Site icon Vistara News

Rain fury: ಮಳೆಗೆ ತತ್ತರಿಸಿದ ಮುಂಬಯಿ, ಇನ್ನಷ್ಟು ವರುಣಾರ್ಭಟದ ಮುನ್ನೆಚ್ಚರಿಕೆ

ಮುಂಬಯಿ: ವಾಣಿಜ್ಯ ನಗರಿ ಮುಂಬಯಿಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂಬಯಿ ಮಾತ್ರವಲ್ಲದೆ, ಮಹಾರಾಷ್ಟ್ರದ ಇತರ ಭಾಗಗಳಾದ ಥಾಣೆ, ರತ್ನಗಿರಿ ಸೇರಿದಂತೆ ಪಶ್ಚಿಮ ಕರಾವಳಿಯ ಹಲವು ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮುಂಬಯಿ ಮತ್ತು ಥಾಣೆಯಲ್ಲಿ ಶುಕ್ರವಾರದವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಹಾ ಮಳೆಯಿಂದಾಗಿ ರಸ್ತೆಗಳು ಹೊಳೆಗಳಾಗಿದ್ದು, ಸಂಚಾರಕ್ಕೆ ಭಾರಿ ಅಡಚಣೆಯಾಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಜನರು ಈಗಾಗಲೇ ತತ್ತರಿಸುತ್ತಿದ್ದಾರೆ. ಮಂಗಳವಾರ ಬೆಳಗ್ಗೆ ಸುರಿದ ಭರಿ ಮಳೆಯಿಂದಾಗಿ ಮುಂಬಯಿನ ಸ್ಥಳೀಯ ರೈಲುಗಳು 10 ರಿಂದ 15 ನಿಮಿಷಗಳ ಕಾಲ ತಡವಾಗಿ ಚಲಿಸಿದ್ದರಿಂದ ಸಾವಿರಾರು ಪ್ರಯಾಣಿಕರು ತಮ್ಮ ಕೆಲಸದ ಸ್ಥಳಗಳಿಗೆ ಸಮಯಕ್ಕೆ ಹೋಗಲು ಸಾಧ್ಯವಾಗದೆ ಹೆಣಗಾಡಿದ್ದಾರೆ.

ಮುಂಬೈನ ಕುರ್ಲಾದಲ್ಲಿನ ಮಳೆ

ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ಮುಖ್ಯ ಕಾರ್ಯದರ್ಶಿ ಮನುಕುಮಾರ್ ಶ್ರೀವಾಸ್ತವ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಭಾರಿ ಮಳೆಯಿಂದಾಗಿ ಕರಾವಳಿಯ ಕೆಲವು ಜಿಲ್ಲೆಗಳಲ್ಲಿ ನದಿಗಳು ಅಪಾಯದ ಗಡಿ ದಾಟುವ ಸಾಧ್ಯತೆಯಿದ್ದು, ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ. ಸಂಬಂಧಿತ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ನಿಗಾ ಇರಿಸಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಸೂಚಿಸಿದ್ದಾರೆ.

ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಭಾರಿ ಮಳೆ, ಕಾವೇರಿ ನದಿ ನೀರಿನ ಮಟ್ಟ ಏರಿಕೆ

ಮುಂಬೈ, ಥಾಣೆ, ಪಾಲ್ಘರ್, ರಾಯಗಢ, ರತ್ನಗಿರಿ, ಸಿಂಧುದುರ್ಗ, ಪುಣೆ, ಬೀಡ್, ಲಾತೂರ್, ಜಲ್ನಾ, ಪರ್ಭಾನಿ ಮತ್ತು ಹಲವಾರು ಸೇರಿದಂತೆ ಮಹಾರಾಷ್ಟ್ರದ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ.
ಪ್ರಸ್ತುತ ಮಾನ್ಸೂನ್ ಮಳೆಯ ಸೂಚನೆ ಹಾಗೂ ಆರೆಂಜ್‌ ಅಲರ್ಟ್‌ ಇರುವ ಪ್ರದೇಶಗಳಲ್ಲಿ ಪೂರ್ವಭಾವಿಯಾಗಿ NDRF ತಂಡವನ್ನು ನಿಯೋಜಿಸಲಾಗಿದೆ.

ಮುಂಬೈ ಮಳೆ

NDRF ತಂಡಗಳ ನಿಯೋಜನೆ: ಮುಂಬೈನಲ್ಲಿ 5 ತಂಡಗಳು, ನಾಗಪುರದಲ್ಲಿ 1 ತಂಡ, ಚಿಪ್ಲುನ್, ರತ್ನಗಿರಿಯಲ್ಲಿ 1 ತಂಡ ಮತ್ತು ಮಹದ್ ರಾಯಗಢದಲ್ಲಿ 1 ತಂಡ.

ದೇಶದ ವಿವಿದ ಭಾಗಗಳಲ್ಲೂ ವರುಣನ ಆರ್ಭಟ: ದೇಶದ ವಿವಿಧ ಭಾಗಗಳಲ್ಲೂ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ. ಪೂರ್ವ ಮಧ್ಯಪ್ರದೇಶ, ಛತ್ತೀಸ್‌ಗಢ, ಮಹಾರಾಷ್ಟ್ರದ ಕೊಂಕಣ ಪ್ರದೇಶ, ಗೋವಾ, ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲಿ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ದನ್ನೂ ಓದಿ: Rain News | ಮಳೆಯ ಅಬ್ಬರ, ಗುಡ್ಡ ಕುಸಿತ; ಗೋವಾ, ಕರ್ನಾಟಕ ಸಂಚಾರ ಸ್ಥಗಿತ

Exit mobile version