ಮುಂಬಯಿ: ರಾಜ್ಯಸಭೆಗೆ ನಡೆದ ರೋಚಕ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕಣಕ್ಕಿಳಿದಿದ್ದ ಬಿಜೆಪಿಯ ಎಲ್ಲ ಮೂರು ಅಭ್ಯರ್ಥಿಗಳೂ ಜಯ ಗಳಿಸಿದ್ದಾರೆ.
ಬಿಜೆಪಿಯ ಪಿಯೂಷ್ ಗೋಯೆಲ್ ಮತ್ತು ಅನಿಲ್ ಬೊಂಡೆ ತಲಾ 48 ಮತ ಗಳಿಸಿದ್ದಾರೆ. ಮೂರನೇ ಅಭ್ಯರ್ಥಿ ಶಿವಸೇನೆಯ ಸಂಜಯ್ ರಾವತ್ ಅವರಿಗಿಂತ ಹೆಚ್ಚು ಮತ ಗಳಿಸಿದ್ದಾರೆ ಎಂದು ಬಿಜೆಪಿಯ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.
ಶಿವಸೇನೆ, ಕಾಂಗ್ರೆಸ್ ಮತ್ತು ಶಿವಸೇನೆ ತಲಾ 1 ಸ್ಥಾನಗಳನ್ನು ಗಳಿಸಿವೆ. ಇದರೊಂದಿಗೆ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಪಾಳೆಯಕ್ಕೆ ಭಾರಿ ಹಿನ್ನಡೆಯಾಗಿದೆ. ಶಿವಸೇನೆಯ ನಾಯಕ ಸಂಜಯ್ ರಾವತ್, ಎನ್‌ಸಿಪಿಯ ಪ್ರಫುಲ್ ಪಟೇಲ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಪ್ರತಾಪಗರಿ ಜಯ ದಾಖಲಿಸಿದ್ದಾರೆ.
” ಶಿವಸೇನೆಯ ಮತ್ತೊಬ್ಬ ಅಭ್ಯರ್ಥಿ ಸಂಜಯ್ ಪವಾರ್ ಗೆಲ್ಲುವ ನಿರೀಕ್ಷೆ ಇರಲಿಲ್ಲʼ ಎಂದು ಕಾಂಗ್ರೆಸ್ ನಾಯಕ ಇಮ್ರಾನ್ ಹೇಳಿದರು. ಹರಿಯಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಕೇನ್ ಪರಾಭವಗೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಆಡಳಿತರೂಢ ಶಿನಸೇನೆ-ಕಾಂಗ್ರೆಸ್-ಎನ್‌ಸಿಪಿ ಮೈತ್ರುಕೂಟಕ್ಕೂ ಪ್ರತಿಪಕ್ಷ ಬಿಜೆಪಿಗೂ ತೀವ್ರ ಸ್ಪರ್ಧೆ ಇದ್ದುದರಿಂದ ಹಾಗೂ ಅಡ್ಡಮತದಾನದ ಬಗ್ಗೆ ಆರೋಪ-ಪ್ರತ್ಯಾರೋಪಗಳ ಹಿನ್ನೆಲೆಯಲ್ಲಿ ಫಲಿತಾಂಶ ಹೊರಬರಲು 8 ಗಂಟೆಗಳ ಕಾಲ ವಿಳಂಬವಾಯಿತು.
ಮಹಾರಾಷ್ಟ್ರದಲ್ಲಿ ಬಿಜೆಪಿಯ ಮೂರೂ ಅಭ್ಯರ್ಥಿಗಳ ಗೆಲುವು ಸಂತಸದ ಕ್ಷಣಗಳಾಗಿದೆ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಜಯ ಗಳಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಅವರು ಫಡ್ನವೀಸ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಇದಕ್ಕೂ ಹಿಂದೆ ಬಿಜೆಪಿ ಮತ್ತು ಶಿವಸೇನೆ ಚುನಾವಣಾ ಆಯೋಗವನ್ನು ಸಂಪರ್ಕಿಸಿ ಅಡ್ಡ ಮತದಾನ ನಡೆದಿರುವ ಬಗ್ಗೆ ದೂರು ಸಲ್ಲಿಸಿತ್ತು. ಮತಗಳನ್ನು ಅನರ್ಹಗೊಳಿಸಲು ಉಭಯ ಪಕ್ಷಗಳು ಪಟ್ಟು ಹಿಡಿದಿತ್ತು. ಆಡಳಿತಾರೂಢ ಪಕ್ಷದ ಮೂವರು ಶಾಸಕರ ಮತಗಳನ್ನು ಬಿಜೆಪಿ ಪ್ರಶ್ನಿಸಿತ್ತು. ಮಹಾ ವಿಕಾಸ ಅಘಾಡಿ ಬಿಜೆಪಿ ಮತ್ತು ಸ್ವತಂತ್ರ ಅಭ್ಯರ್ಥಿಯ ಮತವನ್ನು ಅನರ್ಹಗೊಳಿಸಲು ಒತ್ತಾಯಿಸಿತ್ತು.