Site icon Vistara News

Assembly Election 2023: ರಾಜಸ್ಥಾನ ವಿಧಾನಸಭೆ ಚುನಾವಣೆ ಮತದಾನ ಶುರು, ಗೆಹ್ಲೋಟ್‌ ಭವಿಷ್ಯ ಇಂದು ನಿರ್ಧಾರ

rajasthan Assembly Election 2023

ಜೈಪುರ: ರಾಜಸ್ಥಾನದ ವಿಧಾನಸಭೆ ಚುನಾವಣೆಗೆ (Rajasthan Assembly Election 2023) ಇಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮುಂಜಾನೆ 7ರಿಂದ ಮತದಾನ ಆರಂಭವಾಗಿದೆ.

ಬಿಗಿ ಭದ್ರತೆಯ ನಡುವೆ 200 ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ಸಂಜೆ 6ರವರೆಗೆ ಮತದಾನ ನಡೆಯಲಿದೆ. ರಾಜ್ಯದಲ್ಲಿ ಒಟ್ಟು 36,101 ಸ್ಥಳಗಳಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಗರ ಪ್ರದೇಶದಲ್ಲಿ ಒಟ್ಟು 10,501 ಹಾಗೂ ಗ್ರಾಮೀಣ ಪ್ರದೇಶದಲ್ಲಿ 41,006 ಮತಗಟ್ಟೆಗಳು ಇವೆ. 199 ವಿಧಾನಸಭಾ ಕ್ಷೇತ್ರಗಳಲ್ಲಿ 183 ಮಹಿಳಾ ಸ್ಪರ್ಧಿಗಳು ಸೇರಿದಂತೆ 1,875 ಅಭ್ಯರ್ಥಿಗಳಿದ್ದು, ಇವರ ಭವಿಷ್ಯವನ್ನು 5,26,90,146 ಮತದಾರರು ನಿರ್ಧರಿಸಲಿದ್ದಾರೆ.

ಒಟ್ಟು 26,393 ಮತಗಟ್ಟೆಗಳಲ್ಲಿ ಲೈವ್ ವೆಬ್ ಕಾಸ್ಟಿಂಗ್ ನಡೆಸಲಾಗುವುದು. ಜಿಲ್ಲಾ ಮಟ್ಟದ ನಿಯಂತ್ರಣ ಕೊಠಡಿಯಿಂದ ಈ ಮತಗಟ್ಟೆ ಕೇಂದ್ರಗಳ ಮೇಲೆ ನಿಗಾ ಇಡಲಾಗಿದೆ. ಈ ಮೂಲಕ ಮತದಾರರು ತಮ್ಮ ನಾಯಕರ ಭವಿಷ್ಯ ಬರೆಯಲಿದ್ದಾರೆ. ಶ್ರೀಗಂಗಾನಗರದ ಕರಣಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕರೂ ಆಗಿದ್ದ ಗುರ್ಮೀತ್ ಸಿಂಗ್ ಕೂನಾರ್ ನಿಧನದಿಂದಾಗಿ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.

ಸರ್ದಾರ್‌ಪುರ ಪ್ರಮುಖ ಕ್ಷೇತ್ರಗಳ ಪಟ್ಟಿಯಲ್ಲಿದೆ. 1998ರಿಂದ ಮುಖ್ಯಮಂತ್ರಿ, ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್ ಗೆಹ್ಲೋಟ್ ಈ ಸ್ಥಾನವನ್ನು ಗೆಲ್ಲುತ್ತ ಬಂದಿದ್ದಾರೆ. ಭಾರತೀಯ ಜನತಾ ಪಕ್ಷವು ಕಾಂಗ್ರೆಸ್‌ನ ಭದ್ರಕೋಟೆಯಲ್ಲಿ ಮಹೇಂದ್ರ ಸಿಂಗ್ ರಾಥೋಡ್ ಅವರನ್ನು ಕಣಕ್ಕಿಳಿಸಿದೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಝಲರಾಪಟನ್‌ನಿಂದ ಸ್ಪರ್ಧಿಸುತ್ತಿದ್ದಾರೆ. 2003ರಿಂದಲೂ ಇಲ್ಲಿಂದ ಗೆಲ್ಲುತ್ತಿದ್ದಾರೆ.

ಹೆಚ್ಚು ಸುದ್ದಿಯಾಗಿರುವ ಸ್ಥಾನಗಳಲ್ಲಿ ಟೋಂಕ್ ಒಂದು. ಕಾಂಗ್ರೆಸ್‌ನ ಪ್ರಮುಖ ನಾಯಕ ಮತ್ತು ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಇಲ್ಲಿ ಬಿಜೆಪಿಯ ಅಜಿತ್ ಸಿಂಗ್ ಮೆಹ್ತಾ ಅವರನ್ನು ಎದುರಿಸಲಿದ್ದಾರೆ. 2018ರಲ್ಲಿ ಪೈಲಟ್ ಬಿಜೆಪಿಯ ಯೂನುಸ್ ಖಾನ್ ಅವರನ್ನು 54,179 ಮತಗಳ ಅಂತರದಿಂದ ಸೋಲಿಸಿದ್ದರು.

ಇದನ್ನೂ ಓದಿ: Assembly Election 2023: ಮಧ್ಯಪ್ರದೇಶದಲ್ಲಿ ಶೇ.71.16, ಛತ್ತೀಸ್‌ಗಢದಲ್ಲಿ ಶೇ.68.15 ಮತದಾನ

Exit mobile version