Site icon Vistara News

Rajasthan Election: ಝಲರ್‌ಪಟಾನ್‌ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ವಸುಂಧರಾ ರಾಜೆ; ನಿವೃತ್ತಿ ವದಂತಿಗೆ ಬ್ರೇಕ್‌

vasundhara

vasundhara

ಜೈಪುರ: ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ (Rajasthan Election) ಬಿಜೆಪಿ (BJP) ಭರ್ಜರಿ ಸಿದ್ಧತೆ ನಡೆಸಿದೆ. ಶನಿವಾರ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕಿ ವಸುಂಧರಾ ರಾಜೆ (Vasundhara Raje) ಝಲರ್‌ಪಟಾನ್‌ (Jhalrapatan) ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.

ವಸುಂಧರಾ ರಾಜೆ ನಾಮಪತ್ರ ಸಲ್ಲಿಕೆ ವೇಳೆ ಹಿರಿಯ ನಾಯಕ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು. ಈ ಬಗ್ಗೆ ಪ್ರಹ್ಲಾದ್‌ ಜೋಶಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ʼʼರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕಿ ವಸುಂಧರಾ ರಾಜೆ ರಾಜಸ್ಥಾನದ ಝಲರ್‌ಪಟಾನ್‌ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ನಾಮನಿರ್ದೇಶನ ಸಂದರ್ಭದಲ್ಲಿ ನಮ್ಮ ಉತ್ಸಾಹಿ ಕಾರ್ಯಕರ್ತರೊಂದಿಗೆ ನಾನು ಭಾಗವಹಿಸಿದ್ದೆʼʼ ಎಂದು ಅವರು ಬರೆದುಕೊಂಡಿದ್ದಾರೆ.

ವದಂತಿಗೆ ತೆರೆ ಎಳೆದ ನಾಯಕಿ

ನಾಮಪತ್ರ ಸಲ್ಲಿಸುವ ಮೂಲಕ ವಸುಂಧರಾ ರಾಜೆ ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದುವ ಬಗ್ಗೆ ಇದ್ದ ಊಹಾಪೋಹಗಳನ್ನು ತಳ್ಳಿ ಹಾಕಿದ್ದಾರೆ. “ನಾನು ಎಲ್ಲಿಗೂ ಹೋಗುವುದಿಲ್ಲ, ನಾನು ನಾಮಪತ್ರವನ್ನು ಸಲ್ಲಿಸಿದ್ದೇನೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನಿವೃತ್ತಿಯ ಬಗ್ಗೆ ಏನನ್ನೂ ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ” ಎಂದು ಅವರು ಹೇಳಿದ್ದಾರೆ. 2003ರಿಂದ ಅವರು ಝಲರ್‌ಪಟಾನ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ರಾಜೆ 2003ರಲ್ಲಿ ಝಲರ್‌ಪಟಾನ್‌ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅಂದು ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಚಿನ್ ಪೈಲಟ್ ಅವರ ತಾಯಿ ರಮಾ ಪೈಲಟ್ ಅವರನ್ನು ಸೋಲಿಸಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿತು ಮತ್ತು ರಾಜೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.

2008ರಲ್ಲಿ ಬಿಜೆಪಿ ಚುನಾವಣೆಯಲ್ಲಿ ಸೋತಿತು, ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವನ್ನು ರಚಿಸಿತ್ತು. ಆದರೆ ರಾಜೆ ಆ ಬಾರಿಯೂ ಝಲರ್‌ಪಟಾನ್‌ನಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಮೋಹನ್ ಲಾಲ್ ರಾಥೋಡ್ ಅವರನ್ನು ಸೋಲಿಸಿದ್ದರು.

2013ರಲ್ಲಿ ಮತ್ತೆ ಇತಿಹಾಸ ಮರುಕಳಿಸಿತ್ತು. ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನಗಳ ಪೈಕಿ 163 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ರಾಜೆ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ಚಂದ್ರಾವತ್ ಅವರನ್ನು 60,000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು.

ಇದನ್ನೂ ಓದಿ: Free Ration: 80 ಕೋಟಿ ಜನರಿಗೆ 5 ವರ್ಷ ಉಚಿತ ಪಡಿತರ; ಮೋದಿ ಮಹತ್ವದ ಘೋಷಣೆ

ಪರ್ಯಾಯ ಸರ್ಕಾರವನ್ನು ಆಯ್ಕೆ ಮಾಡುವ ರಾಜಸ್ಥಾನ ಮಂದಿ 2018ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ಗೆ ಮಣೆ ಹಾಕಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ ಸೋತಿತು ಮತ್ತು ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಹಿಡಿಯಿತು. ಆದಾಗ್ಯೂ ರಾಜೆ ವರ್ಚಸ್ಸು ಕುಂದಿರಲಿಲ್ಲ. ಅವರು ಕಾಂಗ್ರೆಸ್‌ನ ಮನ್ವೇಂದ್ರ ಸಿಂಗ್ ಅವರನ್ನು ಸೋಲಿಸುವ ಮೂಲಕ ತಮ್ಮ ಭದ್ರಕೋಟೆಯನ್ನು ಉಳಿಸಿಕೊಂಡರು. ಮನ್ವೇಂದ್ರ ಸಿಂಗ್ ಮಾಜಿ ಕೇಂದ್ರ ಸಚಿವ ಜಸ್ವಂತ್‌ ಸಿಂಗ್‌ ಅವರ ಪುತ್ರ ಎನ್ನುವುದು ವಿಶೇಷ.

ಈ ಬಾರಿಯ ರಾಜಸ್ಥಾನ ಚುನಾವಣೆ ಕುತೂಹಲ ಮೂಡಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುವ ನಿರೀಕ್ಷೆ ಇದೆ. ಇಲ್ಲಿ ನವೆಂಬರ್‌ 25ರಂದು ಚುನಾವಣೆ ನಡೆದು ಡಿಸೆಂಬರ್‌ 3ರಂದು ಫಲಿತಾಂಶ ಹೊರ ಬೀಳಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version