Site icon Vistara News

Rahul Gandhi: ಸಂಸತ್ತಲ್ಲಿ ನೀಟ್‌ ಕುರಿತು ರಾಹುಲ್‌ ಗಾಂಧಿ ಮಾತಾಡುವಾಗ ಮೈಕ್‌ ಆಫ್;‌ ಸ್ಪೀಕರ್‌ ಮಾಡಿದ್ರಾ?

Rahul Gandhi

Rahul Gandhi's mic muted as he raised NEET issue in Lok Sabha, claims Congress

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಬಳಿಕ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸಂಸತ್ತಿನ ಮೊದಲ ವಿಶೇಷ ಅಧಿವೇಶನ ನಡೆಯುತ್ತಿದೆ. ಆಡಳಿತ ಪಕ್ಷಕ್ಕೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸವಾಲೊಡ್ಡುತ್ತಿದ್ದಾರೆ. ಇದರ ಬೆನ್ನಲ್ಲೇ, ಲೋಕಸಭೆಯಲ್ಲಿ ರಾಹುಲ್‌ ಗಾಂಧಿ ಅವರು ನೀಟ್‌ ಅಕ್ರಮದ ಕುರಿತು ಮಾತನಾಡುವಾಗ ಅವರ ಮೈಕ್‌ ಆಫ್‌ ಆಗಿದ್ದು, ಸ್ಪೀಕರ್‌ ಓಂ ಬಿರ್ಲಾ (Om Birla) ಅವರೇ ಮೈಕ್‌ ಆಫ್‌ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ರಾಹುಲ್‌ ಗಾಂಧಿ ಅವರು ಲೋಕಸಭೆಯಲ್ಲಿ ಮಾತನಾಡುವಾಗ ಸ್ಪೀಕರ್‌ ಸರ್‌, ನನಗೆ ಮೈಕ್‌ ಕೊಡಿ ಎಂದಿದ್ದಾರೆ. ಆಗ ಸ್ಪೀಕರ್‌, “ನನ್ನ ಬಳಿ ಯಾವುದೇ ಬಟನ್‌ ಇಲ್ಲ” ಎಂದಿದ್ದಾರೆ. ಇದಕ್ಕೂ ಮೊದಲು ರಾಹುಲ್‌ ಗಾಂಧಿ ಅವರು ಮಾತನಾಡಿದರು. “ದೇಶದ ವಿದ್ಯಾರ್ಥಿಗಳಿಗೆ ಸರ್ಕಾರ ಹಾಗೂ ಪ್ರತಿಪಕ್ಷಗಳ ಕಡೆಯಿಂದ ಜಂಟಿ ಸಂದೇಶ ನೀಡಲು ಬಯಸುತ್ತೇವೆ. ಹಾಗೆಯೇ, ವಿದ್ಯಾರ್ಥಿಗಳಿಗೆ ಗೌರವ ನೀಡುವ ದಿಸೆಯಲ್ಲಿ ಸಂಸತ್ತಿನಲ್ಲಿ ನಾವು ನೀಟ್‌ ಕುರಿತು ಗಂಭೀರವಾಗಿ ಚರ್ಚಿಸೋಣ” ಎಂದರು. ಇದೇ ವೇಳೆ ರಾಹುಲ್‌ ಗಾಂಧಿ ಅವರ ಮೈಕ್‌ ಆಫ್‌ ಆಗಿದ್ದು, ಪ್ರತಿಪಕ್ಷಗಳು ಗಲಾಟೆ ಮಾಡಿವೆ. ಆಗ ಸ್ಪೀಕರ್‌ ಅವರು ನನ್ನ ಬಳಿ ಬಟನ್‌ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್‌ ಆಕ್ರೋಶ

“ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಸಂಸತ್ತಿನಲ್ಲಿ ದೇಶದ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಮಾತನಾಡುವಾಗ ಸ್ಪೀಕರ್‌ ಓಂ ಬಿರ್ಲಾ ಅವರು ಏಕೆ ಮೈಕ್‌ಅನ್ನು ಆಫ್‌ ಮಾಡಿದ್ದಾರೆ” ಎಂದು ಕೇರಳ ಕಾಂಗ್ರೆಸ್‌ ಘಟಕದ ಎಕ್ಸ್‌ ಖಾತೆಯಿಂದ ಪೋಸ್ಟ್‌ ಮಾಡಲಾಗಿದೆ. ಅಲ್ಲದೆ, ರಾಹುಲ್‌ ಗಾಂಧಿ ಅವರು ಮಾತನಾಡುವಾಗಲೇ ಮೈಕ್‌ ಆಫ್‌ ಆಗುವ ವಿಡಿಯೊವನ್ನು ಕೂಡ ಹಲವು ಕಾಂಗ್ರೆಸ್‌ ನಾಯಕರು ಹಂಚಿಕೊಂಡಿದ್ದಾರೆ. ಹಾಗೆಯೇ, ಸ್ಪೀಕರ್‌ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ನಾಯಕ ದೀಪೆಂದರ್‌ ಸಿಂಗ್‌ ಹೂಡಾ ಅವರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾವು ಕ್ಷಿಪ್ರವಾಗಿ ನೀಟ್‌ ವಿಷಯದ ಕುರಿತು ಚರ್ಚೆ ಮಾಡೋಣ ಎಂದು ಬೇಡಿಕೆ ಇಟ್ಟೆವು. ಇದೇ ವೇಳೆ ರಾಹುಲ್‌ ಗಾಂಧಿ ಅವರು ಮಾತನಾಡುತ್ತಿದ್ದರು. ಆಗ ಮೈಕ್‌ ಆಫ್‌ ಆಗಿದೆ. ಇದು ನಮ್ಮ ಆಕ್ರೋಶವನ್ನು ಕೆರಳಿಸಿತು” ಎಂದಿದ್ದಾರೆ. ಜುಲೈ 24 ರಂದು ಸಂಸತ್‌ ವಿಶೇಷ ಅಧಿವೇಶನ ಆರಂಭವಾಗಿದ್ದು, ಜುಲೈ 3ರವರೆಗೆ ನಡೆಯಲಿದೆ.

ಇದನ್ನೂ ಓದಿ: ಕಾಂಗ್ರೆಸ್‌ನಂತೆ 15 ತಿಂಗಳಲ್ಲಿ ಪ್ರತಿಪಕ್ಷಗಳೂ ರಾಹುಲ್‌ ಗಾಂಧಿಯಿಂದ ನಿರ್ನಾಮ; ಆಚಾರ್ಯ ಪ್ರಮೋದ್‌ ಸ್ಫೋಟಕ ಹೇಳಿಕೆ!

Exit mobile version