ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu & Kashmir) ಜೌರಿಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ 24 ಗಂಟೆಗಳ ಸುದೀರ್ಘ ಎನ್‌ಕೌಂಟರ್ (Rajouri Encounter) ಸಂದರ್ಭದಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಇವರಲ್ಲಿ ಒಬ್ಬ IED ತಜ್ಞ, ಹಾಗೂ ಇನ್ನೊಬ್ಬ ನುರಿತ ಸ್ನೈಪರ್ ಎಂದು ತಿಳಿದುಬಂದಿದೆ. ಈ ಮಧ್ಯೆ, ಈ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಯೋಧರ ಸಂಖ್ಯೆ ಐದಕ್ಕೇರಿದೆ.
ರಾಜೌರಿಯ ಕಲಕೋಟ್ ಅರಣ್ಯದಲ್ಲಿ ನಿನ್ನೆ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ಸೇನಾ ಯೋಧರು ಹುತಾತ್ಮರಾಗಿದ್ದರು. ಗಾಯಗೊಂಡ ಮತ್ತೊಬ್ಬ ಯೋಧ ಇಂದು ಸಾವನ್ನಪ್ಪಿದ್ದಾರೆ. ಭಯೋತ್ಪಾದಕರಲ್ಲಿ ಒಬ್ಬನನ್ನು ಪಾಕಿಸ್ತಾನಿ ಪ್ರಜೆ ಖಾರಿ ಎಂದು, ಲಷ್ಕರ್-ಎ-ತೊಯ್ಬಾದಲ್ಲಿ ಉನ್ನತ ಹುದ್ದೆಯನ್ನು ಹೊಂದಿದ್ದ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಭಯೋತ್ಪಾದನೆಗೆ ಮರಳಿ ಚೇತರಿಕೆ ಕೊಡಲು ಇವರನ್ನು ಕಳುಹಿಸಲಾಗಿತ್ತು. ಇವರು ಐಇಡಿಗಳಲ್ಲಿ (ಸುಧಾರಿತ ಸ್ಫೋಟಕ) ಪರಿಣಿತರು, ಗುಹೆಗಳಲ್ಲಿ ಅಡಗಿಕೊಂಡು ದಾಳಿ ಮಾಡಲು ತರಬೇತಿ ಪಡೆದ ಸ್ನೈಪರ್‌ಗಳು ಎಂದು ಜಮ್ಮುವಿನ ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO) ಹೇಳಿದರು.
ಖಾರಿ ಪಾಕಿಸ್ತಾನ ಮತ್ತು ಅಫಘಾನಿಸ್ತಾನದಲ್ಲಿ ತರಬೇತಿ ಪಡೆದಿದ್ದು, ಲಷ್ಕರ್-ಎ-ತೊಯ್ಬಾದ ಉನ್ನತ ಶ್ರೇಣಿಯ ಭಯೋತ್ಪಾದಕನಾಗಿದ್ದಾನೆ. ಕಳೆದ ಒಂದು ವರ್ಷದಿಂದ ತನ್ನ ಗುಂಪಿನೊಂದಿಗೆ ರಾಜೌರಿ-ಪೂಂಚ್‌ನಲ್ಲಿ ಸಕ್ರಿಯನಾಗಿದ್ದ ಈತ ಡ್ಯಾಂಗ್ರಿ ಮತ್ತು ಕಂಡಿ ದಾಳಿಯ ಮಾಸ್ಟರ್‌ಮೈಂಡ್ ಎಂದು ನಂಬಲಾಗಿದೆ.
ಬಜಿಮಲ್ ಗ್ರಾಮದಲ್ಲಿ ಸ್ಥಳೀಯ ಗುಜ್ಜರ್ ಸಮುದಾಯದ ವ್ಯಕ್ತಿ ಭಯೋತ್ಪಾದಕರಿಗೆ ಆಹಾರ ನೀಡಲು ನಿರಾಕರಿಸಿದ ಕಾರಣಕ್ಕಾಗಿ ಉಗ್ರರು ಆತನನ್ನು ಥಳಿಸಿದ್ದರು. ಗ್ರಾಮಸ್ಥರು ಘಟನೆಯನ್ನು ಭದ್ರತಾ ಪಡೆಗಳಿಗೆ ವರದಿ ಮಾಡಿದರು. ಬುಧವಾರ ಬೆಳಿಗ್ಗೆ ಸೇನಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಜಟಿಲ ಭೂಪ್ರದೇಶ ಮತ್ತು ಕಾಡು ಪರಿಸರದ ಲಾಭವನ್ನು ಪಡೆದುಕೊಂಡ ಭಯೋತ್ಪಾದಕರು ಸೈನಿಕರ ಮೇಲೆ ಭಾರೀ ಗುಂಡಿನ ದಾಳಿ ನಡೆಸಿ ನಾಲ್ವರು ಸೈನಿಕರನ್ನು ಕೊಂದರು. ಇಬ್ಬರು ಯೋಧರು ಗಾಯಗೊಂಡರು.
