ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಯುಎಸ್ ಪ್ರವಾಸದಲ್ಲಿ (PM Modi US Visit) ಇದ್ದಾರೆ. ಅವರಿಗಾಗಿ ವೈಟ್ ಹೌಸ್ ನಲ್ಲಿ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ ಸೇರಿ ವಿಶೇಷ ಔತಣಕೂಟ (State Dinner) ಏರ್ಪಡಿಸಲಾಗಿದೆ. ಮೋದಿಯವರು ಸಂಪೂರ್ಣ ಸಸ್ಯಾಹಾರಿ ಆಗಿರುವುದರಿಂದ ಔತಣಕೂಟದಲ್ಲಿ ಪೂರ್ತಿಯಾಗಿ ಸಸ್ಯಾಹಾರವನ್ನೇ ಅಳವಡಿಸಲಾಗಿದೆ. ಮುಖ್ಯವಾಗಿ ಸಿರಿಧಾನ್ಯ, ಅಣಬೆ ಖಾದ್ಯಗಳನ್ನು ತಯಾರಿಸಲಾಗಿದೆ. ಜತೆಗೆ ರೆಡ್ ವೈನ್ ಕೂಡ ಇದೆ. ಅದೂ ಕೂಡ ಗುಜರಾತ್ ಮೂಲದ ಉದ್ಯಮಿ ರಾಜ್ ಪಟೇಲ್ ಮಾಲೀಕತ್ವದ ‘ಪಟೇಲ್ ವೈನ್ಸ್’ ಕ್ಲಬ್ ನ ರೆಡ್ ವೈನ್ ಇದು.
ರಾಜ್ ಪಟೇಲ್ ಅವರು ಮೂಲತಃ ಭಾರತದ ಗುಜರಾತ್ ನವರಾಗಿದ್ದು ಅಮೆರಿಕದಲ್ಲಿ ತಮ್ಮ ವೈನ್ ಉದ್ಯಮ ನಡೆಸುತ್ತಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿರುವ ಸ್ಟೇಟ್ ಡಿನ್ನರ್ ಗೆ ಪಟೇಲ್ ವೈನ್ಸ್ ಬ್ರ್ಯಾಂಡ್ ನ ರೆಡ್ ವೈನ್ ಪೂರೈಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ ಪಟೇಲ್, ನಮ್ಮ ವೈನ್ ಪೂರೈಕೆ ಮಾಡುವಂತೆ ವೈಟ್ ಹೌಸ್ ಸೂಚಿಸಿತ್ತು. ಪೂರೈಕೆ ಮಾಡಿದ್ದೇವೆ. ಔತಣಕೂಟಕ್ಕೆ ನಮಗೆ ಆಹ್ವಾನ ಇಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: PM Modi Visit US: ಭಾರತದಲ್ಲಿ ತಾರತಮ್ಯಕ್ಕೆ ಅವಕಾಶವೇ ಇಲ್ಲ, ನಮ್ಮ ಡಿಎನ್‌ಎದಲ್ಲೇ ಪ್ರಜಾಪ್ರಭುತ್ವವಿದೆ ಎಂದ ಪ್ರಧಾನಿ ಮೋದಿ
ಒಟ್ಟಾರೆ, ಅದರಲ್ಲೂ ಅಮೆರಿಕದಲ್ಲಿ ಫ್ರೆಂಚ್ ಮತ್ತು ಇಟಾಲಿಯ ವೈನ್ ಹೆಚ್ಚೆಚ್ಚು ಬಳಕೆಯಾಗುತ್ತಿದೆ. ಭಾರತದ ರೆಡ್ ವೈನ್ ಬಳಕೆಯೆಲ್ಲ ಇಲ್ಲಿ ತೀರ ಅಪರೂಪ. ಅಂಥದ್ದರಲ್ಲಿ ಈಗ ಮೋದಿ ಔತಣಕೂಟಕ್ಕೆ ಗುಜರಾತ್ ಮೂಲದ ರಾಜ್ ಪಟೇಲ್ ಮಾಲೀಕತ್ವದ ಪಟೇಲ್ ವೈನ್ಸ್ನ ರೆಡ್ ವೈನ್ ಇಟ್ಟಿದ್ದು ವಿಶೇಷವಾಗಿದೆ. ಈ ಮಧ್ಯೆ ರಾಜ್ ಪಟೇಲ್ ಅವರೂ ಕೂಡ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಹೊಗಳಿದ್ದಾರೆ.
ಪ್ರಧಾನಿ ಮೋದಿ ಜೂ.21ರಿಂದ ಅಮೆರಿಕ ಪ್ರವಾಸದಲ್ಲಿದ್ದಾರೆ. ಅವರು ಈಗಾಗಲೇ ಅಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಜೂ.21ರಂದು ವಿಶ್ವಸಂಸ್ಥೆಯಲ್ಲಿ, ಅಂತಾರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಂಡರು. ಜೂ.22ರಂದು ಅಮೆರಿಕ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಿದರು. ಭಾರತದ ಪ್ರಜಾಪ್ರಭುತ್ವದ ಪ್ರಾಮುಖ್ಯತೆ ಒತ್ತಿ ಹೇಳಿದ ಅವರು ‘ಭಾರತದಲ್ಲಿ ಪ್ರಜಾಪ್ರಭುತ್ವ ಸುದೀರ್ಘಕಾಲದಿಂದ ವಿಕಸನಗೊಂಡಿದೆ. ಪ್ರಜಾಪ್ರಭುತ್ವವು ಚರ್ಚೆ ಮತ್ತು ವಾಗ್ವಾದಗಳನ್ನು ಸ್ವಾಗತಿಸುವ ಪರಿಕಲ್ಪನೆ, ಪ್ರಜಾಪ್ರಭುತ್ವವು ಆಲೋಚನೆಗಳು ಮತ್ತು ಅಭಿವ್ಯಕ್ತಿಗೆ ರೆಕ್ಕೆಗಳನ್ನು ನೀಡುವ ಸಂಸ್ಕೃತಿ ಎಂಬುದು ಇತಿಹಾಸದುದ್ದಕ್ಕೂ ಸ್ಪಷ್ಟವಾಗಿದೆ. ಭಾರತವು ಅನಾದಿ ಕಾಲದಿಂದಲೂ ಇಂತಹ ಮೌಲ್ಯಗಳನ್ನು ಹೊಂದಿದೆ. ಪ್ರಜಾಸತ್ತಾತ್ಮಕ ಮನೋಭಾವದ ವಿಕಾಸದಲ್ಲಿ ಭಾರತವು ಪ್ರಜಾಪ್ರಭುತ್ವದ ತಾಯಿ‘ ಎಂದು ಮೋದಿ ನುಡಿದರು.’ ಎಂದು ಹೇಳಿದ್ದಾರೆ.