Site icon Vistara News

Rajasthan Polls: ರಾಜಸ್ಥಾನದಲ್ಲಿ ನಾಳೆ ಮತದಾನ; ಕೈ-ಕಮಲ ಕಾದಾಟದಲ್ಲಿ ಯಾರಿಗೆ ಗದ್ದುಗೆ?

Assembly Election Results 2023 Live

Election Results 2023: How Is The Political Scenario In Four States? Who Will Win?

ಜೈಪುರ: 2024ರ ಲೋಕಸಭೆ ಚುನಾವಣೆಗೆ ಸೆಮಿಫೈನಲ್‌ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಭಾಗವಾಗಿ ಶನಿವಾರ (ನವೆಂಬರ್‌ 25) ರಾಜಸ್ಥಾನದಲ್ಲಿ ಮತದಾನ (Rajasthan Polls) ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. 200 ವಿಧಾನಸಭೆ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಲ್ಲಿ (ಒಂದು ಕ್ಷೇತ್ರದಲ್ಲಿ ಚುನಾವಣೆ ಮುಂದೂಡಿಕೆ ಆಗಿದೆ) ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇನ್ನು ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಹಾಗೂ ಕಾಂಗ್ರೆಸ್‌ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಅಧಿಕಾರದ ಗದ್ದುಗೆ ಹಿಡಿಯಲು ರಣತಂತ್ರ ರೂಪಿಸಿವೆ. ಹಾಗಾದರೆ, ರಾಜಸ್ಥಾನದಲ್ಲಿ ರಾಜಕೀಯ (Rajasthan Politics) ಸ್ಥಿತಿಗತಿ ಹೇಗಿದೆ? ಯಾವ ಪಕ್ಷದ ರಣತಂತ್ರ ಹೇಗಿದೆ? ರಾಜಕೀಯ ಪಕ್ಷಗಳ ಪ್ಲಸ್‌, ಮೈನಸ್‌ ಏನಿದೆ ಎಂಬುದರ ಕಿರು ಮಾಹಿತಿ ಇಲ್ಲಿದೆ.

ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ಇದೆ. ಅಶೋಕ್‌ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದು, ಈ ಬಾರಿಯೂ ಗೆದ್ದು ಬೀಗುವ ಉತ್ಸಾಹದಲ್ಲಿದೆ. ಮತ್ತೊಂದೆಡೆ, 2018ರಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿಯು ಈ ಬಾರಿ ಗೆದ್ದು, ಮತ್ತೆ ಅಧಿಕಾರ ಪಡೆಯಲು ಯತ್ನಿಸುತ್ತಿದೆ. ಹಾಗಾಗಿಯೇ, ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿಯು ಜನರಿಗೆ ಉಚಿತ ಕೊಡುಗೆಗಳ ಮಹಾಪೂರವೇ ಹರಿಸಿವೆ. ಹಾಗಾಗಿ, ಈ ಬಾರಿ ಮತದಾರನ ಒಲವು ಯಾರ ಪರ ಇದೆ ಎಂಬುದು ಕುತೂಹಲ ಕೆರಳಿಸಿದೆ.

