Site icon Vistara News

Rahul Gandhi: ಶನಿವಾರ ಸರ್ಕಾರಿ ಬಂಗಲೆ ಖಾಲಿ ಮಾಡಲಿರುವ ‘ಅನರ್ಹ’ ರಾಹುಲ್ ಗಾಂಧಿ, ಮುಂದೇನು?

Rahul Gandhi to vacate Government bungalow on Saturday

ನವದೆಹಲಿ: 2019ರ ಮಾನಹಾನಿ ಪ್ರಕರಣದ ಶಿಕ್ಷೆಗೆ ಸೂರತ್ ಸೆಷನ್ ಕೋರ್ಟ್ ತಡೆ ನೀಡಲು ನಿರಾಕರಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ದಿಲ್ಲಿಯ 12 ತುಗಲಕ್ ಲೇನ್‌ನಲ್ಲಿ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುತ್ತಿದ್ದಾರೆ. ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ್ದರಿಂದ ರಾಹುಲ್ ಗಾಂಧಿ ಅವರು ಸಂಸತ್ ಸದಸ್ಯತ್ವ ಕೂಡ ರದ್ದಾಗಿದೆ. ಹಾಗಾಗಿ, ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಲೋಕಸಭೆ ಕಾರ್ಯದರ್ಶಿ ಅವರು ನೋಟಿಸ್ ನೀಡಿದ್ದರು. ರಾಹುಲ್ ಗಾಂಧಿ ಅವರು ಕೇರಳದ ವಯನಾಡ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಸರ್ಕಾರಿ ಬಂಗಲೆ ಖಾಲಿ ಮಾಡಲು ಏಪ್ರಿಲ್ 22 ಕೊನೆಯ ದಿನವಾಗಿದೆ. ಹಾಗಾಗಿ ರಾಹುಲ್ ಗಾಂಧಿ ಅವರು ತಮ್ಮ ನಿವಾಸವನ್ನು ಖಾಲಿ ಮಾಡುವ ಪ್ರಕ್ರಿಯೆಯನ್ನು ಏಪ್ರಿಲ್ 14ರಿಂದಲೇ ಆರಂಭಿಸಿದ್ದರು. ಏಪ್ರಿಲ್ 21, ಶುಕ್ರವಾರ ಸಂಜೆ ಉಳಿದ ಸಾಮಾನು ಸರಂಜಾಮುಗಳನ್ನು ಮತ್ತೊಂದೆಡೆಗೆ ತೆಗೆದುಕೊಂಡು ಹೋಗಲಾಯಿತು. ಶನಿವಾರ ಅವರು ಅಧಿಕೃತವಾಗಿ ಸರ್ಕಾರಿ ಬಂಗಲೆಯನ್ನು ಲೋಕಸಭೆ ಕಾರ್ಯದರ್ಶಿ ಅವರಿಗೆ ಅವರಿಗೆ ಒಪ್ಪಿಸಲಿದ್ದಾರೆ.

2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ಆಯೋಜಿಸಲಾಗಿದ್ದ ರ್ಯಾಲಿ ವೇಳೆ ಎಲ್ಲ ಕಳ್ಳರ ಹೆಸರು ಮೋದಿ ಎಂಬ ಅಡ್ಡಹೆಸರು ಸಾಮನ್ಯವಾಗಿರುವುದು ಹೇಗೆ ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ವಿರುದ್ಧ ಬಿಜೆಪಿಯ ಪೂರ್ಣೇಶ್ ಮೋದಿ ಎಂಬುವವರು ಸೂರತ್ ನ್ಯಾಯಾಲಯದಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಮಾರ್ಚ್ 23ರಂದು ಸೂರತ್ ನ್ಯಾಯಾಲಯವು ತೀರ್ಪು ನೀಡಿ, ರಾಹುಲ್ ಗಾಂಧಿ ದೋಷಿ ಎಂದು ಹೇಳಿತ್ತು. ಅಲ್ಲದೇ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.

