ನವದೆಹಲಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿ(HAL) ಕುರಿತು ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಅವರು ಸೋಮವಾರ ಆರೋಪ ಮಾಡಿದ್ದಾರೆ. ಆದರೆ, ಯುಪಿಎ ಸರ್ಕಾರವು ಎಚ್ಎಎಲ್ ಜತೆಗೆ ರಫೇಲ್ ನಿರ್ವಹಣಾ ಕುರಿತು ಒಪ್ಪಂದ ಮಾಡಿಕೊಂಡಿತ್ತು. ಮೋದಿ ಆ ಗುತ್ತಿಗೆಯನ್ನು ಅನಿಲ್ ಅಂಬಾನಿ ಅವರಿಗೆ ನೀಡಿದರು. ಅವರಿಗೆ ಡಿಫೆನ್ಸ್‌ನಲ್ಲಿ ಯಾವುದೇ ಅನುಭವ ಇರಲಿಲ್ಲ. ಅವರು ದಿವಾಳಿಯಾದರು ಎಂದು ರಾಹುಲ್ ಗಾಂಧಿ (Rahul Gandhi) ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು(Parliament Budget Session).
ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಪ್ರಧಾನಿ ಅವರು ಇಸ್ರೇಲ್‌ಗೆ ಪ್ರವಾಸ ಹೋದರು. ತಂದನಂತರವೇ ಅದಾನಿ ಸಹಭಾಗಿತ್ವ ಸಂಸ್ಥೆಗೆ ಡ್ರೋನ್ ನಿರ್ಮಾಣದ ಕಾಂಟ್ರಾಕ್ಟ್ ನೀಡಲಾಯಿತು. ಒಟ್ಟು ನಾಲ್ಕು ವಿಭಾಗದಲ್ಲಿ ಅದಾನಿ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಲಘು ಶಸ್ತ್ರಾಸ್ತಗಳ ಉತ್ಪನ್ನ, ಅತ್ಯಾಧುನಿಕ ಶಸ್ತ್ರಾಸ್ತ್ರ ಉತ್ಪನ್ನದ ಟೆಂಡರ್ ಕೂಡ ಅದಾನಿ ಸಂಸ್ಥೆಗೆ ಸಿಕ್ಕಿತು. ಅದಾನಿ ಸಂಸ್ಥೆಗೆ ಏರ್‌ಪೋರ್ಟ್‌ನಲ್ಲಿ ಶೇ.30ರಷ್ಟು ಮಾರುಕಟ್ಟೆ ಸಿಕ್ಕಿದ ರೀತಿಯಲ್ಲೆ, ರಕ್ಷಣಾ ಕ್ಷೇತ್ರದಲ್ಲೂ ಸಹಾಯ ಮಾಡಲಾಗಿದೆ. ಇಸ್ರೇಲ್ ಮತ್ತು ಭಾರತದ ನಡುವಿನ ರಕ್ಷಣಾ ಕ್ಷೇತ್ರದ ವ್ಯವಹಾರವನ್ನು ಪೂರ್ಣ ಪರಮಾಣದಲ್ಲಿ ಅದಾನಿ ಕೈ ಸೇರಿತು. ಬಹುಶಃ ಇಸ್ರೇಲ್‌ಗೆ ಹೋದಾಗಲೇ ಪೆಗಾಸಸ್ ಕೂಡ ಬಂದಿರಬಹುದು ಎಂದು ಮೋದಿ ವಿರುದ್ದ ಟೀಕಾ ಪ್ರಹಾರ ನಡೆಸಿದರು.
ಇದನ್ನೂ ಓದಿ: Parliament Budget Session: ಮೋದಿ-ಅದಾನಿ ನಡುವಿನ ಸಂಬಂಧ ಎಂಥದ್ದು? ಪಿಎಂಗೆ 6 ಪ್ರಶ್ನೆ ಎಸೆದ ರಾಹುಲ್ ಗಾಂಧಿ
ಮೋದಿ-ಅದಾನಿ ಫೋಟೋ ಪ್ರದರ್ಶಿಸಿದ ರಾಹುಲ್
ರಾಹುಲ್ ಗಾಂಧಿಯವರ ಆರೋಪಕ್ಕೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕಟುವಾಗಿ ಪ್ರತಿಕ್ರಿಯೆ ನೀಡಿದರು. ಬಾಯಿಗೆ ಬಂದಂತೆ ಏನೇನೋ ಮಾತನಾಡಿ, ಇಲ್ಲಸಲ್ಲದ ಆರೋಪ ಮಾಡಬೇಡಿ. ನಿಮ್ಮ ಆರೋಪಗಳಿಗೆಲ್ಲ ತಕ್ಕ ಸೂಕ್ತ ಪುರಾವೆಗಳನ್ನು ಒದಗಿಸಿ ಎಂದು ಹೇಳಿದರು. ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿ-ಗೌತಮ್ ಅದಾನಿ ಫೋಟೋ ತೋರಿಸಿದ್ದಕ್ಕೆ ಸ್ಪೀಕರ್ ಓಂಬಿರ್ಲಾ ಕೂಡ ಅಸಮ್ಮತಿ ವ್ಯಕ್ತಪಡಿಸಿದರು.