Site icon Vistara News

Rahul Gandhi: ಮೇಲ್ವರ್ಗದವರಿಂದಾಗಿ ಪರೀಕ್ಷೆಗಳಲ್ಲಿ ದಲಿತರು ಫೇಲ್‌; ರಾಹುಲ್‌ ಗಾಂಧಿ ಹೊಸ ವಿವಾದ

Rahul Gandhi

ನವದೆಹಲಿ: ಮುಸ್ಲಿಮರಿಗೆ ಸಂಪತ್ತಿನ ಹಂಚಿಕೆ, ಪ್ರಧಾನಿ ನರೇಂದ್ರ ಮೋದಿ(Narendra Modi) ದ್ವಾರಕಾ ಪೂಜೆ ಸೇರಿದಂತೆ ದಿನಕ್ಕೊಂದು ಹೇಳಿಕೆ ಮೂಲಕ ವಿವಾದಕ್ಕೀಡಾಗುತ್ತಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ(Rahul Gandhi) ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. ಮೇಲ್ವರ್ಗದವರು ಪರೀಕ್ಷೆ ನಡೆಸುವುದರಿಂದಾಗಿಯೇ ದಲಿತರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ ಎಂದು ಹೊಸ ವಿವಾದ ಕಿಡಿ ಹಚ್ಚಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗುತ್ತಿದ್ದು, ಬಿಜೆಪಿ ನಾಯಕರಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.

ವಿಡಿಯೋದಲ್ಲಿ ಏನಿದೆ?

ವೈರಲ್‌ ಆಗಿರುವ ವಿಡಿಯೋದಲ್ಲಿ ರಾಹುಲ್‌ ಗಾಂಧಿಯವರು ಕೆಲವು ಜನರ ಜೊತೆ ಕುಳಿತು ಚರ್ಚೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಅವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ದಲಿತರಿಗೆ ಅನ್ಯಾಯ ಆಗುತ್ತಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಿದರು. ಇಂತಹ ಜನಾಂಗೀಯ ತಾರತಮ್ಯ ಅಮೆರಿಕದಲ್ಲೂ ನಡೆದಿತ್ತು. ಪರೀಕ್ಷೆಗಳಲ್ಲಿ ಪಾರದರ್ಶಕತೆ ಇರಬೇಕೆಂದು ಅಂದೇ ಮಹಾತ್ಮ ಗಾಂಧಿ ಹೇಳಿದ್ದರು. ನಮ್ಮ ದೇಶದಲ್ಲಿ ಮೇಲ್ವರ್ಗದ ಜನ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ತಯಾರಿಸುವುದರಿಂದ ದಲಿತರು ಅನುತ್ತೀರ್ಣರಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಮೆರಿಕದಲ್ಲಿ SAT ಪರೀಕ್ಷೆಯಯ ಬಗ್ಗೆ ಪ್ರಸ್ತಾಪಿಸಿದ ಅವರು, ಈ ಪರೀಕ್ಷೆಗೆ ಸವರ್ಣೀಯರು, ಕಪ್ಪು ಜನಾಂಗದವರು ಮತ್ತು ಸ್ಪಾನಿಶ್‌ ಮಾತನಾಡುವವರು ಹಾಜರಾಗುತ್ತಾರೆ. ಈ ಪರೀಕ್ಷೆಯಲ್ಲಿ ಸವರ್ಣೀಯರು ಮಾತ್ರ ಉತ್ತಮ ಅಂಕ ಪಡೆಯುತ್ತಿದ್ದರು. ಆಫ್ರಿಕನ್‌ ಅಭ್ಯರ್ಥಿಗಳನ್ನು ಉದ್ದೇಶಪೂರ್ವಕವಾಗಿ ಅನುತ್ತೀರ್ಣಗೊಳಿಸಲಾಗುತ್ತಿತ್ತು. ಆ ಪರೀಕ್ಷೆಯಲ್ಲಿ ಬಿಳಿಯರನ್ನು ಹೊರತುಪಡಿಸಿ ಇತರರು ಯಾರೂ ಉತ್ತೀರ್ಣರಾಗುತ್ತಲೇ ಇರಲಿಲ್ಲ. ಇದು ಅನೇಕ ವರ್ಷಗಳವರೆಗೆ ನಡೆಯುತ್ತಿತ್ತು. ಬಳಿಕ ಒಂದು ಆಫ್ರಿಕನ್‌ ಜನರಿಗೆ ಪ್ರಶ್ನೆ ಪತ್ರಿಕೆ ತಯಾರಿಸುವ ಅವಕಾಶ ಕೊಡಲಾಯಿತು. ಆಗ ಬಿಳಿಯರೆಲ್ಲರೂ ಫೇಲ್‌ ಆಗಿದ್ದರು. ಅಂದರೆ ಮೆರಿಟ್‌ ಅನ್ನು ನಿರ್ಧರಿಸುವವರು ಯಾರು ಎಂಬ ಪ್ರಶ್ನೆ ಮೂಡುತ್ತದೆ. ಯಾರು ಪ್ರಶ್ನೆ ಪತ್ರಿಕೆ ತಯಾರಿಸುತ್ತಾರೋ, ಯಾರು ಪರೀಕ್ಷೆ ನಡೆಸುತ್ತಾರೋ ಅವರೇ ಮೆರಿಟ್‌ ನಿರ್ಧರಿಸುತ್ತಿದ್ದಾರೆ. ವ್ಯವಸ್ಥೆಯನ್ನು ಕಂಟ್ರೋಲ್‌ ಮಾಡುವವರೇ ಮೆರಿಟ್‌ ಅನ್ನು ನಿರ್ಧರಿಸುತ್ತಿದ್ದಾರೆ. ಐಐಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ದಲಿತರು ಫೇಲ್‌ ಆಗುತ್ತಿದ್ದಾರೆ ಅಂತಾದರೆ ದಲಿತರಿಗೆ ಪ್ರಶ್ನೆ ಪತ್ರಿಕೆ ತಯಾರಿಸಲು ಅವಕಾಶ ಮಾಡಿಕೊಡಿ ಎಂದು ಹೇಳಿದ್ದರು.

ಇದನ್ನೂ ಓದಿ:Narendra Modi: “ನಾನು ಇಸ್ಲಾಂ ವಿರೋಧಿ ಅಲ್ಲ, ಆದರೆ ಮುಸ್ಲಿಮರು…”; ಕಾಂಗ್ರೆಸ್‌ ಆರೋಪದ ಬಗ್ಗೆ ಮೋದಿ ಹೇಳಿದ್ದೇನು?

ರಾಹುಲ್‌ ಗಾಂಧಿಯವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬಿಜೆಪಿ ನಾಯಕರು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜಕೀಯ ಲಾಭಕ್ಕಾಗಿ ರಾಹುಲ್‌ ಗಾಂಧಿ ಎಲ್ಲಾ ವಿಚಾರಗಳಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

Exit mobile version