Rahul Gandhi: ಸೂರತ್ ಸೆಷನ್ ಕೋರ್ಟ್‌ನಲ್ಲಿ ರಾಹುಲ್ ಗಾಂಧಿಗೆ ಹಿನ್ನಡೆ

2019ರಲ್ಲಿ ಮೋದಿ ಉಪನಾಮಕ್ಕೆ ಅವಮಾನ ಮಾಡಿದ ಕೇಸ್​​ನಲ್ಲಿ ಸೂರತ್​ ಕೋರ್ಟ್​​ನಿಂದ ದೋಷಿ ಎಂದು ಪರಿಗಣಿತರಾಗಿ, ಸಂಸದನ ಸ್ಥಾನವನ್ನೂ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಯವರು ‘ಕೆಳ ನ್ಯಾಯಾಲಯ ತಮಗೆ ನೀಡಿದ್ದ ಶಿಕ್ಷೆಗೆ ತಡೆ ನೀಡುವಂತೆ ಸೂರತ್​ ಸೆಷನ್ಸ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈಗ ಅಲ್ಲಿಯೂ ರಾಹುಲ್ ಗಾಂಧಿಗೆ ಹಿನ್ನಡೆಯಾಗಿದೆ. ಅವರ ಅರ್ಜಿಯನ್ನು ಸೆಷನ್ಸ್​ ಕೋರ್ಟ್​ ವಜಾಗೊಳಿಸಿದೆ. ಇದು ರಾಹುಲ್ ಗಾಂಧಿಯವರಿಗೆ ಸಂಕಷ್ಟ ತಂದಿಟ್ಟಿದ್ದು, ಅವರೀಗ ಮತ್ತೆ ಮೇಲ್ಮನವಿ ಸಲ್ಲಿಸಬೇಕಾಗಿದೆ.

ಇದನ್ನೂ ಓದಿ: Twitter Blue Tick: ಸಿಎಂ ಯೋಗಿ, ಶಾರುಖ್ ಖಾನ್​, ರಾಹುಲ್ ಗಾಂಧಿ ಸೇರಿ ಹಲವರ ಅಕೌಂಟ್​​ನಿಂದ ಬ್ಲ್ಯೂಟಿಕ್​ ಕಿತ್ತೆಸೆದ ಟ್ವಿಟರ್​; ಹಣ ತುಂಬಿಲ್ಲವಂತೆ!

ಶಿಕ್ಷೆಗೆ ತಡೆಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಹೆಚ್ಚುವರಿ ಸೆಷನ್ಸ್​ ಜಡ್ಜ್​ ಆರ್​ಪಿ ಮೊಗೇರಾ ಅವರು ಏಪ್ರಿಲ್​ 13ರಂದು ವಿಚಾರಣೆ ನಡೆಸಿ, ಏಪ್ರಿಲ್​ 20ಕ್ಕೆ ಶಿಕ್ಷೆ ಕಾಯ್ದಿರಿಸಿದ್ದರು. ರಾಹುಲ್‌ ಗಾಂಧಿ ಪರ ವಾದ ಮಂಡಿಸಿದ ಚೀಮಾ, “ರಾಹುಲ್‌ ಗಾಂಧಿ ಅವರು ನೀಡಿದ ಹೇಳಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಬೇಕಿದೆ. ಅವರು ಆಡಿದ ಮಾತುಗಳನ್ನು ಬೇರೆ ಅರ್ಥದಲ್ಲಿ ಬಿಂಬಿಸಲಾಗಿದೆ. ನರೇಂದ್ರ ಮೋದಿ ಅವರನ್ನು ಟೀಕಿಸಿದ್ದನ್ನೇ ಮಾನಹಾನಿ ರೀತಿ ಬಿಂಬಿಸಲಾಗಿದೆ. ಹಾಗಾಗಿ, ಸೂರತ್‌ ನ್ಯಾಯಾಲಯದ ತೀರ್ಪಿನ ಮರುಪರಿಶೀಲನೆ ಅಗತ್ಯವಿದೆ” ಎಂದು ಹೇಳಿದ್ದರು. ವಾದ-ಪ್ರತಿವಾದವನ್ನೆಲ್ಲ ಆಲಿಸಿದ್ದ ಜಡ್ಜ್​ ತೀರ್ಪು ಕೊಟ್ಟಿರಲಿಲ್ಲ. ಇಂದು ಆ ಅರ್ಜಿಯನ್ನೇ ವಜಾಗೊಳಿಸಿದ್ದಾರೆ. ಈ ಮೂಲಕ ಶಿಕ್ಷೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Exit mobile version