ಶನಿವಾರ ಸುರಿದ ಭಾರೀ ಮಳೆಯಲ್ಲಿ ಚಾರಣಿಗರ ಸ್ವರ್ಗವೆಂದೇ ಹೇಳಲಾಗುವ ಉತ್ತರಾಖಂಡದ ಹೂಕಣಿವೆಯ ಮಾರ್ಗದಲ್ಲಿ ಭೂಕುಸಿತ ಉಂಟಾಗಿದ್ದು, ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಚಾರಣ ಇದೀಗ ಮತ್ತೆ ಪ್ರಾರಂಭವಾಗಿದೆ ಎಂದು ಖಾಸಗಿ ಚಾರಣ ಸಂಸ್ಥೆಯೊಂದು ಹೇಳಿದೆ. ಆದರೆ, ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇನ್ನೂ ನಾಲ್ಕೈದು ದಿನಗಳ ಕಾಲ ಎಡೆಬಿಡದೆ ಮಳೆ ಸುರಿಯುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಭೂಕುಸಿತವು ಹೂಕಣಿವೆಯ ಚಾರಣದ ಹಾದಿಯಲ್ಲೇ ನಡೆದಿರುವುದರಿಂದ ಚಾರಣದ ಹಾದಿ ಸಂಪೂರ್ಣ ಮುಚ್ಚಿ ಹೋಗಿತ್ತು. ಇದನ್ನು ತೆರವುಗೊಳಿಸುವವರೆಗೂ ಚಾರಣ ಸಾಧ್ಯವಿಲ್ಲ ಎನ್ನಲಾಗಿದ್ದು, ನಂದಾದೇವಿ ಬಯೋಸ್ಪಿಯರ್ ರಿಸರ್ವ್ ವಿಭಾಗದ ಅರಣ್ಯ ಸಿಬ್ಬಂದಿಗಳು ತೆರವಿನ ಕಾರ್ಯ ಚುರುಕುಗೊಳಿಸಿದ್ದರು.
ಶನಿವಾರ ಎಡೆಬಿಡದೆ ಮಳೆ ಸುರಿದಿದ್ದು, ಐದಾರು ಗಂಟೆಗಳ ಕಾಲ ಮಳೆ ಪ್ರತಿದಿನವೂ ಸುರಿಯುತ್ತಿದೆ. ಇನ್ನೂ ನಾಲ್ಕೈದು ದಿನ ಮಳೆ ಹೀಗೇ ಮುಂದುವರಿಯಲಿದ್ದು, ಚಾರಣಕ್ಕೆ ಬರುವ ಮಂದಿ ಮಳೆಗೆ ಸನ್ನದ್ಧರಾಗಿಯೇ ಬರಬೇಕೆಂದು ಚಾರಣ ಸಂಸ್ಥೆಗಳೂ ಚಾರಣಿಗರಿಗೆ ಸಂದೇಶ ತಿಳಿಸಿವೆ. ಸರಿಯಾದ ರೇನ್‌ಕೋಟ್, ವಾಟರ್‌ಪ್ರೂಫ್ ಶೂಸ್, ಬ್ಯಾಗುಗಳಿಗೆ ರೇನ್ ಕವರ್ ಇತ್ಯಾದಿಗಳು ತೀರಾ ಅಗತ್ಯವಾದ ಚಾರಣ ಸಲಕರಣೆಗಳಾಗಿದ್ದು, ಇದನ್ನು ಬಹುಮುಖ್ಯವಾಗಿ ತಯಾರಿಯಲ್ಲಿ ಸೇರಿಸಬೇಕು. ಇಲ್ಲವಾದಲ್ಲಿ ಚಾರಣ ನರಕ ಸದೃಶ ಅನುಭವ ನೀಡಬಹುದು ಎಂಬುದನ್ನು ಒತ್ತಿ ಹೇಳಿದೆ.
ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ಉತ್ತರಾಖಂಡದ ಹೂಕಣಿವೆ ತನ್ನ ಪ್ರಾಕೃತಿಕ ಸೌಂದರ್ಯ ಹಾಗೂ ಅಪರೂಪದ ಹೂವುಗಳು ಅರಳಿರುವ ಸುಂದರ ತಾಣವಾಗಿದ್ದು, ಸಾಹಸಪ್ರಿಯರಿಗೆ, ಪ್ರಕೃತಿಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಪ್ರತಿಯೊಬ್ಬ ಚಾರಣಿಗನೂ, ಪ್ರಕೃತಿ ಪ್ರಿಯನೂ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ನೋಡಬೇಕೆಂದು ಬಯಸುವ ಬಕೆಟ್ ಲಿಸ್ಟ್ ಕಣಿವೆ ಇದಾಗಿದೆ. ಕೇವಲ ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಮಾತ್ರ ತೆರೆದಿರುವ ಇದು ನಿಸರ್ಗದ ಅಪರೂಪದ ದೃಶ್ಯವೈಭವಕ್ಕೆ ಸಾಕ್ಷಿಯಾಗುತ್ತದೆ. ಮಳೆಗಾಲದಲ್ಲೇ ಇದು ತೆರೆದಿರುವುದರಿಂದ ಹಾಗೂ ಉಳಿದ ತಿಂಗಳುಗಳಲ್ಲಿ ಹಿಮಾವೃತಗೊಂಡಿರುವ ಕಾರಣ ಕೇವಲ ನಾಲ್ಕು ತಿಂಗಳ ಕಾಲ ಮಾತ್ರ ಇದು ಪ್ರವಾಸಿಗರಿಗೆ ಚಾರಣಿಗರಿಗೆ ತೆರೆದಿರುತ್ತದೆ. ಹಾಗಾಗಿ ಮಳೆಗಾಲದಲ್ಲೇ ಎಲ್ಲೆಡೆಯಿಂದ ಈ ಪ್ರಕೃತಿಯ ರಮಣೀಯತೆಯನ್ನು ಸವಿಯಲು ಆಗಮಿಸುತ್ತಾರೆ. ಮಳೆಗಾಲವೊಂದೇ ಇಂತಹ ಅನುಭವ ನೀಡುವ ಸಮಯವಾದ್ದರಿಂದ ಹೂಕಣಿವೆಯ ಚಾರಣಕ್ಕೆ ಬರುವ ಮಂದಿ ಎಂದೆಂದಿಗೂ ಮಳೆ ಒಡ್ಡುವ ಸವಾಲುಗಳಿಗೆ ಸಿದ್ಧರಾಗಿಯೇ ಬರಬೇಕಾಗುತ್ತದೆ.
