ತಿರುವನಂತಪುರಂ: ಕೇರಳದ ವಯಾನಾಡ್‌ನಲ್ಲಿರುವ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕಚೇರಿ ಧ್ವಂಸಗೊಂಡಿದೆ (Rahul Gandhi Wayanad office Attacked). ಕಚೇರಿ ಮೇಲೆ ನಡೆದ ದಾಳಿಯಲ್ಲಿ ಸ್ಟುಡೆಂಟ್ ಫೆಡರೇಶನ್ ಆಫ್ ಇಂಡಿಯಾದ ಕೈವಾಡವಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಈ ಬಗ್ಗೆ ಎಎನ್‌ಐ ಜತೆ ಮಾತನಾಡಿದ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್, ಇಂದು ಮಧ್ಯಾಹ್ನ 3ಗಂಟೆ ಹೊತ್ತಿಗೆ ಎಸ್‌ಎಫ್‌ಐ ಕಾರ್ಯಕರ್ತರು ಮತ್ತು ನಾಯಕರು ಸಂಸದ ರಾಹುಲ್ ಗಾಂಧಿಯವರ ಕಚೇರಿಗೆ ನುಗ್ಗಿದರು. ಅಲ್ಲಿದ್ದ ಸಿಬ್ಬಂದಿ, ಕೆಲಸಗಾರರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದರು ಎಂದು ಆರೋಪಿಸಿದ್ದಾರೆ.
ಪೊಲೀಸರ ಎದುರೇ ಈ ಗಲಾಟೆ-ಧ್ವಂಸ ಕಾರ್ಯ ನಡೆದಿದೆ. ಇದು ನೂರಕ್ಕೆ ನೂರರಷ್ಟು ಸಿಪಿಎಂ ನಾಯಕರ ಪಿತೂರಿ. ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಇ.ಡಿ. ಅಟ್ಯಾಕ್ ಮಾಡಿಸಿದ್ದಾರೆ. ಅದೇ ದಾರಿಯಲ್ಲಿ ಸಿಪಿಐಎಂ ಹೋಗುತ್ತಿದೆ. ಪಕ್ಷದ ಮುಖಂಡ, ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಈ ಬಗ್ಗೆ ಗಮನ ಹರಿಸಬೇಕು. ಆಕ್ರಮಣಕಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವೇಣುಗೋಪಾಲ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಟ್ವೀ ಮಾಡಿ, ವಿಡಿಯೋ ಕೂಡ ಶೇರ್ ಮಾಡಿಕೊಂಡಿದ್ದಾರೆ. ʼಕೇರಳದ ಸಿಪಿಐ(ಎಂ) ಪಕ್ಷದ ವಿದ್ಯಾರ್ಥಿ ಘಟಕ ಎಸ್‌ಎಫ್‌ಐ ಗೂಂಡಾಗಳು ಇಂದು ರಾಹುಲ್ ಗಾಂಧಿಯವರ ವಯಾನಾಡ್ ಕಚೇರಿಯನ್ನು ಧ್ವಂಸ ಮಾಡಿದ್ದಾರೆ. ಪಿಣರಾಯಿ ವಿಜಯನ್ ಮತ್ತು ಸೀತಾರಾಮ್ ಯೆಚೂರಿ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಡೀ ಕಚೇರಿಯಲ್ಲಿರುವ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ವಿಡಿಯೋದಲ್ಲಿ ನೋಡಬಹುದು.
ವಯಾನಾಡ್ ಕೇರಳದ ಒಂದು ಗುಡ್ಡಗಾಡು ಪ್ರದೇಶವಾಗಿದ್ದು, ರಾಹುಲ್ ಗಾಂಧಿ ಇಲ್ಲಿನ ಸಂಸದ. ಅರಣ್ಯ ಪ್ರದೇಶ ಸುತ್ತ ಬಫರ್ ವಲಯ ನಿರ್ಮಾಣ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ರಾಹುಲ್ ಗಾಂಧಿ ವಿರುದ್ಧ ಇಂದು ಎಸ್‌ಎಫ್‌ಐನ ಸುಮಾರು ೮೦-೧೦೦ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಆಕ್ರೋಶಿತರ ಗುಂಪು ಕಚೇರಿಗೆ ನುಗ್ಗಿ ಧ್ವಂಸ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿ ಸದ್ಯ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಸುಸ್ತಾಯಿತು ಎಂದು ಶೇ.20 ರಷ್ಟು ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಉತ್ತರಿಸಲೇ ಇಲ್ಲ; ಕೌಂಟರ್ ಕೊಟ್ಟ ಇ ಡಿ