Site icon Vistara News

Vistara Exclusive | ಹೈಕೋರ್ಟ್‌ ವಿಡಿಯೋ ಅಪ್‌ಲೋಡ್‌ ಮಾಡಿ ನಿಯಮ ಉಲ್ಲಂಘಿಸಿದ ರಾಹುಲ್‌ ಗಾಂಧಿ

rahul gandhi tweet on sandesh 1

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರು ಎಸಿಬಿ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಆನ್‌ಲೈನ್‌ನಲ್ಲಿಹಂಚಿಕೊಳ್ಳುವ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನ್ಯಾಯಾಂಗ ನಿಂದನೆಗೆ ಗುರಿಯಾಗುವ ಅಪಾಯ ಎದುರಿಸುತ್ತಿದ್ದಾರೆ.

ಜುಲೈ 4ರಂದು ಬೆಂಗಳೂರು ನಗರ ಡಿಸಿ ಕಚೇರಿಯ ಉಪತಹಸೀಲ್ದಾರ್‌ ಪಿ. ಎಸ್‌. ಮಹೇಶ್‌ ಜಾಮೀನು ಅರ್ಜಿಯ ವಿಚಾರಣೆ ನಡೆಸುವ ಸಂದರ್ಭದಲ್ಲಿ ಸಿಟ್ಟಿಗೆದ್ದಿದ್ದ ನ್ಯಾಯಮೂರ್ತಿ ಸಂದೇಶ್‌, ʻಅಕ್ರಮ ಪ್ರಶ್ನಿಸಿರುವುದಕ್ಕೆ ನನಗೆ ವರ್ಗಾವಣೆ ಬೆದರಿಕೆ ಬಂದಿದೆ. ಈ ಹಿಂದೆ ನ್ಯಾಯಾಧೀಶರೊಬ್ಬರನ್ನು ವರ್ಗಾಯಿಸಲಾಗಿದೆ ಎಂದು ಹೇಳಿ ನನಗೆ ಬೆದರಿಕೆ ಹಾಕಲಾಗಿದೆ. ಎಸಿಬಿಯ ಎಡಿಜಿಪಿ ಎಲ್ಲರಿಗಿಂತಲೂ ಪವರ್‌ಫುಲ್‌ ಅಂತೆʼ ಎಂದು ಅವರು ಹೇಳಿದ್ದರು.

ʼಬೆಕ್ಕಿಗೆ ನಾನೇ ಗಂಟೆ ಕಟ್ಟುತ್ತೇನೆ. ಇದಕ್ಕೆ ನಾನು ಸಿದ್ಧನಿದ್ದೇನೆ. ನನಗೆ ಯಾರ ಹೆದರಿಕೆಯೂ ಇಲ್ಲ. ಜಡ್ಜ್‌ ಆದ್ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನ್ಯಾಯಮೂರ್ತಿ ಹುದ್ದೆ ಹೋದರೂ ಚಿಂತೆಯಿಲ್ಲ. ನಾನು ರೈತನ ಮಗ, ಉಳುಮೆ ಮಾಡಿ ಜೀವನ ಸಾಗಿಸಲು ಸಿದ್ಧನಾಗಿದ್ದೇನೆʼʼ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಸೋಮವಾರ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ವೇಳೆ ಹೇಳಿರುವ ವಿಡಿಯೋ, ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿತ್ತು.

ಈ ವಿಡಿಯೋವನ್ನು ತಮ್ಮ ಟ್ವಿಟರ್‌ ಖಾತೆ (@RahulGandhi) ಮೂಲಕ ರಾಹುಲ್‌ ಗಾಂಧಿ ಹಂಚಿಕೊಂಡಿದ್ದಾರೆ. ʻಕರ್ನಾಟಕ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆ ಎಳೆದದ್ದಕ್ಕೆ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯೊಬ್ಬರಿಗೆ ಬೆದರಿಗೆ ಒಡ್ಡಲಾಗಿದೆ. ಒಂದರ ನಂತರ ಮತ್ತೊಂದು ಸಂಸ್ಥೆಗಳನ್ನು ನಾಶ ಮಾಡುತ್ತಿದೆ ಬಿಜೆಪಿ. ನಿರ್ಭೀತರಾಗಿ ಕೆಲಸ ಮಾಡುವವರಿಗೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕು. ಧೈರ್ಯವಾಗಿರಿʼ ಎಂದಿದ್ದಾರೆ.

ರಾಹುಲ್‌ ಗಾಂಧಿ ಅಪ್‌ಲೋಡ್‌ ಮಾಡಿರುವ ವಿಡಿಯೋ ಸ್ಕ್ರೀನ್‌ಶಾಟ್‌

ನ್ಯಾಯಾಲಯ ವಿಚಾರಣೆ ಅಪಾಯ

ಹೈಕೋರ್ಟ್‌ ವಿಚಾರಣೆಯನ್ನು ಕಳೆದ ವರ್ಷದಿಂದ ಊಟ್ಯೂಬ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ಮಾಡಲಾಗುತ್ತಿದೆ. ಜೂಮ್‌ ಪ್ಲಾಟ್‌ಫಾರಂನಲ್ಲಿ ನಡೆಯುವ ವಿಚಾರಣೆಯ ನೇರಪ್ರಸಾರವನ್ನು ಹೈಕೋರ್ಟ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ನೀಡಲಾಗುತ್ತದೆ. ಆದರೆ ಈ ವಿಡಿಯೋಗಳ ಕುರಿತು ನ್ಯಾಯಾಲಯ ಕಠಿಣ ನಿಯಮ ರೂಪಿಸಿದೆ.

