ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತಮ್ಮ ಈ ಹಿಂದಿನ ʼಭಾರತ್ ಜೋಡೋ ಯಾತ್ರೆʼಯ (Bharat Jodo Yatra) ರೀತಿಯಲ್ಲಿ ಈಶಾನ್ಯ ರಾಜ್ಯವಾದ ಮಣಿಪುರದಿಂದ ಜನವರಿ 14ರಂದು ʼಭಾರತ್ ನ್ಯಾಯ ಯಾತ್ರೆʼಯನ್ನು (Bharat Nyay Yatra) ಆರಂಭಿಸಲಿದ್ದಾರೆ.
ಜನವರಿ 14ರಂದು ಆರಂಭವಾಗಲಿರುವ ಭಾರತ ನ್ಯಾಯ ಯಾತ್ರೆ ಮಾರ್ಚ್ 20ರಂದು ಮುಂಬಯಿಯಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ ವೇಣುಗೋಪಾಲ್ ಬುಧವಾರ ಪ್ರಕಟಿಸಿದ್ದಾರೆ.
ಡಿಸೆಂಬರ್ 21ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ರಾಹುಲ್ ಗಾಂಧಿ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆಯನ್ನು ಪ್ರಾರಂಭಿಸಬೇಕು ಎಂದು ಸರ್ವಾನುಮತದ ಅಭಿಪ್ರಾಯವನ್ನು ನೀಡಿತ್ತು. ಸಿಡಬ್ಲ್ಯೂಸಿಯ ಆಶಯಗಳನ್ನು ಈಡೇರಿಸಲು ರಾಹುಲ್ ಗಾಂಧಿ ಸಹ ಒಪ್ಪಿಕೊಂಡಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ʼಭಾರತ್ ನ್ಯಾಯ ಯಾತ್ರೆ’ ನಡೆಸಲು ನಿರ್ಧರಿಸಿದೆ. ಜನವರಿ 14ರಿಂದ ಮಾರ್ಚ್ 20ರವರೆಗೆ, ಮಣಿಪುರದಿಂದ ಮುಂಬಯಿಗೆ ಯಾತ್ರೆ ನಡೆಯಲಿದೆ ಎಂದು ವೇಣುಗೋಪಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
65 ದಿನಗಳ ಈ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ 14 ರಾಜ್ಯಗಳು ಮತ್ತು 85 ಜಿಲ್ಲೆಗಳಲ್ಲಿ ಸಂಚರಿಸಲಿದ್ದಾರೆ. 6,200 ಕಿಲೋಮೀಟರ್ ದೂರವನ್ನು ಕ್ರಮಿಸಲಿದ್ದಾರೆ. ರಾಜ್ಯಗಳಲ್ಲಿ ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿವೆ.
ಭಾರತ್ ಜೋಡೋ ಯಾತ್ರೆಗಿಂತ ಭಿನ್ನವಾಗಿ ಈ ಯಾತ್ರೆಯಲ್ಲಿ ಬಸ್ ಪ್ರಯಾಣ ಕೂಡ ಇರುತ್ತದಂತೆ. ಬಸ್ ಸೌಲಭ್ಯವು ದಾರಿಯಲ್ಲಿ ಪಾಲ್ಗೊಳ್ಳುವವರಿಗೆ ಗರಿಷ್ಠ ಅವಕಾಶ ನೀಡುತ್ತದೆ. ಪ್ರತಿ ದಿನವೂ ಒಂದು ಭಾಗ ನಡಿಗೆ ಇರುತ್ತದೆ.
ರಾಹುಲ್ ಗಾಂಧಿ ಕಳೆದ ವರ್ಷ ʼಭಾರತ್ ಜೋಡೋ ಯಾತ್ರೆʼ ನಡೆಸಿದ್ದರು. 2022ರ ಸೆಪ್ಟೆಂಬರ್ 7ರಂದು ಆರಂಭವಾದ ಈ ಯಾತ್ರೆ 2023 ಜನವರಿ 2023ರಂದು ಕೊನೆಗೊಂಡಿತ್ತು. ಭಾರತ ದಕ್ಷಿಣ ಭೂಶಿರದ ಕನ್ಯಾಕುಮಾರಿಯಲ್ಲಿ ಆರಂಭವಾಗಿ ಉತ್ತರ ತುದಿಯ ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಂಡಿತ್ತು. 136 ದಿನಗಳಲ್ಲಿ 4,080 ಕಿಲೋಮೀಟರ್ ದೂರ ಕ್ರಮಿಸಲಾಗಿತ್ತು. ಸಾವಿರಾರು ಮಂದಿ ಇದರಲ್ಲಿ ಪಾಲ್ಗೊಂಡಿದ್ದರು. ಮುಂದಿನ ವರ್ಷ ಆಗಮಿಸಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಸಲದ ʼಭಾರತ ನ್ಯಾಯ ಯಾತ್ರೆʼ ಆಯೋಜಿಸಲಾಗಿದೆ.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ʼಇಂಡಿಯಾʼ ನಾಯಕರಿಂದಲೇ ಬ್ರೇಕ್!