Site icon Vistara News

Rajendra Nagar Tragedy: ನೆಲಮಾಳಿಗೆ ಗೇಟ್‌ಗೆ SUV ಕಾರು ಡಿಕ್ಕಿ ಹೊಡೆದಿದ್ದ ಚಾಲಕ ಅರೆಸ್ಟ್‌- ವಿಡಿಯೋ ವೈರಲ್‌

Rajendra Nagara tragedy

ನವದೆಹಲಿ: ಮೂವರು ಐಎಎಸ್‌ ಆಕಾಂಕ್ಷಿ ವಿದ್ಯಾರ್ಥಿ(UPSC aspirants)ಗಳನ್ನು ಬಲಿ ಪಡೆದ ದೆಹಲಿಯ(Delhi Flood) ರಾಜೇಂದ್ರ ನಗರ ದುರಂತ(Rajendra Nagar Tragedy)ಪ್ರಕರಣದ ಪ್ರಮುಖ ಆರೋಪಿಯನ್ನು ಅರೆಸ್ಟ್‌ ಮಾಡಲಾಗಿದೆ. SUV ಕಾರಿನ ಚಾಲಕನನ್ನು ಆರೆಸ್ಟ್‌ ಮಾಡಲಾಗಿದ್ದು, ಈತ ಪ್ರವಾಹದ ನಡುವೆಯೇ ವೇಗವಾಗಿ ಕಾರು ಚಲಾಯಿಸಿ ಅದರ ಪರಿಣಾಮವಾಗಿ IAS ಕೋಚಿಂಗ್‌ ಸೆಂಟರ್‌ನ ಗೇಟು ಮುರಿದಿದ್ದಾನೆ. ಇದರ ಪರಿಣಾಮವಾಗಿ ನೆಲಮಾಳಿಗೆಗೆ ನೀರು ನುಗ್ಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಐವರನ್ನು ಅರೆಸ್ಟ್‌ ಮಾಡಲಾಗಿದೆ. ಕೋಚಿಂಗ್‌ ಸೆಂಟರ್‌ ಮಾಲಿಕ ಅಭಿಷೇಕ್‌ ಗುಪ್ತಾ ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದೆ. ಎಸ್‌ಯುವಿ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಕಟ್ಟಡದ ಗೇಟ್‌ ಮುರಿದು ಬಿದ್ದಿತ್ತು ಎನ್ನಲಾಗಿದೆ. ಇನ್ನು ಈ ಸಂಬಂಧ ಸಿಸಿಟಿವಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಕಾರು ಚಾಲಕನ ನಿರ್ಲಕ್ಷ್ಯಕ್ಕಾಗಿ ಆತನನ್ನು ಆರೆಸ್ಟ್‌ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದೆಹಲಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಐಎಎಸ್‌ ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ರಾಜೇಂದ್ರ ನಗರದಲ್ಲಿರುವ ರಾವ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ (Rau’s IAS Coaching Institute)ನಲ್ಲಿ ಈ ದುರಂತ ಸಂಭವಿಸಿದೆ. ಶನಿವಾರ ಸಂಜೆ ಏಕಾಏಕಿ ನೀರು ನುಗ್ಗಿದ ಕಾರಣ ನೆಲಮಹಡಿಯಲ್ಲಿದ್ದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಮೃತರನ್ನು ಐಎಎಎಸ್‌ ಆಕಾಂಕ್ಷಿಗಳಾದ ತೆಲಂಗಾಣ, ಉತ್ತರ ಪ್ರದೇಶ ಮತ್ತು ಕೇರಳ ಮೂಲದ ತಾನಿಯಾ ಸೋನಿ (25), ಶ್ರೇಯಾ ಯಾದವ್ (25) ಮತ್ತು ನವೀನ್ ಡೆಲ್ವಿನ್ (28) ಎಂದು ಗುರುತಿಸಲಾಗಿದೆ.

