Site icon Vistara News

LPG Price: ಗೃಹಿಣಿಯರಿಗೆ ಗುಡ್‌ ನ್ಯೂಸ್;‌ ಜನವರಿ 1ರಿಂದ ಎಲ್‌ಪಿಜಿ ಸಿಲಿಂಡರ್‌ ಬೆಲೆ 450 ರೂ.!

LPG

ಜೈಪುರ: ದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್‌ (LPG Cylinder) ಬೆಲೆ ಏರಿಕೆ (LPG Price) ಕುರಿತು ಟೀಕೆಗಳು ವ್ಯಕ್ತವಾಗುತ್ತಲೇ ಇರುತ್ತವೆ. ಇದರ ಬೆನ್ನಲ್ಲೇ ರಾಜಸ್ಥಾನದ ಬಿಜೆಪಿ ಸರ್ಕಾರವು (Rajasthan BJP Government) ಗೃಹಿಣಿಯರಿಗೆ ಗುಡ್‌ ನ್ಯೂಸ್‌ ನೀಡಿದೆ. ಅಡುಗೆ ಅನಿಲ ಸಿಲಿಂಡರ್‌ ಬೆಲೆಯಲ್ಲಿ 50 ರೂ. ಇಳಿಕೆ ಮಾಡಲಾಗಿದೆ. ಇದರಿಂದಾಗಿ, ಜನವರಿ 1ರಿಂದ ರಾಜಸ್ಥಾನದ ನಾಗರಿಕರಿಗೆ 450 ರೂ.ಗೆ ಒಂದು ಎಲ್‌ಪಿಜಿ ಸಿಲಿಂಡರ್‌ ಸಿಗಲಿದೆ. ಇದರೊಂದಿಗೆ ಬಿಜೆಪಿಯು ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಿದಂತಾಗಿದೆ.

ರಾಜಸ್ಥಾನದಲ್ಲಿ ಇದುವರೆಗೆ ಒಂದು ಎಲ್‌ಪಿಜಿ ಸಿಲಿಂಡರ್‌ಗೆ 500 ರೂ. ಇತ್ತು. ಈಗ ಮುಖ್ಯಮಂತ್ರಿ ಭಜನ್‌ ಲಾಲ್‌ ಶರ್ಮಾ ಅವರು ಎಲ್‌ಪಿಜಿ ಬೆಲೆಯನ್ನು 50 ರೂ. ಇಳಿಸಿದ್ದಾರೆ. ಪಿಎಂ ಉಜ್ವಲ ಯೋಜನೆ ಅಡಿಯಲ್ಲಿ ರಾಜ್ಯದ ಜನರು 450 ರೂ.ಗೆ ಅಡುಗೆ ಅನಿಲ ಸಿಲಿಂಡರ್‌ ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ಫಲಾನುಭವಿ ಮಹಿಳೆಯರ ಖಾತೆಗೆ ನೇರವಾಗಿ ಸಬ್ಸಿಡಿಯ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಇದರೊಂದಿಗೆ ಬಿಜೆಪಿ ಸರ್ಕಾರವು ನುಡಿದಂತೆ ನಡೆದಿದೆ ಎಂದು ಭಜನ್‌ ಲಾಲ್‌ ಶರ್ಮಾ ತಿಳಿಸಿದ್ದಾರೆ.

ಚುನಾವಣೆ ವೇಳೆ ಭರವಸೆ

ಅಡುಗೆ ಅನಿಲ ಸಿಲಿಂಡರ್‌ ದರವನ್ನು ಇಳಿಸುವುದಾಗಿ ಚುನಾವಣೆ ವೇಳೆಯೇ ಬಿಜೆಪಿ ಘೋಷಿಸಿತ್ತು. ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರವನ್ನು ಸೋಲಿಸಿ, ಜನರು ಬಿಜೆಪಿಗೆ ಅಧಿಕಾರ ನೀಡಿದರೆ 450 ರೂ.ಗೆ ಅಡುಗೆ ಅನಿಲ ಸಿಲಿಂಡರ್‌ ನೀಡಲಾಗುತ್ತದೆ ಎಂದು ಘೋಷಿಸಿತ್ತು. ಚುನಾವಣೆ ರ‍್ಯಾಲಿ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಕೂಡ ಇದೇ ಭರವಸೆಯನ್ನು ನೀಡಿದ್ದರು. ರಾಜಸ್ಥಾನದಲ್ಲಿ ಬಿಜೆಪಿಯು ಇನ್ನೂ ಹಲವು ಭರವಸೆಗಳನ್ನು ನೀಡಿದ್ದು, ಹಂತ ಹಂತವಾಗಿ ಈಡೇರಿಸುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: LPG Subsidy: ಎಲ್‌ಪಿಜಿ ಸಬ್ಸಿಡಿ ಸಿಗಬೇಕೆಂದರೆ ಡಿಸೆಂಬರ್‌ 31ರೊಳಗೆ ಈ ಕೆಲಸ ಮಾಡಲೇಬೇಕು!

ರಾಜಸ್ಥಾನದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 115 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿದೆ. ಒಟ್ಟು 199 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 115, ಕಾಂಗ್ರೆಸ್‌ 69, ಬಿಎಸ್‌ಪಿ 2 ಹಾಗೂ 13 ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರ ಇತ್ತು. ಆದರೆ, ಆಡಳಿತ ವಿರೋಧಿ ಅಲೆ, ಆಂತರಿಕ ಕಿತ್ತಾಟ ಹಾಗೂ ಬಿಜೆಪಿ ವರ್ಚಸ್ಸಿನಿಂದಾಗಿ ಕಾಂಗ್ರೆಸ್‌ ಸೋಲುಂಡಿತು. ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲೂ ಬಿಜೆಪಿ ಗೆಲುವು ಸಾಧಿಸಿದ್ದು, ಇಲ್ಲೂ ಹಲವು ಭರವಸೆಗಳನ್ನು ಈಡೇರಿಸಲು ಮುಂದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version