Site icon Vistara News

Railway Union: ಮೇ 1ರಿಂದ ದೇಶಾದ್ಯಂತ ರೈಲು ಓಡಾಟ ಬಂದ್‌; ಕಾರಣವೇನು?

indian railway

indian railway

ನವದೆಹಲಿ: ಹಳೆಯ ಪಿಂಚಣಿ ಯೋಜನೆ (OPS) ಜಾರಿಗೆ ತರಬೇಕೆಂಬ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಮೇ 1ರಿಂದ ಭಾರತದಾದ್ಯಂತ ಎಲ್ಲ ರೈಲು ಸೇವೆಗಳನ್ನು ನಿಲ್ಲಿಸುವುದಾಗಿ ರೈಲ್ವೆ ನೌಕರರು ಮತ್ತು ಕಾರ್ಮಿಕರ ಹಲವು ಒಕ್ಕೂಟಗಳು ಬೆದರಿಕೆ ಹಾಕಿವೆ (Railway Union). ಹಳೆಯ ಪಿಂಚಣಿ ಯೋಜನೆಯ ಪುನಃಸ್ಥಾಪನೆಗಾಗಿ ಜಂಟಿ ವೇದಿಕೆ (JFROPS) ಅಡಿಯಲ್ಲಿ ಈ ಒಕ್ಕೂಟಗಳು ಒಗ್ಗೂಡಿವೆ.

ʼ’ಹೊಸ ಪಿಂಚಣಿ ಯೋಜನೆ’ಯ ಬದಲಿಗೆ ‘ವ್ಯಾಖ್ಯಾನಿತ ಹಳೆಯ ಪಿಂಚಣಿ ಯೋಜನೆ’ಯನ್ನು ಪುನಃಸ್ಥಾಪಿಸಬೇಕೆಂಬ ನಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ. ಹೀಗಾಗಿ ಮುಷ್ಕರ ನಡೆಸದೆ ಬೇರೆ ದಾರಿಯಿಲ್ಲ” ಎಂದು ಜೆಎಫ್‌ಆರ್‌ಒಪಿಎಸ್‌ ಸಂಚಾಲಕ ಶಿವ ಗೋಪಾಲ್ ಮಿಶ್ರಾ ಹೇಳಿದ್ದಾರೆ. ಆಲ್‌ ಇಂಡಿಯಾ ರೈಲ್ವೇ ಮ್ಯಾನ್ಸ್‌ ಫೆಡರೇಷನ್‌ ಕಾರ್ಯದರ್ಶಿಯೂ ಆಗಿರುವ ಅವರು ಈ ಬಗ್ಗೆ ಮಾಹಿತಿ ನೀಡಿ, “ಜೆಎಫ್‌ಆರ್‌ಒಪಿಎಸ್‌ ಅಡಿಯಲ್ಲಿ ವಿವಿಧ ಒಕ್ಕೂಟಗಳ ಪ್ರತಿನಿಧಿಗಳು ಜಂಟಿಯಾಗಿ ಮಾರ್ಚ್ 19ರಂದು ರೈಲ್ವೆ ಸಚಿವಾಲಯಕ್ಕೆ ನೋಟಿಸ್ ನೀಡಲು ಸಮ್ಮತಿಸಿವೆ. ಈ ವೇಳೆ ಉದ್ದೇಶಿತ ದೇಶವ್ಯಾಪಿ ಮುಷ್ಕರ ಮತ್ತು 2024ರ ಮೇ 1ರಿಂದ (ವಿಶ್ವ ಕಾರ್ಮಿಕ ದಿನ) ಎಲ್ಲ ರೈಲು ಸೇವೆಗಳಿಗೆ ಅಡ್ಡಿಪಡಿಸುವ ಬಗ್ಗೆ ತಿಳಿಸುತ್ತೇವೆʼʼ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: OPS News : ಹಳೆ ಪಿಂಚಣಿ ಯೋಜನೆಗೆ ಅರ್ಹ ಶಿಕ್ಷಕರ ಪಟ್ಟಿ ಸಿದ್ಧಪಡಿಸಲು ಸೂಚನೆ

ಮಿಶ್ರಾ ಅವರ ಪ್ರಕಾರ, ಜೆಎಫ್‌ಆರ್‌ಒಪಿಎಸ್‌ನ ಭಾಗವಾಗಿರುವ ಇತರ ಸರ್ಕಾರಿ ನೌಕರರ ವಿವಿಧ ಒಕ್ಕೂಟಗಳು ರೈಲ್ವೇ ಕಾರ್ಮಿಕರೊಂದಿಗೆ ಮುಷ್ಕರ ನಡೆಸಲಿವೆ. ಹೊಸ ಪಿಂಚಣಿ ಯೋಜನೆ ನೌಕರರ ಹಿತ ದೃಷ್ಟಿಯಿಂದ ಅಷ್ಟೇನೂ ಪ್ರಯೋಜಕಾರಿಯಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version