ಜೈಪುರ: ರಾಷ್ಟ್ರೀಯ ರಜಪೂತ ಕರ್ಣಿ ಸೇನಾ (Karni Sena) ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ (Sukhdev Singh Gogamedi) ಅವರನ್ನು ನಿನ್ನೆ ಗುಂಡಿಕ್ಕಿ ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ಇಂದು ರಾಜಸ್ಥಾನ ಬಂದ್‌ಗೆ (Rajasthan bandh) ಕರ್ಣಿ ಸೇನೆ ಕರೆ ನೀಡಿದೆ. ಹಿಂದೂ ಸಂಘಟನೆಗಳು ರೊಚ್ಚಿಗೆದ್ದಿದ್ದು, ರಾಜಸ್ಥಾನದ ವಿವಿಧೆಡೆ ಪ್ರತಿಭಟನೆ ಭುಗಿಲೆದ್ದಿದೆ.
ರಾಜಸ್ಥಾನದಲ್ಲಿ ರಜಪೂತ ನಾಯಕನ ಹತ್ಯೆ ಬಳಿಕ ಪ್ರತಿಭಟನೆ ಭುಗಿಲೆದ್ದಿದೆ. ಸುಖದೇವ್ ಸಿಂಗ್ ಗೊಗಮೆಡಿ ಬೆಂಬಲಿಗರು ಜೈಪುರದ ಆಸ್ಪತ್ರೆಯ ಹೊರಭಾಗದಲ್ಲಿ ರಸ್ತೆ ತಡೆದು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪ್ರತಿಭಟಿಸಿದ್ದಾರೆ. ಚುರು, ಉದಯಪುರ, ಅಲ್ವಾರ್ ಮತ್ತು ಜೋಧ್‌ಪುರ ಜಿಲ್ಲೆಗಳಲ್ಲಿಯೂ ಪ್ರತಿಭಟನೆಗಳು ಭುಗಿಲೆದ್ದಿವೆ. ಆರೋಪಿಗಳ ಮೇಲೆ ದಾಳಿ ನಡೆಸಿ ಶೀಘ್ರವಾಗಿ ಬಂಧಿಸಲಾಗುವುದು, ಎಲ್ಲರೂ ಶಾಂತಿ ಕಾಪಾಡಬೇಕು ಎಂದು ರಾಜಸ್ಥಾನದ ಪೊಲೀಸ್ ಮುಖ್ಯಸ್ಥ ಉಮೇಶ್ ಮಿಶ್ರಾ ಮನವಿ ಮಾಡಿದ್ದಾರೆ.
ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಕಂಡ ಬಳಿಕ ಇದೀಗ ಕರ್ಣಿ ಸೇನಾ ಅಧ್ಯಕ್ಷನ ಹತ್ಯೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಸುಖದೇವ್ ಸಿಂಗ್ ಗೊಗಮೆಡಿ ಈ ಮೊದಲು ಮಾತನಾಡಿರುವ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಹಿಂದಿನ ಸಿಎಂ ಅಶೋಕ್ ಗೆಹ್ಲೋಟ್ (ashok gehlot) ಅವರು ತಮ್ಮ ಭದ್ರತೆಯನ್ನು ಕಡಿತಗೊಳಿಸಿದ್ದಾರೆ ಎಂದು ವಿಡಿಯೊದಲ್ಲಿ ಗೊಗಮೆಡಿ ಹೇಳಿಕೊಂಡಿದ್ದರು.
ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್, ರಾಜ್ಯವರ್ಧನ್ ರಾಥೋಡ್ ಸೇರಿದಂತೆ ಎಲ್ಲಾ ಪ್ರಮುಖ ರಾಜಕೀಯ ನಾಯಕರು ಹತ್ಯೆಯನ್ನು ಖಂಡಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ರಾಜಸ್ಥಾನ ಜಂಗಲ್ ರಾಜ್‌ಗೆ ಮರಳಿದೆ ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಟೀಕಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಶ್ಯಾಮ್ ನಗರ ಪ್ರದೇಶದಲ್ಲಿ ಸುಖದೇವ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು. ಗೊಗಮೆಡಿ ಅವರ ಮನೆಗೆ ನುಗ್ಗಿದ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಅವರ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಶೂಟೌಟ್‌ನ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ರೋಹಿತ್ ಗೋಡಾರಾ ಕಪುರಿಸರ್ ಗೊಗಮೆಡಿ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾನೆ.
ಸುಖದೇವ್ ಸಿಂಗ್ ಗೊಗಮೆಡಿ ಅವರು ಲೋಕೇಂದ್ರ ಸಿಂಗ್ ಕಲ್ವಿಯವರ ರಜಪೂತ್ ಕರ್ಣಿ ಸೇನೆಯ ಭಾಗವಾಗಿದ್ದರು. ಈ ಸಂಘಟನೆ ಸಂಜಯ್ ಲೀಲಾ ಬನ್ಸಾಲಿಯವರ ‘ಪದ್ಮಾವತ್’ ಸಿನಿಮಾದ ವಿರುದ್ಧ ಪ್ರತಿಭಟನೆ ನಡೆಸಿ ಗಮನ ಸೆಳೆದಿತ್ತು. ನಂತರ ಆಂತರಿಕ ಗಲಾಟೆಯಿಂದ ಗೊಗಮೆಡಿ ತಮ್ಮದೇ ಪ್ರತ್ಯೇಕ ಕರ್ಣಿ ಸೇನೆಯನ್ನು ಕಟ್ಟಿದ್ದರು.
ದೀಪಿಕಾ ಪಡುಕೋಣೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ‘ಪದ್ಮಾವತ್’ ಸಿನಿಮಾ ವಿರೋಧಿಸಿ ಮತ್ತು ಗ್ಯಾಂಗ್‌ಸ್ಟರ್ ಆನಂದ್‌ಪಾಲ್ ಎನ್‌ಕೌಂಟರ್ ಪ್ರಕರಣದ ನಂತರ ರಾಜಸ್ಥಾನದಲ್ಲಿ ಪ್ರತಿಭಟನೆ ನಡೆಸುವ ಗೊಗಮೆಡಿ ಬೆಳಕಿಗೆ ಬಂದಿದ್ದರು.
ಇದನ್ನೂ ಓದಿ: Sukhdev Singh Gogamedi: ರಜಪೂತ್ ಕರ್ಣಿ ಸೇನಾ ಮುಖಂಡ ಸುಖ್ದೇವ್ ಗೋಗಮೇಡಿ ಗುಂಡಿಟ್ಟು ಹತ್ಯೆ