ಈ ಕುರಿತ ಆದೇಶದ 2ನೇ ಅಂಶದಲ್ಲಿ ಈ ರೀತಿ ತಿಳಿಸಲಾಗಿದೆ. 2 (i) ಅಂಶದಲ್ಲಿ ʻಮುದ್ರಣ, ಎಲೆಕ್ಟ್ರಾನಿಕ್‌ ಮಾಧ್ಯಮ, ಸಾಮಾಜಿಕ ಜಾಲತಾಣ ಸೇರಿದಂತೆ ಯಾವುದೇ ವ್ಯಕ್ತಿ, ಅಥವಾ ಸಂಸ್ಥೆಯೂ ವಿಡಿಯೋಗಳನ್ನು ರೆಕಾರ್ಡ್‌ ಮಾಡುವುದು, ಹಂಚುವುದನ್ನು ನಿಷೇಧಿಸಲಾಗಿದೆ. ನೇರಪ್ರಸಾರ ಮಾಡಿದ ವಿಡಿಯೋಗಳು ನ್ಯಾಯಾಲಯದ ಆಸ್ತಿಯಾಗಿರುತ್ತವೆ. ಈ ಆದೇಶವು ಎಲ್ಲ ಮೆಸೇಜಿಂಗ್‌ ಪ್ಲಾಟ್‌ಫಾರಂಗಳಿಗೂ (ವಾಟ್ಸ್‌ಆ್ಯಪ್, ಟೆಲಿಗ್ರಾಂ, ಇತ್ಯಾದಿ…) ಅನ್ವಯವಾಗುತ್ತದೆ. ಈ ನಿಯಮಕ್ಕೆ ವಿರುದ್ಧವಾಗಿ ಯಾರೇ ವರ್ತನೆ ಮಾಡಿದರೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಭಾರತೀಯ ಹಕ್ಕುಸ್ವಾಮ್ಯ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ, ನ್ಯಾಯಾಂಗ ನಿಂದನೆ ಸೇರಿ ಇನ್ನಿತರ ಕಾನೂನಿಗೆ ಅನುಗುಣವಾಗಿ ಶಿಕ್ಷೆಗೆ ಒಳಪಡಿಸಲಾಗುತ್ತದೆʼ

(ii) ನೇರಪ್ರಸಾರ ವಿಡಿಯೋಗಳನ್ನು ವೀಕ್ಷಿಸುವ ಪ್ರತಿಯೊಬ್ಬರೂ ಈ ನಿಯಮಗಳಿಗೆ ಬದ್ಧವಾಗಿರಬೇಕು

(iii) ನ್ಯಾಯಾಲಯದ ಪೂರ್ವ ಅನುಮತಿ ಇಲ್ಲದೆಯೇ ವಿಡಿಯೋವನ್ನು ಮರುರೂಪಿಸುವುದಾಗಲಿ, ಹಂಚುವುದಾಗಲಿ, ಅಪ್‌ಲೋಡ್‌ ಮಾಡುವುದಾಗಲಿ, ಮಾರ್ಪಡಿಸುವುದಾಗಲಿ, ಪ್ರಕಟಿಸುವುದಾಗಲಿ, ಯಾವುದೇ ರೂಪದಲ್ಲಿ ಮರು ಪ್ರಕಟಿಸುವುದಾಗಲಿ ಮಾಡುವಂತಿಲ್ಲ.

ನೇರಪ್ರಸಾರದ ವಿಡಿಯೋ ಕುರಿತು ಹೈಕೋರ್ಟ್‌ ನಿಯಮ

ವಿಡಿಯೋಗಳನ್ನು ಅಕಡೆಮಿಕ್‌ ಉದ್ದೇಶಗಳಿಗೆ, ತರಬೇತಿಗಾಗಿ ಹಾಗೂ ಶೈಕ್ಷಣಿಕ ಉದ್ದೇಶಗಳಿಗೆ ನ್ಯಾಯಾಲಯದ ಅನುಮತಿ ಮೇರೆಗೆ ಬಳಕೆ ಮಾಡಿಕೊಳ್ಳಬಹುದು. ಜಾಹೀರಾತು ಸೇರಿ ಇನ್ನಿತರೆ ಯಾವುದೇ ಕಾರಣಕ್ಕೆ ಈ ವಿಡಿಯೋಗಳನ್ನೂ ಬಳಸುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದ್ದರೂ ರಾಹುಲ್‌ ಗಾಂಧಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನ್ಯಾಯಾಲಯದ ವಿಚಾರಣೆ ಎದುರಿಸುವ ಅಪಾಯವನ್ನು ಎದುರಿಸುವ ಅಪಾಯವಿದೆ.

Exit mobile version