Site icon Vistara News

Rahul Gandhi | ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷ, ಅವರಂಥ ಪ್ರಭಾವಿ ನಾಯಕರು ಯಾರಿದ್ದಾರೆ? ಖರ್ಗೆ ಪ್ರಶ್ನೆ

ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಎಐಸಿಸಿ ಅಧ್ಯಕ್ಷರಾಗಲು ರಾಹುಲ್ ಗಾಂಧಿ (Rahul Gandhi) ಅವರು ಹಿಂಜರಿಯುತ್ತಿದ್ದರೂ ಕಾಂಗ್ರೆಸ್‌ನ ಬಹುತೇಕ ನಾಯಕರು ರಾಹುಲ್ ಅವರ ಪರವಾಗಿಯೇ ಬ್ಯಾಟ್ ಬೀಸುತ್ತಿದ್ದಾರೆ. ರಾಹುಲ್ ಗಾಂಧಿ ಅವರೇ ಎಐಸಿಸಿ ಅಧ್ಯಕ್ಷರಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಕರ್ನಾಟಕದ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು, ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗಿ ಹಿಂದಿರುಗಲಿದ್ದಾರೆ. ಯಾಕೆಂದರೆ, ರಾಹುಲರಂತೆ ಇಡೀ ಭಾರತವನ್ನು ತಲುಪಬಲ್ಲ ಬೇರೆ ಯಾವ ನಾಯಕರೂ ಕಾಂಗ್ರೆಸ್‌ನಲ್ಲಿ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

”ರಾಹುಲ್ ಜನಪ್ರಿಯ ನಾಯಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅವರನ್ನು ಎಲ್ಲರೂ ಸ್ವೀಕರಿಸುತ್ತಾರೆ. ಈ ರೀತಿಯ ವ್ಯಕ್ತಿತ್ವದ ಪಕ್ಷದಲ್ಲಿ ಯಾವ ನಾಯಕರಿದ್ದಾರೆ” ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಲ್ಲಿ ಪ್ರಶ್ನಿಸಿದ್ದಾರೆ. ಪಕ್ಷದೊಳಗಿನ ಹಿರಿಯ ನಾಯಕರ ಒತ್ತಡದಿಂದಾಗಿ ಸೋನಿಯಾ ಗಾಂಧಿ ಮತ್ತೆ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡುವಂತಾಯಿತು. ರಾಹುಲ್ ಗಾಂಧಿ ಅವರಿಗೂ ಇದೇ ರೀತಿಯ ಒತ್ತಡವಿದ್ದು, ನಾಯಕತ್ವವಹಿಸಿಕೊಳ್ಳುವಂತೆ ಕೇಳಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ಅವರಿಗೆ ಪರ್ಯಾಯ ನಾಯಕರು ಯಾರಿದ್ದಾರೆಂದು ಹೇಳಿ ನೋಡೋಣ. ಪಕ್ಷ ಹಾಗೂ ದೇಶದ ಹಿತಾಸಕ್ತಿ ಕಾಪಾಡುವುದ್ಕಕಾಗಿ ಮತ್ತು ದೇಶವನ್ನು ಒಂದಾಗಿಡಲು, ಬಿಜೆಪಿ-ಆರ್‌ಎಸ್ಎಸ್ ವಿರುದ್ಧ ಹೋರಾಡಲು ರಾಹುಲ್ ಗಾಂಧಿ ಅವರಿಗೆ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುವಂತೆ ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಖರ್ಗೆ ಹೇಳಿದ್ದಾರೆ.

ಚುನಾವಣೆಗೆ ದಿನಾಂಕ ನಿಗದಿ
ಎಐಸಿಸಿ ಅಧ್ಯಕ್ಷ ಸ್ಥಾನ ಚುನಾವಣೆಗೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ನ ನೀತಿ ನಿರೂಪಣೆಯ ಹೊಣೆಯನ್ನು ಹೊತ್ತಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯು ಭಾನುವಾರ ಆನ್‌ಲೈನ್ ಮೂಲಕ ಸಭೆ ನಡೆಸಿ, ಶೀಘ್ರವೇ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ದಿನಾಂಕವನ್ನು ನಿಗದಿ ಮಾಡುವ ಸಾಧ್ಯತೆ ಇದೆ.

ಕಾಂಗ್ರೆಸ್ ತೊರೆದ ಆಜಾದ್
ಕಾಂಗ್ರೆಸ್​ನ ಹಿರಿಯ ನಾಯಕ, ಮಾಜಿ ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್​ನ್ನು ಸಂಪೂರ್ಣವಾಗಿ ತೊರೆದಿದ್ದಾರೆ. ಇತ್ತೀಚೆಗೆ ಜಮ್ಮು-ಕಾಶ್ಮೀರ ಪ್ರಚಾರ ಸಮಿತಿ ಅಧ್ಯಕ್ಷನ ಸ್ಥಾನವನ್ನು ಅವರಿಗೆ ವಹಿಸಲಾಗಿತ್ತು. ಆದರೆ ಹುದ್ದೆಗೆ ಏರಿದ ಕೆಲವೇ ಹೊತ್ತಲ್ಲಿ ರಾಜೀನಾಮೆ ಕೊಟ್ಟಿದ್ದರು. ಅದರ ಬೆನ್ನಲ್ಲೇ ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವವನ್ನೇ ತೊರೆದಿದ್ದಾರೆ.

ಕಾಂಗ್ರೆಸ್​ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಗುಲಾಂ ನಬಿ ಆಜಾದ್​, ‘ಕಾಂಗ್ರೆಸ್​​ನಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ. ಹೊಗಳುಭಟ್ಟರು, ಅನನುಭವಿಗಳು ಹೆಚ್ಚಾಗುತ್ತಿದ್ದಾರೆ. ಈ ವಾತಾವರಣ ಹಿಂಸೆ ತರುತ್ತಿದೆ’ ಎಂದು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ, ರಾಹುಲ್​ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕಾಂಗ್ರೆಸ್​​ನ ರಾಜಕೀಯ ಪ್ರಭಾವ ತಗ್ಗುತ್ತಿರುವುದಕ್ಕೆ, ಚುನಾವಣೆಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವುದಕ್ಕೆ ರಾಹುಲ್​ ಗಾಂಧಿ ಅಪ್ರಬುದ್ಧತೆಯೇ ಕಾರಣ’ ಎಂದಿದ್ದಾರೆ.

ಇದನ್ನು ಓದಿ | Rahul Gandhi | ಪಾದಯಾತ್ರೆಗೆ ರಾಹುಲ್ ತಯಾರಿ, ಸ್ಥಾನ ತೊರೆಯುತ್ತಿರುವ ಹಿರಿಯರು

Exit mobile version