ಕೋಲ್ಕತ್ತ: ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರದ ರೈಲ್ವೆ ಸ್ಟೇಶನ್‌ನ ಉದ್ಯೋಗಿಯೊಬ್ಬರನ್ನು ಸೋಷಿಯಲ್ ಮೀಡಿಯಾದಲ್ಲಿ ತುಂಬ ಜನ ಹೊಗಳುತ್ತಿದ್ದಾರೆ. ಅವರ ಸಮಯಪ್ರಜ್ಞೆಗೆ ಅಪಾರ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ರೈಲ್ವೆ ಸಿಬ್ಬಂದಿ ವೃದ್ಧರೊಬ್ಬರನ್ನು ಕಾಪಾಡಲು ತಮ್ಮ ಜೀವವನ್ನೇ ಪಣಕ್ಕಿಟ್ಟ ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದ್ದು, ಅದನ್ನು ನೋಡಿದರೆ ನಮ್ಮಲ್ಲೂ ಒಮ್ಮೆ ಭಯ ಮೂಡುತ್ತದೆ. ಆ ರೈಲ್ವೆ ಸಿಬ್ಬಂದಿಯ ಧೈರ್ಯವನ್ನು ಮೆಚ್ಚಿಕೊಳ್ಳದೆ ಇರಲು ಸಾಧ್ಯವೇ ಇಲ್ಲ.
ಈ ರೈಲ್ವೆ ಉದ್ಯೋಗಿಯ ಹೆಸರು ಎಚ್.ಸತೀಶ್ ಕುಮಾರ್. ರೈಲು ಪ್ರವೇಶಿಸುವಾಗ ಮತ್ತು ಹೊರಡುವಾಗ ಬಾವುಟ ಹಿಡಿದು ಸಿಗ್ನಲ್ ತೋರಿಸುವ ಕೆಲಸ ಮಾಡುವವರು. ಅಂದು ಕೂಡ ಎಂದಿನಂತೆ ಸರಕು ರೈಲೊಂದು ಕೆಲವೇ ಹೊತ್ತಲ್ಲಿ ಆ ಸ್ಟೇಶನ್‌ಗೆ ಬರುವುದಿತ್ತು. ರೈಲು ಬರುವ ಹೊತ್ತಾಗುತ್ತಿದ್ದಂತೆ ಇವರು ಪ್ಲಾಟ್‌ಫಾರ್ಮ್‌ಗೆ ಬಂದು ನಿಂತರು. ಅವರ ಒಂದು ಕೈಯಲ್ಲಿ ಕೆಂಪು ಮತ್ತು ಇನ್ನೊಂದು ಕೈಯಲ್ಲಿ ಹಸಿರು ಬಾವುಟ ಇತ್ತು. ರೈಲು ಕೂಡ ಸಮೀಪಿಸುತ್ತಿರುವ ಶಬ್ದ ಕೇಳುತ್ತಿತ್ತು. ಆದರೆ ಅಷ್ಟರಲ್ಲಿ ಸತೀಶ್‌ಗೆ ಹಳಿಯ ಮೇಲೆ ವೃದ್ಧನೊಬ್ಬ ಬಿದ್ದಿರುವುದು ಕಂಡಿತು. ಕೂಡಲೇ ಕೈಯಲ್ಲಿದ್ದ ಬಾವುಟಗಳನ್ನು ಕಿತ್ತು ಎಸೆದು, ಹೋಗಿ ಹಳಿಗೆ ಹಾರಿದ್ದಾರೆ. ಆ ವೃದ್ಧನನ್ನು ಎತ್ತಿ ಪಕ್ಕಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ರೈಲು ಕೂಡ ಆಗಮಿಸಿದೆ. ಸತೀಶ್ ಕುಮಾರ್ ಸ್ವಲ್ಪವೇ ತಡ ಮಾಡಿದ್ದರೂ ರೈಲು ಡಿಕ್ಕಿ ಹೊಡೆದು ಇವರಿಬ್ಬರ ಜೀವವೂ ಹೋಗುತ್ತಿತ್ತು ಅಥವಾ ನನಗ್ಯಾಕೆ ಬೇಕು ಎಂದು ಸುಮ್ಮನಿದ್ದರೆ ವೃದ್ಧನ ಜೀವ ಬಲಿಯಾಗುತ್ತಿತ್ತು. ಆದರೆ ಈ ರೈಲ್ವೆ ಸಿಬ್ಬಂದಿ ದೊಡ್ಡ ಸಾಹಸವನ್ನೇ ಮಾಡಿದ್ದಾರೆ.
ಈ ವಿಡಿಯೋವನ್ನು ಕೇಂದ್ರ ರೈಲ್ವೆ ಸಚಿವಾಲಯ ಶೇರ್ ಮಾಡಿಕೊಂಡು,ʼ ಜೀವ ಯಾರದ್ದೇ ಆದರೂ ಅಮೂಲ್ಯವೇ. ಅಂಥದ್ದೊಂದು ಅಮೂಲ್ಯ ಜೀವವನ್ನು ನಮ್ಮ ರೈಲ್ವೆ ಉದ್ಯೋಗಿಯೊಬ್ಬರು ಕಾಪಾಡಿದ್ದಾರೆ. ಅದಕ್ಕಾಗಿ ಅವರ ಜೀವವನ್ನೇ ಪಣಕ್ಕಿಟ್ಟಿದ್ದಾರೆ. ಇಂಥ ಧೈರ್ಯಶಾಲಿ, ನಿಷ್ಠಾವಂತ ಉದ್ಯೋಗಿಗಳು ನಮ್ಮಲ್ಲಿ ಇದ್ದಾರೆ ಎಂಬುದೇ ನಮ್ಮ ರೈಲ್ವೆ ಇಲಾಖೆಗೆ ಹೆಮ್ಮೆ ಎಂದು ಕ್ಯಾಪ್ಷನ್ ಬರೆದಿದೆ. ವಿಡಿಯೋ ನೋಡಿದ ನೆಟ್ಟಿಗರು ಕೂಡ ಸತೀಶ್ ಸಾಹವನ್ನು ಹೊಗಳುತ್ತಿದ್ದಾರೆ. ʼಸತೀಶ್ ಕುಮಾರ್‌ನಂಥವರು ಕೋಟಿಗೊಬ್ಬರುʼ, ʼಸತೀಶ್ ಕುಮಾರ್ ಸಾಹಸಕ್ಕೆ ಪ್ರಶಸ್ತಿ ಕೊಡಬೇಕುʼ ʼನಿಮಗೊಂದು ಸೆಲ್ಯೂಟ್ʼ ಎಂಬಂಥ ಕಮೆಂಟ್‌ಗಳನ್ನು ಬರೆದಿದ್ದಾರೆ.
ಇದನ್ನೂ ಓದಿ: ಅಗ್ನಿಪಥ್‌ನಿಂದ ಭಾರತೀಯ ರೈಲ್ವೆಗಾದ ನಷ್ಟ ಎಷ್ಟು?; ದಶಕದಲ್ಲಿ ಇಷ್ಟು ಲಾಸ್ ಆಗಿರಲಿಲ್ಲ !