Site icon Vistara News

ಎಂಎಸ್‌ಪಿಗೂ, ಎಂಆರ್‌ಪಿಗೂ ವ್ಯತ್ಯಾಸ ತಿಳಿಯದ ರಾಹುಲ್‌ ಗಾಂಧಿ; ನೀವೇ ವಿಡಿಯೊ ನೋಡಿ

Rahul Gandhi

Rahul Gandhi thinks MRP means Minimum Retail Price; Here Is The Video

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಆಗಾಗ ನೀಡುವ ಹೇಳಿಕೆಗಳು, ಜನರ ಪ್ರಶ್ನೆಗಳಿಗೆ ನೀಡುವ ಉತ್ತರಗಳು ಹಾಸ್ಯ, ವ್ಯಂಗ್ಯಕ್ಕೆ ಗುರಿಯಾಗುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೇಳಿಕೆಗಳು ವೈರಲ್‌ ಆಗುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ರೈತರ ಬೆಳೆಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆ (Minimum Support Price) ಹಾಗೂ ಎಂಆರ್‌ಪಿ (Maximum Retail Price-ಗರಿಷ್ಠ ಚಿಲ್ಲರೆ ಬೆಲೆ)ಗೂ ಹೋಲಿಕೆ ಮಾಡುವ ಮೂಲಕ ಟೀಕೆಗಳಿಗೆ ಗುರಿಯಾಗಿದ್ದಾರೆ.

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ಭಾರತ್‌ ಜೋಡೋ ಯಾತ್ರೆಯ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ರಾಹುಲ್‌ ಗಾಂಧಿ ಮಾತನಾಡಿದರು. “ನೀವೊಂದು ಚಿಪ್ಸ್‌ ಪ್ಯಾಕೆಟ್‌ ಖರೀದಿಸಿದರೆ, ಅದರ ಮೇಲೆ ಬೆಲೆ ಬರೆದಿರುತ್ತದೆ ತಾನೇ? ನೀವು ಕೂಡ ನೋಡಿರುತ್ತೀರಿ ತಾನೇ? ನೀವು ಖರೀದಿಸಿದ ಈ ಕ್ಯಾಮೆರಾ ಮೇಲೆ ಬೆಲೆ ಮುದ್ರಿಸಿರುತ್ತಾರೆ. ಇದಕ್ಕಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಬರೆದಿರುತ್ತಾರೆ. ಈಗ ರೈತರು ಕೂಡ ಇಂತಹ ವ್ಯವಸ್ಥೆಯನ್ನೇ ಕೇಳುತ್ತಿದ್ದಾರೆ” ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಆ ಮೂಲಕ ಎಂಎಸ್‌ಪಿಗೂ, ಎಂಆರ್‌ಪಿಗೂ ಹೋಲಿಕೆ ಮಾಡಿದ್ದಾರೆ.

ರಾಹುಲ್‌ ಗಾಂಧಿ ವಿಡಿಯೊ ವೈರಲ್‌ ಆಗುತ್ತಲೇ ಜನ ಅವರ ಕಾಲೆಳೆದಿದ್ದಾರೆ. “ನನ್ನ ಜೀವಮಾನ ಪೂರ್ತಿ, ಎಂಆರ್‌ಪಿ ಎಂದರೆ ಗರಿಷ್ಠ ಚಿಲ್ಲರೆ ಬೆಲೆ ಎಂದೇ ಭಾವಿಸಿದ್ದೆ. ಆದರೆ, ರಾಹುಲ್‌ ಗಾಂಧಿ ಅವರಿಂದ ಇದು ಮಿನಿಮಮ್‌ ರಿಟೇಲ್‌ ಪ್ರೈಸ್‌ ಎಂಬುದಾಗಿ ಗೊತ್ತಾಯಿತು” ಎಂದು ಒಬ್ಬರು ಟಾಂಗ್‌ ಕೊಟ್ಟಿದ್ದಾರೆ. “ರಾಹುಲ್‌ ಗಾಂಧಿ ಅವರು ಎಂಆರ್‌ಪಿ ಎಂದರೆ ಮಿನಿಮಮ್‌ ರಿಟೇಲ್‌ ಪ್ರೈಸ್‌ ಎಂಬುದಾಗಿ ಹೇಳಿದ್ದಾರೆ. ಆದರೂ ಅವರ ಮಾತಿನ ಅರ್ಥವು, ಮಿದುಳಿನ ಶ್ರದ್ಧಾಂಜಲಿಯೇ ಆಗಿದೆ” ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: Narendra Modi: ಯುವಕರು ಕುಡುಕರು ಎಂದ ರಾಹುಲ್‌ ಗಾಂಧಿಗೆ ಮೋದಿ ತಿರುಗೇಟು!

“ಇನ್ನು ಮುಂದೆ ಎಂಆರ್‌ಪಿ ಎಂದರೆ ಮಿನಿಮಮ್‌ ರಿಟೇಲ್‌ ಪ್ರೈಸ್‌ ಹಾಗಾದರೆ? ಮತ್ತೆ, ರಾಹುಲ್‌ ಗಾಂಧಿ ಅವರು ಪ್ರಧಾನಿಯಾಗಲು ಬಯಸುತ್ತಾರೆ” ಎಂದು ಇನ್ನೊಬ್ಬರು ಕುಟುಕಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ರಾಹುಲ್‌ ಗಾಂಧಿ ಅವರಿಗೆ ತಿರುಗೇಟು ನೀಡಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಅವರು ಎಂಎಸ್‌ಪಿ ಕುರಿತು ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರಿಗೆ ಎಂಎಸ್‌ಪಿ ನೀಡಲಾಗುತ್ತದೆ ಎಂದು ಕೂಡ ಅವರು ಭರವಸೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version