ್ಥೆಯ ಹೆಚ್ಚಿನ ವ್ಯವಹಾರಗಳನ್ನು ದಿವಂಗತ ಕಾಂಗ್ರೆಸ್ ನಾಯಕ ಮೋತಿಲಾಲ್ ವೋರಾ ಅವರೇ ನೋಡಿಕೊಳ್ಳುತ್ತಿದ್ದರು. ಹಾಗಾಗಿ ತನಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ರಾಹುಲ್ ಅವರ ಹೇಳಿಕೆಗಳ ಬಗ್ಗೆ ಇ.ಡಿ ಅಧಿಕಾರಿಗಳು ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮೂರು ದಿನಗಳ ಸತತ ವಿಚಾರಣೆಯ ನಂತರವೂ ವಿಚಾರಣೆ ಮುಗಿದಿಲ್ಲ ಎಂದರೆ ಪ್ರಕರಣ ಗಂಭೀರವಾಗಿಯೇ ಇದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ. ವಿಚಾರಣೆ ಸುದೀರ್ಘವಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ದಿನದ ಬಿಡುವು ನೀಡಲಾಯಿತೇ? ಬಿಡುವಿನ ಬಳಿಕ ಇನ್ನಷ್ಟು ತೀವ್ರ ವಿಚಾರಣೆ ನಡೆಯಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಮುಂದೂಡಿಕೆ ಬಯಸಿದ್ದು ಯಾಕೆ?
ರಾಹುಲ್ ಗಾಂಧಿ ಅವರು ವಿಚಾರಣೆಯನ್ನು ಜೂನ್ 20ಕ್ಕೆ ಮುಂದೂಡಿಕೆ ಕೋರಿದ ಕಾರಣ ಸ್ಪಷ್ಟವಾಗಿಲ್ಲ. ಒಂದು ಮಾಹಿತಿಯ ಪ್ರಕಾರ, ಮೂರು ದಿನಗಳ ವಿಚಾರಣೆ ವೇಳೆ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಲಾಗಿತ್ತು. ರಾಹುಲ್ ಅವರಿಗೆ ಈ ವಿಚಾರದಲ್ಲಿ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಯಂಗ್ ಇಂಡಿಯಾದ ವಿಚಾರಗಳನ್ನು ಹಿರಿಯ ಕಾಂಗ್ರೆಸ್ ನಾಯಕ ದಿ. ಮೋತಿಲಾಲ್ ವೋಹ್ರಾ ಅವರೇ ನೋಡಿಕೊಳ್ಳುತ್ತಿದ್ದರು. ತನಗೆ ಹೆಚ್ಚಿನ ಮಾಹಿತಿ ಇರಲಿಲ್ಲ ಎಂದು ಹೇಳಿದ್ದರೆನ್ನಲಾಗಿದೆ. ಹೀಗಾಗಿ, ಸ್ವಲ್ಪ ಮಾಹಿತಿ ಪಡೆದುಕೊಳ್ಳುವುದಕ್ಕಾಗಿ, ತಪ್ಪು ಉತ್ತರಗಳನ್ನು ಕೊಟ್ಟು ಸಿಕ್ಕಿಬೀಳುವುದರಿಂದ ಬಚಾವಾಗುವುದಕ್ಕಾಗಿ ಸಮಯಾವಕಾಶ ಕೋರಿದ್ದಾರೆ ಎನ್ನಲಾಗಿದೆ. ಜತೆಗೆ ಜೂನ್ 19ಕ್ಕೆ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬವೂ ಇದೆ. ಇದೀಗ ಕೊನೆಗೆ ಉಳಿಯುವ ಪ್ರಶ್ನೆ ಎಂದರೆ, ಇ.ಡಿ ರಾಹುಲ್ ಗಾಂಧಿ ಅವರ ಮನವಿಗೆ ಸ್ಪಂದಿಸುತ್ತದೆಯೇ ಎಂಬುದು.
ಈ ನಡುವೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಜೂನ್ 23ಕ್ಕೆ ವಿಚಾರಣೆಗೆ ಹಾಜರಾಗಬೇಕಾಗಿದೆ. ಕೋವಿಡ್ ಚಿಕಿತ್ಸೆಗಾಗಿ ಪ್ರಸಕ್ತ ಆಸ್ಪತ್ರೆಯಲ್ಲಿರುವ ಸೋನಿಯಾ ಗಾಂಧಿ ನಿಗದಿತ ದಿನಾಂಕದಂದು ಹಾಜರಾಗುತ್ತಾ ಕಾದು ನೋಡಬೇಕಾಗಿದೆ.
ಮುಂದುವರಿದ ಪ್ರತಿಭಟನೆ
ಇತ್ತ ರಾಹುಲ್ ಗಾಂಧಿ ಅವರಿಗೆ ಇ.ಡಿ ನೀಡುತ್ತಿರುವ ಕಿರುಕುಳವನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಗುರುವಾರ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಬಹುತೇಕ ಎಲ್ಲ ರಾಜ್ಯಗಳಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಭಾರಿ ಘರ್ಷಣೆಗಳು ನಡೆದಿವೆ. Congress protest | ಬೆಂಗಳೂರಲ್ಲಿ ಕಾಂಗ್ರೆಸಿಗರ ಪ್ರತಿಭಟನೆ ಕಿಚ್ಚು, ಟ್ರಾಫಿಕ್ ಜಾಮ್