Site icon Vistara News

Rahul Gandhi: ಅನರ್ಹತೆ ರದ್ದು ಬಳಿಕ ಮೊದಲ ಬಾರಿ ಸಂಸತ್ತಲ್ಲಿ ರಾಹುಲ್‌ ಗಾಂಧಿ ಭಾಷಣ; ಕೇಂದ್ರಕ್ಕೆ ಚಾಟಿ

Rahul Gandhi On No Confidence Motion In Parliament

Rahul Gandhi Speaks On No Confidence Motion In Parliament, Taunts Centre

ನವದೆಹಲಿ: ಮೋದಿ ಉಪನಾಮ ಪ್ರಕರಣದಲ್ಲಿ ಸಂಸತ್‌ನಿಂದ ಅನರ್ಹಗೊಂಡು ನಾಲ್ಕು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi), ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ನಿರ್ಣಯದ ಕುರಿತು ಮಾತನಾಡಿದರು. ಇದೇ ವೇಳೆ ಅವರು ಹಲವು ವಿಷಯಗಳನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದರು.

ಸಂಸತ್‌ನಲ್ಲಿ ಭಾಷಣ ಆರಂಭಿಸಿದ ರಾಹುಲ್‌ ಗಾಂಧಿ, ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಧನ್ಯವಾದ ತಿಳಿಸಿದರು. “ನನ್ನ ಅನರ್ಹತೆ ರದ್ದುಗೊಳಿಸಿ, ಸದಸ್ಯತ್ವ ಮರಳಿ ನೀಡಿರುವುದಕ್ಕೆ ನಿಮಗೆ ಧನ್ಯವಾದಗಳು. ಹಾಗೆಯೇ, ಕಳೆದ ಬಾರಿ ನಾನು ಗೌತಮ್‌ ಅದಾನಿ ಕುರಿತು ಜಾಸ್ತಿ ಮಾತನಾಡಿ ನಿಮಗೆ ಹಾಗೂ ಕೇಂದ್ರ ಸರ್ಕಾರಕ್ಕೆ ತುಂಬ ಕಷ್ಟ ನೀಡಿದೆ. ಅದಕ್ಕಾಗಿ ನಿಮಗೆ ಕ್ಷಮೆಯಾಚಿಸುತ್ತೇನೆ. ಹಾಗೆಯೇ, ನಿಮಗೆ ಇವತ್ತು ಅದಾನಿ ಬಗ್ಗೆ ಮಾತನಾಡಿ ಜಾಸ್ತಿ ತೊಂದರೆ ಕೊಡುವುದಿಲ್ಲ” ಎಂದು ಹೇಳಿದರು.

ನನ್ನ ಅಹಂಕಾರ ಮಾಯ

ಆಕ್ರಮಣಕಾರಿಯಾಗಿ ಮಾತನಾಡದೆ ಶಾಂತಚಿತ್ತದಿಂದಲೇ ರಾಹುಲ್‌ ಗಾಂಧಿ ಹಲವು ವಿಷಯ ಪ್ರಸ್ತಾಪಿಸಿದರು. ಭಾರತ್‌ ಜೋಡೋ ಯಾತ್ರೆ ಕುರಿತು ಮಾತನಾಡಿದ ಅವರು, “ನಾನು ಭಾರತ್‌ ಜೋಡೋ ಯಾತ್ರೆ ಕೈಗೊಂಡಾಗ ಮೊದಲಿಗೆ ಸುಸ್ತಾಗುತ್ತಿತ್ತು. ಕಾಲುಗಳಿಗೆ ನೋವಾಗುತ್ತಿತ್ತು. ಇದರಿಂದ ನನ್ನ ಅಹಂಕಾರವೂ ಇಳಿಯಿತು. ಆದರೆ, ಒಬ್ಬ ಬಾಲಕಿ ಬಂದು ನನಗೆ ಚೀಟಿಯೊಂದನ್ನು ನೀಡಿದ್ದಳು. ನಾನು ನಿಮ್ಮ ಜತೆ ನಡೆಯುತ್ತೇನೆ ರಾಹುಲ್‌ ಗಾಂಧಿ ಎಂದು ಬರೆದಿದ್ದಳು. ಇದು ನನಗೆ ಸ್ಫೂರ್ತಿ ನೀಡಿತು. ಭಾರತ್‌ ಜೋಡೋ ಯಾತ್ರೆ ಕೈಗೊಳ್ಳಲು ಸಹಕಾರಿಯಾಯಿತು. ಮುಂದೆಯೂ ಭಾರತ್‌ ಜೋಡೋ ಯಾತ್ರೆ ಮುಂದುವರಿಯಲಿದೆ” ಎಂದು ತಿಳಿಸಿದರು.

