Site icon Vistara News

Bharat Jodo Nayay Yatra: ಅಸ್ಸಾಂನಲ್ಲಿ ರಾಹುಲ್‌ ಯಾತ್ರೆಗೆ ತಡೆ; ಪೊಲೀಸ್-‌ ಕಾಂಗ್ರೆಸ್‌ ಕಾರ್ಯಕರ್ತರ ಚಕಮಕಿ

nyay yatra assam

ಗುವಾಹಟಿ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ (Rahul Gandhi) ನೇತೃತ್ವದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯನ್ನು (Bharat Jodo Nayay Yatra) ಇಂದು ಅಸ್ಸಾಂನ ಗುವಾಹಟಿಗೆ ಪ್ರವೇಶಿಸುವ ಸಂದರ್ಭದಲ್ಲಿ ತಡೆದ ಪರಿಣಾಮ, ಪೊಲೀಸರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಚಕಮಕಿ ಉಂಟಾಗಿದೆ.

ನಿನ್ನೆ ಅಸ್ಸಾಂನ ದೇವಾಲಯವೊಂದಕ್ಕೆ ರಾಹುಲ್‌ ಗಾಂಧಿ ಹಾಗೂ ಬೆಂಬಲಿಗರ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಅದಕ್ಕೂ ಹಿಂದಿನ ದಿನ ನಾಗಾಂವ್‌ನ ರಸ್ತೆಬದಿಯ ಉಪಾಹಾರ ಗೃಹದಲ್ಲಿ ರಾಹುಲ್‌ ಗಾಂಧಿ ಇದ್ದಾಗ ವಿರೋಧಿ ಗುಂಪೊಂದು ಅವರ ವಿರುದ್ಧ ಘೋಷಣೆಗಳನ್ನು ಕೂಗಿತ್ತು. ಇದೀಗ ಗುವಾಹಟಿ ಗಡಿಯಲ್ಲಿ ಯಾತ್ರೆಯನ್ನು ತಡೆಯಲಾಗಿದ್ದು, ಕಾರ್ಯಕರ್ತರನ್ನು ಇನ್ನಷ್ಟು ಕೆರಳಿಸಿದೆ. ಅಸ್ಸಾಂ ಸರ್ಕಾರ ನ್ಯಾಯ ಯಾತ್ರೆಯನ್ನು ಹಳಿ ತಪ್ಪಿಸಲು ಯತ್ನಿಸುತ್ತಿದ್ದು, ಕೇಂದ್ರ ಸರ್ಕಾರದ ಪ್ರಚೋದನೆಯಂತೆ ನಡೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ನಿನ್ನೆ ದೇವಾಲಯ ಪ್ರವೇಶ ನಿರಾಕರಿಸಿದ್ದನ್ನು ವಿರೋಧಿಸಿ ರಾಹುಲ್‌ ಪ್ರತಿಭಟನೆಗೆ ಮುಂದಾಗಿದ್ದರು. ಇಂದು ಪಕ್ಷ ಯಾತ್ರೆಯನ್ನು ಪುನರಾರಂಭಿಸಿತ್ತು. ಮಂಗಳವಾರ ಗುವಾಹಟಿಯ ಕಡೆಗೆ ಬರಲು ಯತ್ನಿಸುತ್ತಿದ್ದ ರಾಹುಲ್‌ ಗಾಂಧಿ ಹಾಗೂ ಸುಮಾರು 5,000 ಕಾಂಗ್ರೆಸ್ ಕಾರ್ಯಕರ್ತರನ್ನು ತಡೆಹಿಡಿಯಲಾಯಿತು. ತಡೆದಿದ್ದರಿಂದ ಇದರ ಬೆನ್ನಲ್ಲೇ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ರಾಜ್ಯದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಕಾಂಗ್ರೆಸ್ ರ್ಯಾಲಿಯು ಗುವಾಹಟಿಯ ಮುಖ್ಯ ರಸ್ತೆಗಳಲ್ಲಿ ನಡೆಯದಂತೆ ತಡೆಯಲು ಅಸ್ಸಾಂ ಪೊಲೀಸರನ್ನು ನಿಯೋಜಿಸಲಾಗಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಸರ್ಕಾರವು ಯಾತ್ರೆಯಲ್ಲಿ ರಸ್ತೆ ತಡೆಗಳನ್ನು ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.

ಗುವಾಹಟಿಯ ಮುಖ್ಯ ರಸ್ತೆಗಳ ಮೂಲಕ ಯಾತ್ರೆಗೆ ಈ ಹಿಂದೆಯೇ ಅನುಮತಿ ನಿರಾಕರಿಸಲಾಗಿತ್ತು. ಯಾತ್ರೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಚಲಿಸಲು ಅವಕಾಶ ನೀಡಿದರೆ ಸಂಚಾರ ಅಸ್ತವ್ಯಸ್ತವಾಗಬಹುದು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಮಾರ್ಗದ ಮೂಲಕ ತೆರಳುವಂತೆ ರಾಜ್ಯ ಆಡಳಿತವು ರ್ಯಾಲಿ ಸಂಘಟಕರನ್ನು ಕೇಳಿತ್ತು.

ನಿನ್ನೆ ಅಯೋಧ್ಯೆಯ ರಾಮಮಂದಿರ ಪ್ರಾಣಪ್ರತಿಷ್ಠೆಯ ಹಿನ್ನೆಲೆಯಲ್ಲಿ ದೇವಾಲಯವೊಂದಕ್ಕೆ ಪ್ರವೇಶಕ್ಕೆ ಅನುಮತಿಯನ್ನು ರಾಹುಲ್‌ಗೆ ನಿರಾಕರಿಸಲಾಗಿತ್ತು. ಮಧ್ಯಾಹ್ನದ ನಂತರ ಬರಬಹುದು ಎಂದು ತಿಳಿಸಲಾಗಿತ್ತು. ಅದಕ್ಕೂ ಹಿಂದಿನ ದಿನ ನಾಗಾಂವ್‌ನಲ್ಲಿ ಯಾತ್ರೆಯ ವಿರೋಧಿ ಸ್ಲೋಗನ್‌ಗಳನ್ನು ವಿರೋಧಿ ಗುಂಪೊಂದು ಕೂಗಿತ್ತು.

ಇದನ್ನೂ ಓದಿ: Rahul Gandhi: ರಾಹುಲ್‌ ಗಾಂಧಿಗೆ ದೇವಾಲಯ ಪ್ರವೇಶ ನಿರಾಕರಣೆ; “ನಾನೇನು ಅಪರಾಧ ಮಾಡಿದ್ದೇನೆ?” ಎಂದ ರಾಹುಲ್

Exit mobile version