Site icon Vistara News

Rajasthan Election: ರಾಜಸ್ಥಾನ ಉಪಚುನಾವಣೆಯಲ್ಲಿ ಸಚಿವರಿಗೆ ಸೋಲು, ಬಿಜೆಪಿಗೆ ಹಿನ್ನಡೆ

Assam Congress Leaders joined BJP party

ಜೈಪುರ: ರಾಜಸ್ಥಾನ ಸರ್ಕಾರದಲ್ಲಿ ಸಚಿವರಾಗಿರುವ ಬಿಜೆಪಿ ಅಭ್ಯರ್ಥಿ ವಿಧಾನಸಭೆ ಉಪ ಚುನಾವಣೆಯಲ್ಲಿ ಸೋಲನ್ನುಂಡಿದ್ದು, ಬಿಜೆಪಿಗೆ ಹಿನ್ನಡೆಯಾಗಿದೆ.

ರಾಜಸ್ಥಾನದ ಕರಣ್‌ಪುರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುರೇಂದರ್‌ಪಾಲ್ ಸಿಂಗ್ ಸೋಲನ್ನು ಅನುಭವಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರೂಪಿಂದರ್ ಸಿಂಗ್ ಕೂನರ್ ಅವರು ಸೋಮವಾರ ಬಿಜೆಪಿಯ ಸುರೇಂದರ್‌ಪಾಲ್ ಸಿಂಗ್ ಅವರನ್ನು ಸೋಲಿಸಿದ್ದಾರೆ. ರೂಪಿಂದರ್ ಸಿಂಗ್ 94,950 ಮತಗಳನ್ನು ಪಡೆದು 11,284 ಅಂತರದಿಂದ ಜಯ ಗಳಿಸಿದ್ದಾರೆ.

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (ashok gehlot) ಅವರು ರೂಪಿಂದರ್ ಸಿಂಗ್ ಅವರನ್ನು ಅಭಿನಂದಿಸಿದ್ದಾರೆ. “ಕರಣಪುರದ ಜನತೆ ಬಿಜೆಪಿಯ ಅಹಂಕಾರವನ್ನು ಸೋಲಿಸಿದ್ದಾರೆ. ಚುನಾವಣೆಗೂ ಮುನ್ನವೇ ತನ್ನ ಅಭ್ಯರ್ಥಿಯನ್ನು ಮಂತ್ರಿ ಮಾಡುವ ಮೂಲಕ ನೀತಿ ಸಂಹಿತೆ ಮತ್ತು ನೈತಿಕತೆಯನ್ನು ಉಲ್ಲಂಘಿಸಿದ ಬಿಜೆಪಿಗೆ ಸಾರ್ವಜನಿಕರು ತಕ್ಕ ಪಾಠ ಕಲಿಸಿದ್ದಾರೆ” ಎಂದು ಗೆಹ್ಲೋಟ್‌ ಹೇಳಿದ್ದಾರೆ.

ಕರಣ್‌ಪುರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿದ್ದರೂ, ಡಿಸೆಂಬರ್ 30ರಂದು ಭಜನ್‌ಲಾಲ್ ಸರ್ಕಾರದ ಇತ್ತೀಚಿನ ಸಂಪುಟ ವಿಸ್ತರಣೆಯಲ್ಲಿ ಸುರೇಂದರ್‌ಪಾಲ್ ಸಿಂಗ್ ಅವರನ್ನು ಸಚಿವರನ್ನಾಗಿ ನೇಮಿಸಲಾಗಿತ್ತು. ಅಸೆಂಬ್ಲಿ ಉಪಚುನಾವಣೆಯ ಅಭ್ಯರ್ಥಿಯಾಗಿರುವಾಗಲೇ ಸಿಂಗ್ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರಿಂದ ನೀತಿ ಸಂಹಿತೆಯ ಉಲ್ಲಂಘನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆಕ್ಷೇಪ ಎತ್ತಿತ್ತು.

ನವೆಂಬರ್ 25ರಂದು ರಾಜಸ್ಥಾನದ 200 ವಿಧಾನಸಭಾ ಸ್ಥಾನಗಳಲ್ಲಿ 199ಕ್ಕೆ ಮತದಾನ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನರ್ ಅವರ ಅಕಾಲಿಕ ನಿಧನದಿಂದಾಗಿ ಕರಣ್‌ಪುರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು. ರಾಜ್ಯ ಚುನಾವಣೆಗೆ ಹತ್ತು ದಿನಗಳ ಮೊದಲು ಗುರ್ಮೀತ್ ಅವರ ಸಾವು ಸಂಭವಿಸಿತ್ತು. ಅನುಕಂಪದ ಮತಗಳನ್ನು ಗಳಿಸುವ ಗುರಿಯೊಂದಿಗೆ ಕರಣಪುರ ಉಪಚುನಾವಣೆಯಲ್ಲಿ ಅವರ ಮಗ ರೂಪಿಂದರ್ ಸಿಂಗ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು.

ರಾಜಸ್ಥಾನದಲ್ಲಿ ಬಿಜೆಪಿ 199ರಲ್ಲಿ 115 ಸ್ಥಾನಗಳನ್ನು ಪಡೆಯುವ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ವಿಜಯಶಾಲಿಯಾಗಿದೆ. ಕಾಂಗ್ರೆಸ್ 69 ಸ್ಥಾನಗಳನ್ನು ಪಡೆದುಕೊಂಡಿದೆ. ಇದೀಗ ಮತ್ತೊಂದು ಸ್ಥಾನ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದೆ.

ಇದನ್ನೂ ಓದಿ: Rajasthan Election Result: ರಾಜಸ್ಥಾನದಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ? ಇಲ್ಲಿವೆ ಪ್ರಮುಖ ಕಾರಣಗಳು

Exit mobile version