ಇದನ್ನೂ ಓದಿ: Solo Travel: ಸೋಲೋ ಪ್ರವಾಸ ಗೆಲ್ಲೋಕೆ 15 ಸೂತ್ರಗಳು!
ಹೂಕಣಿವೆಯ ಹಾದಿಯ ದ್ವಾರಿಪುಲ್ ಎಂಬಲ್ಲಿ ಶನಿವಾರ ಭೂಕುಸಿತ ಉಂಟಾಗಿದ್ದು ತಾತ್ಕಾಲಿಕವಾಗಿ ಚಾರಣವನ್ನು ರದ್ದುಗೊಳಿಸಲಾಗಿತ್ತು. ಇದು ಸದಾ ಭೂಕುಸಿಯುವಂತಹ ಜಾಗವೇ ಆಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಚಾರಣವನ್ನು ರದ್ದುಗೊಳಿಸಲಾಗಿತ್ತು. ಈ ಸಂಬಂಧ ಹಿರಿಯ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದ್ದು, ಈ ಮಾರ್ಗವನ್ನು ಸರಿಪಡಿಸುವ ಕೆಲಸವೂ ಸಾಗಿದೆ ಎಂದು ನಂದಾದೇವಿ ಬಯೋಸ್ಪಿಯರ್ ರಿಸರ್ವ್ ವಿಭಾಗದ ಅರಣ್ಯಾಧಿಕಾರಿ ನಂದ್ ಬಲ್ಲಬ್ ಶರ್ಮಾ ಹೇಳಿದ್ದರು.
ಭಾರೀ ಮಳೆ ಸುರಿಯುತ್ತಲೇ ಇರುವುದರಿಂದ ಇದರ ದುರಸ್ತಿ ಕಷ್ಟ ಸಾಧ್ಯವಾದರೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸದ್ಯ ಚಾರಣಕ್ಕೆ ವ್ಯವಸ್ಥೆ ಮಾಡಿದ್ದಾರೆ. ೧೦ ಮೀಟರ್ ಉದ್ದದಷ್ಟು ಭಾಗದಲ್ಲಿ ಒಬ್ಬ ನಿಲ್ಲಲೂ ಸಾಧ್ಯವಾಗದಷ್ಟು ಭೂಮಿ ಕುಸಿದಿದ್ದು, ಸತತವಾಗಿ ಐದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಕೆಲಸಗಾರರು ಸರಿಪಡಿಸಿದ ನಂತರವೂ ಮತ್ತೆ ಕುಸಿತಕ್ಕೆ ಒಳಗಾಗುತ್ತಿದೆ. ಆ ಭಾಗದ ಮಣ್ಣು ಸಡಿಲಗೊಂಡಿರುವುದರಿಂದ ಯಾವ ಸಂದರ್ಭವದಲ್ಲೂ ಮೇಲಿನಿಂದ ಬಂಡೆಗಳು ಉರುಳುವ ಸಾಧ್ಯತೆ ಇದೆ. ಪರ್ಯಾಯವಾಗಿ ಹೂಕಣಿವೆಗೆ ಬೇರೆ ಯಾವುದೇ ಹಾದಿ ಇಲ್ಲದಿರುವುದರಿಂದ ಇದಕ್ಕೆ ಸಂಪರ್ಕ ಹೊಂದಿದ ಮಾರ್ಗವೂ ಮಳೆಯಲ್ಲಿ ಕೊಚ್ಚಿ ಹೋಗುವ ಸಾಧ್ಯತೆಗಳಿವೆ ಎನ್ನಲಾಗಿತ್ತು. ಇದೇ ಜಾಗ ಹಿಂದೆಯೂ ಹಲವು ಭೂಕುಸಿತಗಳನ್ನು ಕಂಡಿದ್ದು, ೨೦೧೩ರ ಕೇದಾರನಾಥ ದುರಂತದ ಸಂದರ್ಭವೂ ಭಾರೀ ಭೂಕುಸಿತ ಉಂಟಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಸದ್ಯ ಚಾರಣಕ್ಕೆ ಅರಣ್ಯ ಇಲಾಖೆ ಅವಕಾಶ ಮಾಡಿಕೊಟ್ಟಿದೆ ಎಂದು ಖಾಸಗಿ ಚಾರಣ ಸಂಸ್ಥೆಯೊಂದು ತನ್ನ ವಿಡಿಯೋದಲ್ಲಿ ಚಾರಣಿಗರಿಗೆ ಸಂದೇಶ ರವಾನಿಸಿದೆ.
ಇದನ್ನೂ ಓದಿ: ಎಲ್ಲ ನೌಕರರಿಗೂ ಐಷಾರಾಮಿ ಪ್ರವಾಸ; ಕಂಪನಿಲಿ ಕೆಲಸ ಖಾಲಿ ಇದೆಯಾ ಅಂತ ಕೇಳಿದ ನೆಟಿಜನ್ಸ್!