Site icon Vistara News

Rajya Sabha Election: 3 ರಾಜ್ಯಗಳ 15 ಸ್ಥಾನಗಳಿಗೆ ಚುನಾವಣೆ; ಏನಿದೆ ರಣತಂತ್ರ?

Rajya Sabha Election

ನವದೆಹಲಿ: ಕರ್ನಾಟಕದ ಮೂರು ಸ್ಥಾನಗಳು ಸೇರಿ 3 ರಾಜ್ಯಗಳ ಒಟ್ಟು 15 ರಾಜ್ಯಸಭೆ ಸ್ಥಾನಗಳಿಗೆ ಮಂಗಳವಾರ (ಫೆಬ್ರವರಿ 27) ಬೆಳಗ್ಗೆ ಮತದಾನ (Rajya Sabha Election) ಆರಂಭವಾಗಿದೆ. ಬಹುತೇಕ ಪಕ್ಷಗಳಿಗೆ ಅಡ್ಡ ಮತದಾನದ (Cross Voting) ಭೀತಿ ಇದ್ದರೂ ಸುಗಮವಾಗಿ ಮತದಾನ ನಡೆಯುತ್ತಿದೆ. ರಾಜ್ಯಸಭೆಯ 56 ಸ್ಥಾನಗಳಿಗೆ 15 ರಾಜ್ಯಗಳಿಂದ ಸದಸ್ಯರು ಆಯ್ಕೆಯಾಗಬೇಕಿತ್ತು. ಆದರೆ, 41 ಸದಸ್ಯರು ಅವಿರೋಧವಾಗಿ ಆಯ್ಕೆಯಾದ ಕಾರಣ 15 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದೆ.

ಬೆಳಗ್ಗೆ 9 ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಕರ್ನಾಟಕದ 4, ಉತ್ತರ ಪ್ರದೇಶದ 10 ಹಾಗೂ ಹಿಮಾಚಲ ಪ್ರದೇಶದ 1 ಸ್ಥಾನಕ್ಕೆ ಮತದಾನ ನಡೆಯುತ್ತಿದೆ. ಆಯಾ ರಾಜ್ಯಗಳ ವಿಧಾನಸಭೆಗಳಲ್ಲಿ ಮತದಾನ ಆರಂಭವಾಗಿದ್ದು, ಶಾಸಕರು ಹಕ್ಕು ಚಲಾಯಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಅವರು ಕೂಡ ಮತದಾನ ಮಾಡಿದ್ದಾರೆ. ಮಂಗಳವಾರ ಸಂಜೆಯೇ ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕದಲ್ಲಿ ಏನು ರಣತಂತ್ರ?

ಕರ್ನಾಟಕದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ಗೆ ಮೂವರನ್ನು ಗೆಲ್ಲಿಸಿಕೊಂಡು ಬರಲು ಸ್ಪಷ್ಟ ಬಹುಮತ ಇತ್ತು. ಆದರೆ, ಭಾನುವಾರ ಶಾಸಕ ರಾಜವೆಂಕಟಪ್ಪ ನಾಯಕ ಅವರ ನಿಧನದಿಂದ ಈಗ ಕಾಂಗ್ರೆಸ್‌ ಸಂಖ್ಯಾಬಲ 134ಕ್ಕೆ ಇಳಿದಿದೆ. ಗೆಲ್ಲಲು 135 ಸೀಟುಗಳು ಬೇಕಿದೆ. ಇದು ಕೈಪಡೆ ಇಕ್ಕಟ್ಟಿಗೆ ಕಾರಣವಾಗಿದೆ. ಆದರೆ, ಪಕ್ಷೇತರ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಕಾಂಗ್ರೆಸ್‌ಗೆ ಮತ ಹಾಕುವುದಾಗಿ ಹೇಳಿದ್ದರೂ ಅವರಿಗೆ ಈಗ ಡಿಮ್ಯಾಂಡ್‌ ಜಾಸ್ತಿ ಇದೆ. ಕಾಂಗ್ರೆಸ್‌ನಿಂದ ಅಜಯ್‌ ಮಕೇನ್‌, ಸೈಯದ್‌ ನಾಸೀರ್‌ ಹುಸೇನ್‌, ಜಿ.ಸಿ.ಚಂದ್ರಶೇಖರ್‌, ಬಿಜೆಪಿಯಿಂದ ನಾರಾಯಣಸಾ ಭಾಂಡಗೆ ಹಾಗೂ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ಗೆ ಇಲ್ಲಿ ಅಡ್ಡ ಮತದಾನದ ಭೀತಿ ಎದುರಾಗಿದೆ.

ಉತ್ತರ ಪ್ರದೇಶದಲ್ಲಿ ಹೀಗಿದೆ ಲೆಕ್ಕಾಚಾರ

ಉತ್ತರ ಪ್ರದೇಶದ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗುವ 10 ಸದಸ್ಯರ ಪೈಕಿ ಬಿಜೆಪಿಯು 7 ಹಾಗೂ ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷವು 3 ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಆದರೆ, ಸಮಾಜವಾದಿ ಪಕ್ಷಕ್ಕೆ ಅಡ್ಡ ಮತದಾನದ ಭೀತಿ ಇದೆ. ಆದರೂ, ಮೂರು ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಅಖಿಲೇಶ್‌ ಯಾದವ್‌ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಒಂದು ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್‌ ಗೆಲ್ಲುವ ವಿಶ್ವಾಸದಲ್ಲಿದೆ.

ಇದನ್ನೂ ಓದಿ: Rajya Sabha Election: ರಾಜ್ಯಸಭೆ ಚುನಾವಣೆ; ಯಾರಿಗೆ ಅಡ್ಡ ಮತದಾನದ ಭೀತಿ?

ಅವಿರೋಧವಾಗಿ ಆಯ್ಕೆಯಾದವರು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಸೇರಿ 41 ಅಭ್ಯರ್ಥಿಗಳು ಅವಿರೋಧವಾಗಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version