ದುರಂತಕ್ಕೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವೇ ಕಾರಣ ಎಂಬ ಕೂಗು ಎಲ್ಲೆಡೆ ಕೇಳಿ ಬಂದಿದೆ. ಈ ಮಧ್ಯೆ ದುರಂತದಿಂದ ಪಾರಾದ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಹೃದೇಶ್ ಚೌಹಾಣ್ ಘಟನೆ ಯಾವಾಗ ನಡೆಯಿತು ಎಂಬುದರ ಆಘಾತಕಾರಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ನೆಲಮಹಡಿಗೆ ನೆರೆ ನುಗ್ಗಿದ ನಂತರ ಅಲ್ಲಿನ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ಈ ವೈರಲ್ ವಿಡಿಯೊ ತೋರಿಸುತ್ತದೆ. ಹಲವು ವಿದ್ಯಾರ್ಥಿಗಳು ದುರಂತದಿಂದ ಪಾರಾಗುವುದನ್ನು ಕಾಣಬಹುದು. ಜತೆಗೆ ನೆರೆಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರಿಗೆ ವಿದ್ಯಾರ್ಥಿಗಳ ಗುಂಪು ಸಹಾಯಹಸ್ತ ಚಾಚಿ ನೆರವಾಗುತ್ತಿರುವುದೂ ಕಂಡು ಬಂದಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊ ಹಂಚಿಕೊಂಡಿರುವ ಹೃದೇಶ್‌ ಚೌಹಾಣ್‌, ನೆಲಮಹಡಿಯು ಹತ್ತು ನಿಮಿಷಗಳಲ್ಲಿ ಪ್ರವಾಹದಿಂದ ತುಂಬಿಕೊಂಡಿತ್ತು ಎಂದು ಬರೆದುಕೊಂಡಿದ್ದಾರೆ. ಸಂಜೆ 6.40ಕ್ಕೆ ಈ ಘಟನೆ ನಡೆದಿದ್ದು, ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (National Disaster Management Authority)ಕ್ಕೆ ತಕ್ಷಣ ಮಾಹಿತಿ ನೀಡಲಾಯಿತು. ಆದರೆ ಅವರು ರಾತ್ರಿ 9ರ ನಂತರವೇ ತಲುಪಿದರು. ಇದು ಮೂವರು ಐಎಎಎಸ್‌ ಆಕಾಂಕ್ಷಿಗಳ ಸಾವಿಗೆ ಕಾರಣವಾಯಿತು ಎಂದಿದ್ದಾರೆ.

ಘಟನಾ ಸ್ಥಳದಲ್ಲಿ ಇಂದು ಬುಲ್ಡೋಜರ್‌ಗಳು ಗರ್ಜಿಸಿವೆ. ಬೆಳ್ಳಂ ಬೆಳಗ್ಗೆ ಸ್ಥಳದಲ್ಲಿ ಬೀಡು ಬಿಟ್ಟಿರುವ ಬುಲ್ಡೋಜರ್‌ಗಳು ಚರಂಡಿ ಒತ್ತೂವರಿ ತೆರವು ಕಾರ್ಯಾಚರಣೆ ನಡೆಸಿವೆ. ಚರಂಡಿಗಳಿಗೆ ತಡೆಯಾಗಿದ್ದ ಸಿಮೆಂಟ್‌ ಇಟ್ಟಿಗೆಗಳನ್ನು ತೆರವುಗೊಳಿಸಿ ನೀರು ಹರಿಯಲು ಸುಗಮವಾಗುವಂತೆ ಮಾಡಿದೆ. ಇನ್ನು ಘಟನೆ ಬೆನ್ನಲ್ಲೇ ಕಾರ್ಯಪ್ರವೃತವಾಗಿರುವ ದಿಲ್ಲಿ ನಗರ ಪಾಲಿಕೆ(MCD) ಬುಲ್ಡೋಜರ್‌ಗಳ ಸಹಾಯದಿಂದ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದು, ಚರಂಡಿಗಳನ್ನು ಸ್ವಚ್ಛಗೊಳಿಸಿ ಸಲೀಸಾಗಿ ನೀರು ಹರಿದು ಹೋಗುವಂತೆ ಮಾಡಿದೆ. ಬುಲ್ಡೋಜರ್‌ಗಳು ಕಾರ್ಯಾಚರಣೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇನ್ನು ಇದಕ್ಕೂ ಮುನ್ನ ಅಕ್ರಮವಾಗಿ ನಿರ್ಮಿಸಿರುವ 13 ಕೋಚಿಂಗ್‌ ಸೆಂಟರ್‌ಗಳಿಗೆ MCD ಬೀಗ ಜಡಿದಿದೆ.

ಇದನ್ನೂ ಓದಿ: Areca Nut Illegal Import: ಭಾರತದೊಳಗೆ 3 ತಿಂಗಳಲ್ಲಿ 3009 ಟನ್‌ ವಿದೇಶಿ ಅಡಿಕೆ ಅಕ್ರಮ ಆಮದು; ಬೆಳೆಗಾರರಿಗೆ ಕಾದಿದೆ ಆಪತ್ತು!

Exit mobile version