ಜೈಪುರ: ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ಉಲ್ಬಣಿಸಿದೆ. ತಡರಾತ್ರಿಯ ಬೆಳವಣಿಗೆಗಳಲ್ಲಿ, ಸುಮಾರು 80 ಕಾಂಗ್ರೆಸ್ ಶಾಸಕರ ಗುಂಪು ತಮ್ಮ ರಾಜೀನಾಮೆಯನ್ನು ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅವರಿಗೆ ಸಲ್ಲಿಸಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿಷ್ಠಾವಂತರ ಬಣದಿಂದಲೇ ಮುಂದಿನ ಮುಖ್ಯಮಂತ್ರಿಯನ್ನು ಆರಿಸಬೇಕು ಎನ್ನುವುದು ಇವರ ಒತ್ತಡವಾಗಿದೆ.
ಮುಂದಿನ ತಿಂಗಳು ನಡೆಯಲಿರುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆರಿಸಲಾಗುತ್ತಿದೆ ಎಂಬ ವಿಚಾರ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಗೆಹ್ಲೋಟ್ ಅವರ ಉತ್ತರಾಧಿಕಾರಿಯ ಬಗ್ಗೆ ನಿರ್ಣಯಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯನ್ನು ಕರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಗೆಹ್ಲೋಟ್‌ಗೆ ನಿಷ್ಠರಾಗಿರುವ ಶಾಸಕರ ಗುಂಪು ರಾಜ್ಯ ಸಚಿವ ಶಾಂತಿ ಧರಿವಾಲ್ ಅವರ ನಿವಾಸದಲ್ಲಿ ಸಭೆ ನಡೆಸಿ ನಂತರ ರಾಜೀನಾಮೆ ಸಲ್ಲಿಸಲು ಸ್ಪೀಕರ್ ಸಿಪಿ ಜೋಶಿ ಅವರ ನಿವಾಸಕ್ಕೆ ತೆರಳಿತು. ಸುಮಾರು 90ಕ್ಕೂ ಅಧಿಕ ಶಾಸಕರ ಗುಂಪು ರಾಜೀನಾಮೆ ಪತ್ರವನ್ನು ಸಲ್ಲಿಸಿದೆ ಎಂದು ನಂಬಲಾಗಿದೆ.
ಶಾಸಕರು ತಮ್ಮ ರಾಜೀನಾಮೆ ಸಲ್ಲಿಸಲು ಸ್ಪೀಕರ್ ಮನೆಗೆ ಬಸ್ ಹತ್ತಿದ ಕೆಲ ಗಂಟೆಗಳ ನಂತರ, ಶಾಂತಿ ಧರಿವಾಲ್, ಮಹೇಶ್ ಜೋಶಿ, ಪ್ರತಾಪ್ ಸಿಂಗ್ ಮತ್ತು ಸ್ವತಂತ್ರ ಶಾಸಕ ಸಂಯಮ್ ಲೋಧಾ ಅವರ ನಾಲ್ಕು ಸದಸ್ಯರ ನಿಯೋಗವು ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಅವರನ್ನು ಭೇಟಿಯಾಗಿದೆ. ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗಳು ಮುಗಿದ ಬಳಿಕ ಅಕ್ಟೋಬರ್ 19ರ ನಂತರ CLP ಸಭೆ ನಡೆಯಬೇಕು ಎಂದು ಶಾಸಕರು ಒತ್ತಡ ಹಾಕಿದ್ದಾರೆ.
ಪಕ್ಷದ ಅಧ್ಯಕ್ಷೀಯ ಚುನಾವಣೆಯ ರೇಸ್‌ನಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಶಶಿ ತರೂರ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆಯ್ಕೆಯಾದರೆ ಪಕ್ಷದ ʻಒಬ್ಬ ವ್ಯಕ್ತಿ, ಒಂದು ಹುದ್ದೆ’ ನಿಯಮದಡಿಯಲ್ಲಿ ಗೆಹ್ಲೋಟ್ ಸಿಎಂ ಕುರ್ಚಿಯನ್ನು ತೊರೆಯಬೇಕಾಗುತ್ತದೆ. ಹೈಕಮಾಂಡ್ ಸಚಿನ್ ಪೈಲಟ್ ಅವರನ್ನು ಉತ್ತರಾಧಿಕಾರಿಯಾಗಿಸುವ ಕುರಿತು ಒಲವು ಹೊಂದಿದೆ. ಆದರೆ ಗೆಹ್ಲೋಟ್ ನಿಷ್ಠಾವಂತರಿಗೆ ಇದು ಅಸಮಾಧಾನ ತಂದಿದ್ದು, ಗೆಹ್ಲೋಟ್ ಬಳಗದಲ್ಲಿಯೇ ಯಾರಾದರೂ ಸಿಎಂ ಆಗಬೇಕು ಎಂದು ಒತ್ತಡ ಹಾಕಿದ್ದಾರೆ.
2018ರ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ, ಗೆಹ್ಲೋಟ್ ಮತ್ತು ಪೈಲಟ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಲಹ ಸೃಷ್ಟಿಯಾಗಿತ್ತು. ಪೈಲಟ್ ಅವರನ್ನು ಸಮಾಧಾನಿಸಿ ಡಿಸಿಎಂ ಹೊಣೆ ನೀಡಲಾಗಿತ್ತು. ಜುಲೈ 2020ರಲ್ಲಿ ಗೆಹ್ಲೋಟ್ ವಿರುದ್ಧ ಪೈಲಟ್ ಬಂಡಾಯವೆದ್ದಿದ್ದರು. ಅವರನ್ನು ಬೆಂಬಲಿಸಿದ ಶಾಸಕರೊಂದಿಗೆ ಹರಿಯಾಣದಲ್ಲಿ ಬಿಡಾರ ಹೂಡಿದ್ದರು. ನಂತರ ಹೈಕಮಾಂಡ್ ಮನವೊಲಿಕೆಯಿಂದ ಗೆಹ್ಲೋಟ್ ಜತೆ ರಾಜಿ ಮಾಡಿಕೊಂಡಿದ್ದರು.
2020ರ ಬಿಕ್ಕಟ್ಟಿನ ಸಂದರ್ಭದಲ್ಲಿ ಪಕ್ಷದ ಪರವಾಗಿ ನಿಂತ 102 ಶಾಸಕರಲ್ಲಿ ಒಬ್ಬರನ್ನು ಮುಖ್ಯಮಂತ್ರಿಯಾಗಿ ನೇಮಿಸಬೇಕು. ಹೊಸ ಮುಖ್ಯಮಂತ್ರಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೆಹ್ಲೋಟ್ ಭಾಗವಾಗಬೇಕು ಎಂದು ಶಾಸಕರ ಒತ್ತಡ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಮುಖ್ಯಮಂತ್ರಿಯ ಆಯ್ಕೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ. ಇದಕ್ಕೂ ಮುನ್ನ ಭಾನುವಾರ ಸಂಜೆ ಕಾಂಗ್ರೆಸ್ ವೀಕ್ಷಕರಾದ ಮಲ್ಲಿಕಾರ್ಜುನ ಖರ್ಗೆ, ಅಜಯ್ ಮಾಕನ್, ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಬೇಕಿದ್ದ ಮುಖ್ಯಮಂತ್ರಿ ನಿವಾಸಕ್ಕೆ ಆಗಮಿಸಿದ್ದರು.