Site icon Vistara News

Nuclear Weapons | ಯಾವುದೇ ಕಾರಣಕ್ಕೂ ಅಣ್ವಸ್ತ್ರ ಬಳಕೆ ಕೂಡದು, ರಷ್ಯಾಗೆ ರಾಜನಾಥ್‌ ಸಿಂಗ್‌ ಆಗ್ರಹ

Rajnath Singh

ನವದೆಹಲಿ/ಮಾಸ್ಕೊ: ಇತ್ತೀಚೆಗೆ ನಡೆದ ಶಾಂಘೈ ಸಹಕಾರ ಸಂಘಟನೆ (SCO) ಸಭೆ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಜತೆ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, “ಯುದ್ಧ ನಡೆಸಲು ಇದು ಕಾಲವಲ್ಲ” ಎಂದು ಶಾಂತಿ ಸ್ಥಾಪನೆ ಕುರಿತು ಸೂಚ್ಯವಾಗಿ ಹೇಳಿದ್ದರು. ಆದರೆ, ಇತ್ತೀಚೆಗೆ ಉಕ್ರೇನ್‌ ಮೇಲೆ ಆಕ್ರಮಣ ತೀವ್ರಗೊಳಿಸಿರುವ ರಷ್ಯಾ, ಪರಮಾಣು ದಾಳಿ ನಡೆಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು, “ಯಾವುದೇ ಕಾರಣಕ್ಕೂ ಪರಮಾಣು ದಾಳಿ (Nuclear Weapons) ಕೂಡದು” ಎಂದು ರಷ್ಯಾವನ್ನು ಒತ್ತಾಯಿಸಿದ್ದಾರೆ.

ಕಳೆದ ಭಾನುವಾರ ರಷ್ಯಾ ರಕ್ಷಣಾ ಸಚಿವ ಸೆರ್ಗೆಯಿ ಶೊಯಿಗು ಅವರು ಹಲವು ರಾಷ್ಟ್ರಗಳ ರಕ್ಷಣಾ ಸಚಿವರಿಗೆ ಸರಣಿ ಕರೆಗಳ ಮೂಲಕ ಮಾತನಾಡಿದ್ದಾರೆ. ಇದೇ ವೇಳೆ, ರಾಜನಾಥ್‌ ಸಿಂಗ್‌ ಅವರ ಜತೆಗೂ ಶೊಯಿಗು ಮಾತನಾಡಿದ್ದು, “ಯಾವುದೇ ಕಾರಣಕ್ಕೂ ಪರಮಾಣು ಬಳಕೆಯಾಗಬಾರದು. ಮಾನವತೆಯ ವಿರುದ್ಧ ಇರುವ ಅಣ್ವಸ್ತ್ರಗಳನ್ನು ಯುದ್ಧದ ಭಾಗವಾಗಿ ಬಳಸಬಾರದು. ಮಾತುಕತೆ ಮೂಲಕವೇ ಬಿಕ್ಕಟ್ಟು ಬಗೆಹರಿಸಬೇಕು” ಎಂದು ಸಿಂಗ್‌ ಮಾತುಕತೆ ವೇಳೆ ಒತ್ತಾಯಿಸಿದ್ದಾರೆ.

ಕಳೆದ ಫೆಬ್ರವರಿಯಿಂದಲೇ ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡುತ್ತಿದ್ದು, ಇಡೀ ದೇಶವನ್ನೇ ಭಾಗಶಃ ಹಾಳು ಮಾಡಿದೆ. ಆದರೆ, ಕಳೆದ ಕೆಲವು ದಿನಗಳಿಂದ ಉಕ್ರೇನ್‌ ಮೇಲೆ ರಷ್ಯಾ ಅಣ್ವಸ್ತ್ರ ದಾಳಿ ಮಾಡಲು ಯೋಜನೆ ರೂಪಿಸಿದೆ, ಇದಕ್ಕೆ ಪುಟಿನ್‌ ಆದೇಶ ಹೊರಡಿಸಿದ್ದಾರೆ ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ. ಪರಿಸ್ಥಿತಿ ಹೀಗಿರುವಾಗಲೂ ರಷ್ಯಾ ಉಕ್ರೇನ್‌ ಮೇಲೆಯೇ ಆರೋಪ ಮಾಡುತ್ತಿದೆ. ಉಕ್ರೇನ್‌ ರೇಡಿಯೇಟಿವ್‌ ಪರಮಾಣು ತಯಾರಿಸಲು ಆದೇಶಿಸಿದೆ ಎಂದು ರಷ್ಯಾ ಆರೋಪಿಸುತ್ತಿದೆ. ಹೀಗೆ, ಆರೋಪ-ಪ್ರತ್ಯಾರೋಪವು ಜಾಗತಿಕ ಸಮುದಾಯವನ್ನು ಆತಂಕಕ್ಕೀಡು ಮಾಡಿದೆ.

ಇದನ್ನೂ ಓದಿ | Indian Students | ಉಕ್ರೇನ್‌ನಲ್ಲಿರುವವರು ಭಾರತಕ್ಕೆ ಬನ್ನಿ, ಇಲ್ಲಿಂದ ಯಾರೂ ಹೋಗದಿರಿ, ರಾಯಭಾರ ಕಚೇರಿ ಸೂಚನೆ

Exit mobile version