ನವದೆಹಲಿ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಅವರು ಅಮೆರಿಕ (America) ಪ್ರವಾಸ ಕೈಗೊಳ್ಳುತ್ತಿದ್ದು, ಈ ವೇಳೆ ಅವರು ವಿಶ್ವವಿದ್ಯಾಲಯಗಳು, ಉದ್ಯಮಿಗಳು, ನಾಗರಿಕರು, ರಾಜಕಾರಣಿಗಳು ಮತ್ತು ಇತರ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ. ರಾಹುಲ್ ಗಾಂಧಿ ಅವರು ಸ್ಯಾನ್‌ಫ್ರಾನ್ಸಿಸ್ಕೋ, ವಾಷಿಂಗ್ಟನ್ ಡಿಸಿ ಮತ್ತು ನ್ಯೂಯಾರ್ಕ್ ನಗರಗಳಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ, ಸ್ಯಾನ್‌ಫ್ರಾನ್ಸಿಸ್ಕೋ ಮತ್ತು ನ್ಯೂಯಾರ್ಕ್‌ದಲ್ಲಿ ಅವರು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ (IOC) ಹೇಳಿದೆ. ರಾಹುಲ್ ಗಾಂಧಿ ಅವರ ಅಮೆರಿಕ ಪ್ರವಾಸವು ಮೇ 29ರಿಂದ ಆರಂಭವಾಗುತ್ತಿದೆ.
3500 ಕಿ.ಮೀ. ಭಾರತ್ ಜೋಡೋ ಯಾತ್ರೆಯ ಬಳಿಕ ರಾಹುಲ್ ಗಾಂಧಿ ಅವರು ಈ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆಯ ವೇಳೆ ಅವರು ಭಾರತದ ದಕ್ಷಿಣದ ತುತ್ತ ತುದಿ ಕನ್ಯಾಕುಮಾರಿಯಿಂದ ಉತ್ತರ ತುದಿ ಶ್ರೀನಗರದವರೆಗೆ ಪಾದಯಾತ್ರೆಯನ್ನು ಕೈಗೊಂಡಿದ್ದರು. ಧಾರ್ಮಿಕ ಧ್ರವೀಕರಣ ಹಾಗೂ ದ್ವೇಷ ರಾಜಕಾರಣದ ಹಿನ್ನೆಲೆಯಲ್ಲಿ ಅವರು ಯಾತ್ರೆಯನ್ನು ಕೈಗೊಂಡಿದ್ದರು.
ರಾಹುಲ್ ಗಾಂಧಿ ಅವರು ಭಾರತ ಮತ್ತು ವಿದೇಶಗಳಲ್ಲಿ ಮಾನವ ಹಕ್ಕುಗಳು, ಸ್ವಾತಂತ್ರ್ಯ, ನ್ಯಾಯ, ವೈವಿಧ್ಯತೆ, ಸಮಗ್ರತೆ, ಅಹಿಂಸೆ ಮತ್ತು ಸುಸ್ಥಿರತೆಯ ಸಾರ್ವತ್ರಿಕ ಮೌಲ್ಯಗಳ ಚಾಂಪಿಯನ್ ಆಗಿದ್ದಾರೆ ಎಂದು ಐಒಸಿ ಚೇರ್ಮನ್ ಸ್ಯಾಮ್ ಪಿತ್ರೋಡಾ ಅವರು ಹೇಳಿದ್ದಾರೆ.
ಐಒಸಿ ಅಧ್ಯಕ್ಷ ಸ್ಯಾಮ್ ಪಿತ್ರೋಡಾ, ಅಮೆರಿಕ ಮತ್ತು ವಿದೇಶಗಳಲ್ಲಿ ಭಾರೀ ಸಂಖ್ಯೆಯಲ್ಲಿ ಬೆಳೆಯುತ್ತಿರುವ ಭಾರತೀಯ ಸಮುದಾಯ ಸೇರಿದಂತೆ ವಿವಿಧ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಮಾಧ್ಯಮಗಳೊಂದಿಗೆ ಸಂಪರ್ಕ, ಸಂವಹನ ಮತ್ತು ಹೊಸ ಸಂಭಾಷಣೆಯನ್ನು ಪ್ರಾರಂಭಿಸುವುದು ರಾಹುಲ್ ಗಾಂಧಿ ಅವರ ಭೇಟಿಯ ಉದ್ದೇಶವಾಗಿದೆ. ಸ್ವಾತಂತ್ರ್ಯ, ಒಳಗೊಳ್ಳುವಿಕೆ, ಸುಸ್ಥಿರತೆ, ನ್ಯಾಯ, ಶಾಂತಿ ಮತ್ತು ಪ್ರಪಂಚದಾದ್ಯಂತ ಅವಕಾಶಗಳ ಮೇಲೆ ಕೇಂದ್ರೀಕರಿಸುವ ಮೂಲಕ ನೈಜ ಪ್ರಜಾಪ್ರಭುತ್ವದ ಹಂಚಿಕೆಯ ಮೌಲ್ಯಗಳು ಮತ್ತು ದೃಷ್ಟಿಕೋನವನ್ನು ಉತ್ತೇಜಿಸುವುದು ಅವರ ಭೇಟಿಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಗೆ ಕೊನೆಗೂ ಸಿಕ್ಕ ಸಾಮಾನ್ಯ ಪಾಸ್‌ಪೋರ್ಟ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಮೂರು ವರ್ಷದ ಅವಧಿಗೆ ಪಾಸ್‌ಪೋರ್ಟ್ ಸಿಕ್ಕಿದ್ದು, ಅವರು ಸೋಮವಾರದಿಂದ (May 29) ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಮಾನಹಾನಿ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾರಣ ಅವರು ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. ಹಾಗಾಗಿ, ಅವರು ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್‌ಅನ್ನು ಹಿಂದಿರುಗಿಸಿದ್ದಾರೆ. ಈಗ ಅವರಿಗೆ ಮೂರು ವರ್ಷದ ಅವಧಿಗೆ ಸಾಮಾನ್ಯ ಪಾಸ್‌ಪೋರ್ಟ್ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಿದ ಕಾರಣ 10 ವರ್ಷಗಳ ಕಾಲ ಸಾಮಾನ್ಯ ಪಾಸ್‌ಪೋರ್ಟ್ ಪಡೆಯಲು ಅನುಮತಿ ನೀಡುವಂತೆ ರಾಹುಲ್ ಗಾಂಧಿ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣ ವಿಚಾರಣೆ ನಡೆಸುತ್ತಿರುವ ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು. ಆದರೆ, ಖಾಸಗಿ ದೂರು ದಾಖಲಿಸಿರುವ ಬಿಜೆಪಿಯ ನಾಯಕ ಸುಬ್ರಮಣಿಯನ್ ಸ್ವಾಮಿ (Subramanian Swamy) ರಾಹುಲ್ ಗಾಂಧಿಗೆ ಪಾಸ್‌ಪೋರ್ಟ್ ನೀಡಲು ವಿರೋಧ ವ್ಯಕ್ತಪಡಸಿದ್ದರು.
ಪ್ರಕರಣದ ಕುರಿತು ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯವು, ರಾಹುಲ್ ಗಾಂಧಿ ಅವರಿಗೆ 10 ವರ್ಷಗಳ ಬದಲಿಗೆ ಮೂರು ವರ್ಷಕ್ಕೆ ಸಾಮಾನ್ಯ ಪಾಸ್‌ಪೋರ್ಟ್ ಪಡೆಯಲು ಅನುಮತಿ ನೀಡಿದೆ. ಅದರಂತೆ, ರಾಹುಲ್ ಗಾಂಧಿ ಅವರಿಗೆ ಮೂರು ವರ್ಷದ ಅವಧಿಗೆ ಪಾಸ್‌ಪೋರ್ಟ್ ಸಿಕ್ಕಿದೆ. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ ಹಣ ವರ್ಗಾವಣೆ ಮತ್ತು ಹಣ ದುರುಪಯೋಗವನ್ನು ಒಳಗೊಂಡ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ, ರಾಹುಲ್ ಗಾಂಧಿ ಅವರು ಪಾಸ್‌ಪೋರ್ಟ್ ಪಡೆಯಲು ನ್ಯಾಯಾಲಯವು ಅನುಮತಿ ನೀಡುವುದು ಅಗತ್ಯವಾಗಿತ್ತು.
ಈ ಸುದ್ದಿಯನ್ನೂ ಓದಿ: Rahul Gandhi: 3 ವರ್ಷದ ಅವಧಿಗೆ ಸಾಮಾನ್ಯ ಪಾಸ್‌ಪೋರ್ಟ್ ಪಡೆಯಲು ರಾಹುಲ್ ಗಾಂಧಿಗೆ ಅನುಮತಿ ನೀಡಿದ ದಿಲ್ಲಿ ಕೋರ್ಟ್
ರಾಹುಲ್ ಗಾಂಧಿ ಅವರು ಅನುಮತಿ ಕೋರಿ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಬಿಜೆಪಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಗೆ ಕೋರ್ಟ್ ತಿಳಿಸಿತ್ತು. ಆದರೆ, ರಾಹುಲ್ ಗಾಂಧಿ ಅವರಿಗೆ ಪಾಸ್‌ಪೋರ್ಟ್ ಪಡೆಯಲು ಎನ್‌ಒಸಿ ನೀಡಲು ಸ್ವಾಮಿ ವಿರೋಧ ವ್ಯಕ್ತಡಿಸಿದ್ದರು. ಆದರೂ ನ್ಯಾಯಾಲಯ ಮೂರು ವರ್ಷದ ಅವಧಿಗೆ ಪಾಸ್‌ಪೋರ್ಟ್ ನೀಡಿದೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.