ಒಟ್ಟು ಕ್ಷೇತ್ರ: 200
ಮ್ಯಾಜಿಕ್‌ ನಂಬರ್‌: 101

ಫಲಿತಾಂಶ: ಡಿಸೆಂಬರ್‌ 3

ಕಾಂಗ್ರೆಸ್‌ಗೆ ಒಳಜಗಳ, ಆಡಳಿತ ವಿರೋಧಿ ಅಲೆಯ ಭೀತಿ

ರಾಜಸ್ಥಾನದಲ್ಲಿ‌ ಅಶೋಕ್‌ ಗೆಹ್ಲೋಟ್‌ ಅವರು ಐದು ವರ್ಷ ಸ್ಥಿರ ಆಡಳಿತ ನೀಡಿದರೂ ಆಡಳಿತ ವಿರೋಧಿ ಅಲೆ ಇದೆ. ಅದರಲ್ಲೂ, ಕಾಂಗ್ರೆಸ್‌ನವರೇ ಆದ ಸಚಿನ್‌ ಪೈಲಟ್‌ ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಭ್ರಷ್ಟಾಚಾರದ ಕುರಿತು ತನಿಖೆಯಾಗಬೇಕು ಎಂದು ಪಟ್ಟು ಹಿಡಿದಿದ್ದು, ರ‍್ಯಾಲಿ ನಡೆಸಿದ್ದು ಕಾಂಗ್ರೆಸ್‌ಗೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ಇದು ಆಡಳಿತ ವಿರೋಧಿ ಅಲೆ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಚುನಾವಣೆ ಸಂದರ್ಭದಲ್ಲಿ ಅಶೋಕ್‌ ಗೆಹ್ಲೋಟ್‌ ಹಾಗೂ ಸಚಿನ್‌ ಪೈಲಟ್‌ ಅವರು ಒಗ್ಗಟ್ಟು ಪ್ರದರ್ಶಿಸಿದರೂ, ಅವರ ಬಣಗಳು ಒಂದಾಗಿಲ್ಲ ಎಂದೇ ಹೇಳಲಾಗುತ್ತಿದೆ. ತಳ ಸಮುದಾಯಗಳ ಮತಗಳು ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಟ್ಟರೂ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ಯುವಕರಲ್ಲಿ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಅಸಮಾಧಾನವಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ ಭರ್ಜರಿ ಪ್ರಚಾರ

ಅತಂತ್ರದ ಮಧ್ಯೆಯೇ ಬಿಜೆಪಿ ರಣತಂತ್ರ

ರಾಜಸ್ಥಾನದಲ್ಲಿ ಸ್ಥಳೀಯ ನಾಯಕತ್ವದ ಕೊರತೆ, ಪ್ರತಿಪಕ್ಷವಾಗಿ ಅಷ್ಟೇನೂ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡದಿರುವುದು ಸೇರಿ ಹಲವು ಆಂತರಿಕ ಸಮಸ್ಯೆಗಳನ್ನು ಹೊಂದಿದ್ದರೂ ಬಿಜೆಪಿಯು ಚುನಾವಣೆಯಲ್ಲಿ ಗೆಲುವು ಸಾಧಿಸಲು ಇನ್ನಿಲ್ಲದ ರಣತಂತ್ರ ರೂಪಿಸಿದೆ. ವಸುಂಧರಾ ರಾಜೆ ಅವರು ಬಹುತೇಕವಾಗಿ ನೇಪಥ್ಯಕ್ಕೆ ಸರಿದಿದ್ದು (ಅಥವಾ ಸರಿಸಿದ್ದು), ಸಮರ್ಥ ನಾಯಕತ್ವದ ಕೊರತೆ ಇದೆ. ಇದು ಆಂತರಿಕ ಕಚ್ಚಾಟಕ್ಕೂ ಕಾರಣವಾಗಿದೆ. ಬಿಜೆಪಿಯ ರೂಢಿಯೇ ಆಗಿರುವ ಕಾರಣ ರಾಜಸ್ಥಾನದಲ್ಲೂ ಕಮಲ ಪಾಳಯದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಹಾಗೂ ಆರ್‌ಎಸ್‌ಎಸ್‌ ಸಂಘಟನೆಯೇ ಬಿಜೆಪಿಯ ಬಲವಾಗಿದೆ.