ಗುಂಡಿನ ದಾಳಿಯಲ್ಲಿ ತೊಡಗಿರುವ ಭಯೋತ್ಪಾದಕರು ಅರಣ್ಯ ಪ್ರದೇಶದಿಂದ ತಪ್ಪಿಸಿಕೊಳ್ಳದಂತೆ ಹೆಚ್ಚುವರಿ ಭದ್ರತಾ ಪಡೆಗಳೊಂದಿಗೆ ಪ್ರದೇಶವನ್ನು ಸುತ್ತುವರಿಯಲಾಯಿತು. ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಗಾಯಗೊಂಡಿದ್ದು, ಅವರನ್ನು ಸೈನಿಕರು ಸುತ್ತುವರಿದರು. ಆರಂಭದಲ್ಲಿ, ಇಬ್ಬರು ಭಯೋತ್ಪಾದಕರು ಗುಂಡಿನ ಕಾಳಗದಲ್ಲಿ ಭಾಗಿಯಾಗಿದ್ದಾರೆಂದು ನಂಬಲಾಗಿತ್ತು. ಆದರೆ ಉಗ್ರರ ಸಂಖ್ಯೆ ಹೆಚ್ಚಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಕೊಲ್ಲಲ್ಪಟ್ಟ ಸೈನಿಕರಲ್ಲಿ ಮೂವರು ವಿಶೇಷ ಪಡೆಗಳ ಕಮಾಂಡೋಗಳಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಸಮಯದಲ್ಲಿ ಅಧಿಕಾರಿಗಳು ಯಾವಾಗಲೂ ಮುಂಚೂಣಿಯಲ್ಲೇ ಮುನ್ನಡೆಸುತ್ತಾರೆ ಎಂಬುದನ್ನು ಇದು ಎತ್ತಿ ತೋರಿಸಿದೆ. ಸೆಪ್ಟೆಂಬರ್‌ನಲ್ಲಿ ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್ ಅರಣ್ಯದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಕಮಾಂಡಿಂಗ್ ಆಫೀಸರ್, ಸೇನೆಯ ಮೇಜರ್ ಮತ್ತು ಜೆ&ಕೆ ಪೋಲೀಸ್‌ನ ಡಿವೈಎಸ್‌ಪಿ ಕೊಲ್ಲಲ್ಪಟ್ಟಿದ್ದರು.
ಪಿರ್ ಪಂಜಾಲ್ ಅರಣ್ಯದ ರಜೌರಿ-ಪೂಂಚ್ ಪ್ರದೇಶವು 2003ರಿಂದ ಭಯೋತ್ಪಾದನೆಯಿಂದ ಮುಕ್ತವಾಗಿತ್ತು. ಆದರೆ 2021ರಲ್ಲಿ ಭಯೋತ್ಪಾದನೆ ಮತ್ತೆ ತಲೆ ಎತ್ತಿದ್ದು ಈ ಪ್ರದೇಶದಲ್ಲಿ ಆಗಾಗ್ಗೆ ಎನ್‌ಕೌಂಟರ್ ನಡೆಯುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಈ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಸೇನಾ ಯೋಧರು ಕೊಲ್ಲಲ್ಪಟ್ಟಿದ್ದಾರೆ. ಹೆಚ್ಚಿನ ಎನ್‌ಕೌಂಟರ್‌ಗಳಲ್ಲಿ ಸೇನಾಪಡೆಗಳು ವಾರಗಳವರೆಗೆ ಸುದೀರ್ಘ ಕಾರ್ಯಾಚರಣೆಯಲ್ಲಿ ತೊಡಗಿದ್ದರೂ ಭಯೋತ್ಪಾದಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಭಯೋತ್ಪಾದಕರು ದಟ್ಟವಾದ ಕಾಡುಗಳನ್ನು ತಮ್ಮ ವಾಸಸ್ಥಾನ ಮಾಡಿಕೊಂಡಿದ್ದಾರೆ. ಜಟಿಲ ಭೌಗೋಳಿಕ ಪರಿಸ್ಥಿತಿಯ ಲಾಭ ಪಡೆದುಕೊಂಡಿದ್ದಾರೆ. ಅರಣ್ಯವು ಭದ್ರತಾ ಪಡೆಗಳಿಗೆ ಸವಾಲಾಗಿದೆ.
ಇದನ್ನೂ ಓದಿ: Rajouri Encounter : ಉಗ್ರರ ಜತೆ ಕದನ; ಮಂಗಳೂರಿನ ಕ್ಯಾ. ಪ್ರಾಂಜಲ್ ಸೇರಿ ನಾಲ್ವರು ಹುತಾತ್ಮ