ನವದೆಹಲಿ: ಭಾರತ ಸೇರಿ ಜಗತ್ತಿನಾದ್ಯಂತ ಹೊಸ ವರ್ಷವನ್ನು (New Year 2024) ಸಡಗರ-ಸಂಭ್ರಮದಿಂದ ಆಚರಿಸಲು ಭರದ ಸಿದ್ಧತೆ ನಡೆಯುತ್ತಿದೆ. ಹೆಚ್ಚಿನ ಜನ ಪ್ರವಾಸಿ ತಾಣಗಳಿಗೆ ತೆರಳಿ, ಬೇರೆ ದೇಶಗಳಿಗೆ ಹೋಗಿ ಹೊಸ ವರ್ಷದ ಸಂಭ್ರಮ ಆಚರಿಸಲು ಮುಂದಾಗಿದ್ದಾರೆ. ಹಾಗಾಗಿ, ಪ್ರವಾಸಿ ತಾಣಗಳು ಜನರಿಂದ ತುಂಬಿ ತುಳುಕುತ್ತಿವೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ದುಬೈಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ರಾಹುಲ್ ಗಾಂಧಿ ಅವರು ದುಬೈಗೆ ಹೊರಟ ವಿಮಾನದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
“ರಾಹುಲ್ ಗಾಂಧಿ ಅವರು ಶುಕ್ರವಾರ (ಡಿಸೆಂಬರ್ 29) ದೆಹಲಿಯಿಂದ ದುಬೈಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಒಂದಷ್ಟು ಪ್ರಯಾಣಿಕರು ರಾಹುಲ್ ಗಾಂಧಿ ಅವರನ್ನು ಮಾತನಾಡಿಸಿದ್ದು, ಪಾರ್ಟಿ ಜೋರಾ” ಎಂಬುದಾಗಿ ಕೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದಾಗ್ಯೂ, ಹೊಸ ವರ್ಷದ ಸಂಭ್ರಮ ಮುಗಿಸಿ ರಾಹುಲ್ ಗಾಂಧಿ ಅವರು ಜನವರಿ 3ರಂದು ಭಾರತಕ್ಕೆ ವಾಪಸಾಗಲಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಅವರು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿಯೇ ದುಬೈಗೆ ತೆರಳಿದ್ದಾರೋ ಅಥವಾ ಬೇರೆ ಕಾರ್ಯಕ್ರಮ ಇದೆಯೋ ಎಂಬುದರ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ.
ರಾಹುಲ್ ಗಾಂಧಿ ಅವರು ಪ್ರತಿ ವರ್ಷ ಹೊಸ ವರ್ಷಾಚರಣೆ ವೇಳೆ ಬೇರೆ ದೇಶಗಳಿಗೆ ಪ್ರವಾಸಕ್ಕೆ ಹೋಗುವುದು ರೂಢಿಯಾಗಿದೆ. ಆದರೆ, ರಾಹುಲ್ ಗಾಂಧಿ ಅವರು ವಿದೇಶಕ್ಕೆ ಪ್ರವಾಸ ಹೋಗುವುದನ್ನು ಬಿಜೆಪಿ ನಾಯಕರು ಟೀಕಿಸುತ್ತಾರೆ. ದೇಶದಲ್ಲಿ ಯಾವುದೇ ಸಮಸ್ಯೆ ಇದ್ದಾಗ, ದುರಂತ ಸಂಭವಿಸಿದಾಗ ರಾಹುಲ್ ಗಾಂಧಿ ವಿದೇಶದಲ್ಲಿ ಮೋಜು-ಮಸ್ತಿ ಮಾಡುತ್ತಾರೆ ಎಂದೆಲ್ಲ ಆರೋಪಿಸುತ್ತಾರೆ. ಹಾಗಾಗಿ, ರಾಹುಲ್ ಗಾಂಧಿ ಅವರು ಪ್ರತಿ ಬಾರಿ ವಿದೇಶಕ್ಕೆ ಹೋದಾಗಲೂ ಪರ-ವಿರೋಧ ಚರ್ಚೆಗಳು ನಡೆಯುತ್ತವೆ.
ಇದನ್ನೂ ಓದಿ: Rahul Gandhi: ಬಜರಂಗ್ ಪೂನಿಯಾ ಜತೆ ರಾಹುಲ್ ಗಾಂಧಿ ಕುಸ್ತಿ; ಗೆದ್ದಿದ್ದು ಯಾರು?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜನವರಿ 14ರಿಂದ ಭಾರತ ನ್ಯಾಯ ಯಾತ್ರೆ ಕೈಗೊಳ್ಳಲು ಮುಂದಾಗಿದ್ದಾರೆ. ಭಾರತ್ ಜೋಡೋ ಯಾತ್ರೆಯ ಎರಡನೇ ಭಾಗವಾಗಿ ಮಣಿಪುರದಿಂದ ಮುಂಬೈವರೆಗೆ ಯಾತ್ರೆ ಕೈಗೊಳ್ಳಲಿದ್ದಾರೆ. 65 ದಿನಗಳ ಈ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ 14 ರಾಜ್ಯಗಳು ಮತ್ತು 85 ಜಿಲ್ಲೆಗಳಲ್ಲಿ ಸಂಚರಿಸಲಿದ್ದಾರೆ. 6,200 ಕಿಲೋಮೀಟರ್ ದೂರವನ್ನು ಕ್ರಮಿಸಲಿದ್ದಾರೆ. ರಾಜ್ಯಗಳಲ್ಲಿ ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