Site icon Vistara News

Rajouri Encounter: ಹುತಾತ್ಮ ಯೋಧನ ಮನೆಯಲ್ಲೂ ಬಿಜೆಪಿ ನಾಯಕರಿಂದ ಫೋಟೊಗೆ ಪೋಸ್‌!

up cheque

up cheque

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu & Kashmir) ರಾಜೌರಿಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್ (Rajouri Encounter) ಸಂದರ್ಭದಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಈ ಮಧ್ಯೆ ಈ ಗುಂಡಿನ ಚಕಮಕಿಯಲ್ಲಿ 5 ಮಂದಿ ಯೋಧರು ಹುತಾತ್ಮರಾಗಿದ್ದರು. ಈ ಐವರ ಪೈಕಿ ಭಾರತೀಯ ಸೇನಾ ಕ್ಯಾಪ್ಟನ್ ಶುಭಂ ಗುಪ್ತಾ ಕೂಡ ಒಬ್ಬರು. ಅವರ ತಾಯಿಯೊಂದಿಗೆ ಫೋಟೊ ತೆಗೆಸಿಕೊಂಡಿದ್ದಕ್ಕಾಗಿ ಉತ್ತರ ಪ್ರದೇಶದ ಇಬ್ಬರು ಬಿಜೆಪಿ ನಾಯಕರ ವಿರುದ್ಧ ಈಗ ಆಕ್ರೋಶ ವ್ಯಕ್ತವಾಗುತ್ತಿದೆ.

ವಿಡಿಯೊ ವೈರಲ್‌

ಈ ಕುರಿತಾದ ವಿಡಿಯೊ ಇದೀಗ ವೈರಲ್‌ ಆಗಿದೆ. ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವ ಯೋಗೇಂದ್ರ ಉಪಾಧ್ಯಾಯ ಮತ್ತು ಬಿಜೆಪಿ ಶಾಸಕ ಜಿ.ಎಸ್.ಧರ್ಮೇಶ್ ಆಗ್ರಾದಲ್ಲಿ ದುಃಖಿತ ತಾಯಿಗೆ ಚೆಕ್‌ಗಳನ್ನು ಹಸ್ತಾಂತರಿಸುವ ವೇಳೆ ಫೋಟೊ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. “ನನ್ನ ಮಗ ಮರಳಿ ಬಂದರೆ ಸಾಕು. ನನಗೆ ಇದೆಲ್ಲವೂ ಬೇಕಾಗಿಲ್ಲ” ಎಂದು ದುಃಖತಪ್ತ ತಾಯಿ ಹೇಳುತ್ತಾರೆ. ಆದರೆ ನಾಯಕರು ಕ್ಯಾಮೆರಾಕ್ಕೆ ಫೋಸ್‌ ನೀಡುವುದು ಕಂಡು ಬರುತ್ತಿದೆ.

ವಿಪಕ್ಷಗಳು ಈ ವಿಡಿಯೊವನ್ನು ಹಂಚಿಕೊಂಡು ಬಿಜೆಪಿ ಮೇಲೆ ಮುಗಿ ಬಿದ್ದಿವೆ. ಕಾಂಗ್ರೆಸ್‌ ಈ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡು ʼರಣಹದ್ದುಗಳುʼ ಎಂದು ಕ್ಯಾಪ್ಶನ್‌ ನೀಡಿ ಬಿಜೆಪಿಯ ವಿರುದ್ಧ ಕೆಂಡ ಕಾರಿದೆ. ರಾಜ್ಯಸಭಾ ಸದಸ್ಯ, ಎಎಪಿ ನಾಯಕ ರಾಘವ್‌ ಛಡ್ಡಾ ಈ ವಿಡಿಯೊವನ್ನು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼಬಿಜೆಪಿಯಲ್ಲಿ ಬಿ ಎಂದರೆ ಬೆಶರಮ್‌ (ನಾಚಿಕೆ) ಮತ್ತು ಪಿ ಎಂದರೆ ಪಬ್ಲಿಸಿಟಿ (ಪ್ರಚಾರ). ರಾಜೌರಿ ಸೆಕ್ಟರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕ್ಯಾಪ್ಟನ್ ಶುಭಂ ಗುಪ್ತಾ ಪ್ರಾಣ ತ್ಯಾಗ ಮಾಡಿದರು. ಅವರ ತಾಯಿ ದುಃಖದಲ್ಲಿದ್ದಾರೆ. ಇದರ ನಡುವೆಯೂ ಯುಪಿ ಸರ್ಕಾರದ ಬಿಜೆಪಿ ಸಚಿವ ಯೋಗೇಂದ್ರ ಉಪಾಧ್ಯಾಯ ನಾಚಿಕೆಯಿಲ್ಲದೆ ತಮ್ಮ ಪಿಆರ್‌ಗಾಗಿ ಫೋಟೊ ತೆಗೆದುಕೊಳ್ಳಲು ಪಟ್ಟು ಹಿಡಿದಿದ್ದಾರೆ. ಇದನ್ನು ಚಿತ್ರೀಕರಿಸಬೇಡಿ ಎನ್ನುವ ತಾಯಿಯ ಮನವಿಯ ಹೊರತಾಗಿಯೂ ಈ ರೀತಿ ನಡೆದುಕೊಂಡಿದ್ದಾರೆ. ನಾಚಿಕೆಗೇಡುʼ ಎಂದು ಬರೆದುಕೊಂಡಿದ್ದಾರೆ. ಶಿವಸೇನೆ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡ ವಿಡಿಯೊವನ್ನು ಹಂಚಿಕೊಂಡಡು, ʼನಾಚಿಕೆಗೇಡುʼ ಎಂದು ಕರೆದಿದ್ದಾರೆ. ಸಾವರ್ಜನಿಕವಾಗಿಯೂ ಈ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಗುರುವಾರ ಕ್ಯಾಪ್ಟನ್ ಗುಪ್ತಾ ಅವರಿಗೆ ಗೌರವ ಸಲ್ಲಿಸಿದ್ದರು. 50 ಲಕ್ಷ ರೂ.ಗಳ ಪರಿಹಾರ ಮತ್ತು ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗವನ್ನು ಘೋಷಿಸಿದ್ದರು.

ಇದನ್ನೂ ಓದಿ: Rajouri Encounter: ಇಬ್ಬರು ಉಗ್ರರ ದಮನ; ಹುತಾತ್ಮ ಯೋಧರ ಸಂಖ್ಯೆ ಐದಕ್ಕೇರಿಕೆ

ರಜೌರಿ ಗುಂಡಿನ ಕಾಳಗದಲ್ಲಿ ಕರ್ನಾಟಕದ ವೀರ ಯೋಧ ಪ್ರಾಂಜಲ್‌ ಅವರು ಕೂಡ ಹುತಾತ್ಮರಾಗಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಸಮೀಪದ ನಿಸರ್ಗ ಬಡಾವಣೆಯಲ್ಲಿರುವ ಪ್ರಾಂಜಲ್‌ ಅವರ ಮನೆಯಲ್ಲಿ ಇರಿಸಲಾದ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಸಹಸ್ರಾರು ಸಾರ್ವಜನಿಕರು ಪಡೆದು, ದುಃಖದಲ್ಲಿ ಮುಳುಗಿದ ಕುಟುಂಬಸ್ಥರನ್ನು ಸಂತೈಸಿದರು.

Exit mobile version