Site icon Vistara News

UAE Hindu Temple: ಯುಎಇ ಹಿಂದು ದೇಗುಲಕ್ಕೆ ರಾಜಸ್ಥಾನ ಶಿಲ್ಪಿಗಳ ಕೊಡುಗೆ! ಫೋಟೊಗಳು ಇಲ್ಲಿವೆ

UAE Hindu Temple

Rajasthan artisans' craft finds place at UAE's first Hindu temple, sculptors beaming with pride

ಅಬುಧಾಬಿ: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ (Ram Mandir) ಲೋಕಾರ್ಪಣೆಗೊಂಡ ಬೆನ್ನಲ್ಲೇ ಯುಎಇಯಲ್ಲೂ ಭವ್ಯ ಹಿಂದು ದೇವಾಲಯ (UAE Hindu Temple) ಉದ್ಘಾಟನೆಗೆ ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಯುಎಇಯಲ್ಲಿ ನಿರ್ಮಿಸಲಾಗಿರುವ ಹಿಂದು ದೇವಾಲಯವನ್ನು ಉದ್ಘಾಟಿಸಲಿದ್ದಾರೆ. ಯುಎಇ ಹಿಂದು ದೇವಾಲಯದ ಶಿಲ್ಪಕಲೆಗೆ ರಾಜಸ್ಥಾನದ ಶಿಲ್ಪಿಗಳು, ಕುಶಲಕರ್ಮಿಗಳು ಅಪಾರ ಕೊಡುಗೆ ನೀಡಿದ್ದಾರೆ ಎಂಬುದು ಮಹತ್ವದ ಸಂಗತಿಯಾಗಿದೆ.

ಹೌದು, ರಾಜಸ್ಥಾನದ ಮಕ್ರಾನ ಗ್ರಾಮದ ಶಿಲ್ಪಿಗಳು, ಕುಶಲಕರ್ಮಿಗಳು ಯುಎಇ ಹಿಂದು ದೇವಾಲಯದ ವಾಸ್ತುಶಿಲ್ಪಕ್ಕೆ, ಮೂರ್ತಿಗಳ ಕೆತ್ತನೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಕಳೆದ ಐದು ವರ್ಷದಲ್ಲಿ ಇವರು ರಾಮ, ಕೃಷ್ಣನ ಮೂರ್ತಿಗಳು, ದೇವಾಲಯದ ಕಂಬಗಳು, ಶಿಖರಗಳು, ಕಲಾಕೃತಿಗಳನ್ನು ಕೆತ್ತುವ ಮೂಲಕ ದೇವಸ್ಥಾನದ ಸೌಂದರ್ಯವನ್ನು ಹೆಚ್ಚಿಸಿದ್ದಾರೆ. 2019ರಲ್ಲಿ ದೇವಾಲಯ ನಿರ್ಮಾಣ ಆರಂಭವಾಗಿದ್ದು, ಇಷ್ಟೂ ವರ್ಷಗಳಲ್ಲಿ ರಾಜಸ್ಥಾನದ ಕಲಾವಿದರು ಅವಿರತವಾಗಿ ಶ್ರಮಿಸಿ, ಶಿಲ್ಪಕಲೆಯ ಮೆರುಗನ್ನು ಹೆಚ್ಚಿಸಿದ್ದಾರೆ.

ಫೆಬ್ರವರಿ 14ರಂದು ಉದ್ಘಾಟನೆ

ಅಬುಧಾಬಿಯಲ್ಲಿ ಬೋಚಾಸನವಾಸಿ ಅಕ್ಷರ ಪುರುಷೋತ್ತಮ ಸಂಸ್ಥಾ (BAPS) ಮಂದಿರವನ್ನು ನಿರ್ಮಿಸಲಾಗಿದ್ದು, ಇದು ಯುಎಇ ಮೊದಲ ಹಿಂದು ದೇವಾಲಯ ಎನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 14ರಂದು ದೇವಾಲಯವನ್ನು ಉದ್ಘಾಟಿಸಲಿದ್ದಾರೆ. ಈಗಾಗಲೇ ದೇವಾಲಯದ ಸ್ವಾಮಿ ಈಶ್ವರಚರಣದಾಸ್ ಮತ್ತು ಸ್ವಾಮಿ ಬ್ರಹ್ಮವಿಹರಿದಾಸ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ನೀಡಿದ ಆಮಂತ್ರಣವನ್ನು ಪ್ರಧಾನಿ ಮೋದಿ ಅವರು ಸ್ವೀಕರಿಸಿದ್ದಾರೆ. ಜನವರಿ 22ರಂದು ನರೇಂದ್ರ ಮೋದಿ ಅವರು ರಾಮಮಂದಿರವನ್ನು ಉದ್ಘಾಟಿಸಿದ್ದರು.

ಇದನ್ನೂ ಓದಿ: Ram Mandir: 150 ಕಿ.ಮೀ ನಡೆದು ರಾಮಮಂದಿರ ದರ್ಶನ ಪಡೆದ 350 ಮುಸ್ಲಿಮರು; Video ಇದೆ

ರಾಜಸ್ಥಾನದ ಮಾರ್ಬಲ್‌ಗಳು, ಅಮೃತಶಿಲೆ ಹಾಗೂ ಪಿಂಕ್‌ ಸ್ಯಾಂಡ್‌ಸ್ಟೋನ್‌ಗಳನ್ನು ಬಳಸಿ ದೇವಾಲಯವನ್ನು ನಿರ್ಮಿಸಲಾಗಿದೆ. ಮೂರ್ತಿ, ಗೋಪುರ, ಕಲಾಕೃತಿಗಳಿಗೂ ಇದೇ ಶಿಲೆಗಳನ್ನು ಬಳಸಲಾಗಿದೆ. ಪ್ರತಿಯೊಂದು ಶಿಖರದ ಕೆತ್ತನೆಯು ರಾಮಾಯಣ, ಶಿವಪುರಾಣ, ಭಾಗವತಂ ಹಾಗೂ ಮಹಾಭಾರತದಿಂದ ಸ್ಫೂರ್ತಿ ಪಡೆದಿದೆ. ರಾಜಸ್ಥಾನದಿಂದ ಅಮೃತಶಿಲೆಗಳು, ಪಿಂಕ್‌ ಸ್ಯಾಂಡ್‌ಸ್ಟೋನ್‌ಗಳನ್ನು ಯುಎಇಗೆ ಕಳುಹಿಸಲಾಗಿದೆ. ದೇವಾಲಯದಲ್ಲಿ ಎರಡು ಶಿಖರ, 12 ಗೋಪುರಗಳಿವೆ. ಎಲ್ಲ ಕಲಾಕೃತಿಗಳ ಹಿಂದೆಯೂ ರಾಜಸ್ಥಾನ ಕಲಾವಿದರ ಕೈಚಳಕವಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version