ಜೈಪುರ: ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ (Sirohi District) ನಡೆದ ಶಿವರಾತ್ರಿ ಹಬ್ಬದ (Shivratri Celebrations) ಆಚರಣೆ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಪೊಲೀಸ್ ಕಾನ್‌ಸ್ಟೆಬಲ್ (Police Constable) ಒಬ್ಬರಿಗೆ ದುಷ್ಕರ್ಮಿಯು ಚಾಕು ಇರಿದಿದ್ದು, ಪೇದೆ ಮೃತಪಟ್ಟಿದ್ದಾರೆ. ಪೊಲೀಸ್ ಪೇದೆಯ ಕುತ್ತಿಗೆಗೆ ಚಾಕು ಇರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಿರೋಹಿ ಜಿಲ್ಲೆಯ ಲೌಟಾನ ಗ್ರಾಮದಲ್ಲಿ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಜಾತ್ರೆ ನಡೆಯುತ್ತಿತ್ತು. ಸಾವಿರಾರು ಜನ ಜಾತ್ರೆಯಲ್ಲಿ ಸೇರಿದ್ದರು. ಇದೇ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಇದೇ ವೇಳೆ ಪೊಲೀಸ್ ಪೇದೆ ನಿರಂಜನ್ ಸಿಂಗ್ ಅವರು ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿದ್ದಾರೆ. ಆದರೆ, ಉದ್ರಿಕ್ತ ಗುಂಪಿನಲ್ಲಿದ್ದ ಪ್ರವೀಣ್ ಗರಾಸಿಯಾ ಎಂಬಾತನು ಪೊಲೀಸ್ ಪೇದೆಯ ಕುತ್ತಿಗೆಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ನಿರಂಜನ್ ಸಿಂಗ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ನಿರಂಜನ್ ಸಿಂಗ್ ಅವರಿಗೆ ಚಾಕು ಇರಿದ ಪ್ರವೀಣ್ ಗರಾಸಿಯಾ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದೆ. ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಡೆದ ಮೆರವಣಿಗೆ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. “ಪ್ರಕರಣದ ಪ್ರಮುಖ ಆರೋಪಿಗಾಗಿ ತನಿಖಾ ತಂಡವನ್ನು ರಚಿಸಲಾಗಿದೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Murder Case : ಡ್ಯಾನ್ಸ್ ಮಾಡುವಾಗ ಮೈ ಟಚ್ ಆಗಿದ್ದಕ್ಕೆ ಯುವಕನ ಬರ್ಬರ ಕೊಲೆ
ಮುಖ್ಯಮಂತ್ರಿ ಸಂತಾಪ
ಪೊಲೀಸ್ ಪೇದೆ ನಿರಂಜನ್ ಸಿಂಗ್ ಅವರ ಸಾವಿಗೆ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಸಂತಾಪ ಸೂಚಿಸಿದ್ದಾರೆ. ಅಷ್ಟೇ ಅಲ್ಲ, ಪರಿಹಾರ ನೀಡುವ ಜತೆಗೆ ಅವರ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದಾರೆ. ಪೊಲೀಸ್ ಇಲಾಖೆಯ ಪರಿಹಾರ ಸೇರಿ ನಿರಂಜನ್ ಸಿಂಗ್ ಅವರ ಕುಟುಂಬಸ್ಥರಿಗೆ 1.35 ಕೋಟಿ ರೂಪಾಯಿ ನೀಡಲಾಗುತ್ತದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