ಮಣಿಪುರ ಹಿಂಸಾಚಾರ ಪ್ರಸ್ತಾಪ

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಸಂಸತ್‌ನಲ್ಲಿ ಉಲ್ಲೇಖಿಸಿದ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಾಟಿ ಬೀಸಿದರು. “ಮಣಿಪುರದಲ್ಲಿ ಹಿಂಸಾಚಾರದಲ್ಲಿ ಮಿತಿಮೀರಿದೆ. ಕೆಲವು ದಿನಗಳ ಹಿಂದಷ್ಟೇ ನಾನು ಮಣಿಪುರಕ್ಕೆ ಹೋಗಿ ಬಂದೆ. ಆದರೆ, ನರೇಂದ್ರ ಮೋದಿ ಅವರು ಇದುವರೆಗೆ ಮಣಿಪುರಕ್ಕೆ ಹೋಗಿಲ್ಲ. ಏಕೆಂದರೆ, ನರೇಂದ್ರ ಮೋದಿ ಅವರ ಪ್ರಕಾರ, ಮಣಿಪುರ ಭಾರತದಲ್ಲಿ ಇಲ್ಲ” ಎಂದು ಕುಟುಕಿದರು.

ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿಗೆ ದಿಲ್ಲಿಯ 12, ತುಘಲಕ್ ಲೇನ್ ಸರ್ಕಾರಿ ಬಂಗಲೆ ಮರು ಹಂಚಿಕೆ! ವಾಪಸ್ ಬರ್ತಾರಾ ರಾಗಾ?

ಸೇನೆಯಿಂದ ಒಂದೇ ದಿನದಲ್ಲಿ ಶಾಂತಿ ಸ್ಥಾಪನೆ

ಭಾರತೀಯ ಸೇನೆಯನ್ನು ಮಣಿಪುರಕ್ಕೆ ಕಳುಹಿಸಿದರೆ ಒಂದೇ ದಿನದಲ್ಲಿ ಶಾಂತಿ ಸ್ಥಾಪನೆ ಮಾಡಬಹುದು. ಆದರೆ, ಕೇಂದ್ರ ಸರ್ಕಾರವು ಶಾಂತಿ ಸ್ಥಾಪನೆಯ ಒಂದು ಸಣ್ಣ ಪ್ರಯತ್ನ ಮಾಡಿಲ್ಲ. ದೇಶದ ಜನರ ಧ್ವನಿಯನ್ನು ಮಣಿಪುರದ ಜನರ ಮೂಲಕ ಕೇಂದ್ರ ಸರ್ಕಾರ ಹುದುಗಿಸಿದೆ. ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ. ದೇಶಾದ್ಯಂತ ಭಾರತ ಮಾತೆಯ ಹತ್ಯೆ ಮಾಡಲಾಗುತ್ತಿದೆ” ಎಂದರು. ಇದಕ್ಕೆ ಬಿಜೆಪಿಯು ಆಕ್ರೋಶ ವ್ಯಕ್ತಪಡಿಸಿದ ಕಾರಣ ಸದನದಲ್ಲಿ ಗಲಾಟೆ ನಡೆಯಿತು. ಇದಾದ ಬಳಿಕ ರಾಹುಲ್‌ ಗಾಂಧಿ ಭಾಷಣ ಮುಗಿಸಿದರು.

Exit mobile version