2018ರ ಚುನಾವಣೆ ಫಲಿತಾಂಶ
ಕಾಂಗ್ರೆಸ್‌ 99
ಬಿಜೆಪಿ 73

ರಾಜಸ್ಥಾನದಲ್ಲಿ ಮುಸ್ಲಿಮರ ಜನಸಂಖ್ಯೆಯು ಶೇ.9ರಷ್ಟಿದ್ದರೂ ಅಲ್ಪಸಂಖ್ಯಾತರು ಸುಮಾರು 40 ವಿಧಾನಸಭೆ ಕ್ಷೇತ್ರಗಳ ಮೇಲೆ ಪ್ರಭಾವ ಹೊಂದಿದ್ದಾರೆ. ಹಾಗಾಗಿ, ಮೇಲ್ವರ್ಗದವರ ಮತಗಳನ್ನು ಸೆಳೆದರೂ ಬಿಜೆಪಿಗೆ ಅಲ್ಪಸಂಖ್ಯಾತರ ಮತಗಳು ಹೆಚ್ಚಾಗಿ ಲಭಿಸುವುದು ಕಷ್ಟಸಾಧ್ಯವಾಗಿದೆ. ಟೈಲರ್‌ ಕನ್ನಯ್ಯ ಲಾಲ್‌ ಹತ್ಯೆ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ, ಆಡಳಿತ ಪಕ್ಷದ ವಿರುದ್ಧದ ಅಲೆಯಷ್ಟೇ ಬಿಜೆಪಿಗೆ ವರವಾಗುವ ಸಾಧ್ಯತೆ ಇದೆ. ಇಷ್ಟೆಲ್ಲ ಸವಾಲುಗಳ ಮಧ್ಯೆಯೂ ಬಿಜೆಪಿ ಮುನ್ನಡೆ ಸಾಧಿಸುತ್ತದೆಯೇ ಎಂಬ ಪ್ರಶ್ನೆಗೆ ಚುನಾವಣೆ ಫಲಿತಾಂಶವೇ ಉತ್ತರವಾಗಲಿದೆ.

ರಾಜಸ್ಥಾನದಲ್ಲಿ ಮೋದಿ ರ‍್ಯಾಲಿ ಹವಾ

ಇದನ್ನೂ ಓದಿ: ರಾಜಸ್ಥಾನ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ; ಮಹಿಳೆ, ರೈತರಿಗೆ ಬಂಪರ್‌ ಯೋಜನೆ, ಹಗರಣ ತನಿಖೆಗೆ ಎಸ್ಐಟಿ

2023ರ ಲೋಕಸಭೆ ಚುನಾವಣೆಗೆ ಐದೂ ರಾಜ್ಯಗಳ ವಿಧಾನಸಭೆ ಚುನಾವಣೆಯು ಸೆಮಿಫೈನಲ್‌ ಎಂದೇ ಹೇಳಲಾಗುತ್ತಿದೆ. ಛತ್ತೀಸ್‌ಗಢ 11, ಮಧ್ಯಪ್ರದೇಶ 29, ಮಿಜೋರಾಂ 1, ರಾಜಸ್ಥಾನ 25 ಹಾಗೂ ತೆಲಂಗಾಣದ 17 ಲೋಕಸಭೆ ಕ್ಷೇತ್ರ ಸೇರಿ ಐದೂ ರಾಜ್ಯಗಳಲ್ಲಿ ಒಟ್ಟು 83 ಲೋಕಸಭೆ ಕ್ಷೇತ್ರಗಳಿವೆ. ಅದರಲ್ಲೂ ರಾಜಸ್ಥಾನದಲ್ಲಿ 25 ಲೋಕಸಭೆ ಕ್ಷೇತ್ರಗಳಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಎಲ್ಲ 25 ಕ್ಷೇತ್ರಗಳಲ್ಲಿ (ಬಿಜೆಪಿ 24, ಆರ್‌ಎಲ್‌ಪಿ 1) ಗೆಲುವು ಸಾಧಿಸಿತ್ತು. ಈ ಬಾರಿಯೂ ಬಿಜೆಪಿ ಕ್ಲೀನ್‌ಸ್ವೀಪ್‌ ಗುರಿ ಹೊಂದಿದ್ದು, ವಿಧಾನಸಭೆ ಚುನಾವಣೆಯ ಗೆಲುವು ಮಹತ್ವ ಎನಿಸಿದೆ. ಅತ್ತ ಕಾಂಗ್ರೆಸ್‌ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮುನ್ನಡೆ ಸಾಧಿಸಲು ವಿಧಾನಸಭೆ ಚುನಾವಣೆಯ ಗೆಲುವು ಮಹತ್ವದ್ದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version