ನವದೆಹಲಿ: ಹೂಡಿಕೆ, ಷೇರು ಮಾರುಕಟ್ಟೆ, ಲಾಭ-ನಷ್ಟದ ಲೆಕ್ಕಾಚಾರದಲ್ಲೇ ಮುಳುಗಿರುತ್ತಿದ್ದ, ಇದೇ ಅವರಿಗೆ ಫಸ್ಟ್ ಲವ್ ಆಗಿದ್ದರೂ ರಾಕೇಶ್ ಜುಂಜುನ್‌ವಾಲಾ (Rakesh Jhunjhunwala) ಅವರು ವೈಯಕ್ತಿಕವಾಗಿ ಫ್ಯಾಮಿಲಿ ಮ್ಯಾನ್ ಆಗಿದ್ದರು. ಮಡದಿ ರೇಖಾ ಜುಂಜುನ್‌ವಾಲಾ ಹಾಗೂ ಮೂವರು ಮಕ್ಕಳಿಗಾಗಿ ಮುಂಬೈನ ಮಲಬಾರ್ ಹಿಲ್ಸ್‌ನಲ್ಲಿ ೩೭೧ ಕೋಟಿ ರೂ. ವೆಚ್ಚದಲ್ಲಿ ಇತ್ತೀಚೆಗಷ್ಟೇ ಭವ್ಯ ಬಂಗಲೆಯನ್ನು ನಿರ್ಮಿಸಿದ್ದರು. ಹೂಡಿಕೆ, ಷೇರುಗಳ ಮಧ್ಯೆಯೇ ಕಳೆದುಹೋಗದೆ, ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುವ ಮೂಲಕ ಕುಟುಂಬಸ್ಥರಿಂದ ಫ್ಯಾಮಿಲಿ ಮ್ಯಾನ್ ಎಂದೇ ಕರೆಸಿಕೊಳ್ಳುತ್ತಿದ್ದರು.
ರಾಕೇಶ್ ಜುಂಜುನ್‌ವಾಲಾ ಹಾಗೂ ರೇಖಾ ಜುಂಜುನ್‌ವಾಲಾ ಅವರದ್ದು ಯಶಸ್ವಿ ದಾಂಪತ್ಯವಾಗಿದೆ. ಮದುವೆಯಾಗಿ, ಹೂಡಿಕೆಯಲ್ಲಿ ಲಾಭ ಗಳಿಸಿದರೂ ರಾಕೇಶ್ ಅವರಿಗೆ ಮಾತ್ರ ಮಕ್ಕಳಾಗಿಲ್ಲ ಎಂಬ ಕೊರಗಿತ್ತು. ಮದುವೆಯಾಗಿ ೧೭ ವರ್ಷವಾದರೂ ಮಕ್ಕಳಾಗಿಲ್ಲ ಎಂಬ ಬೇಸರ “ಬಿಗ್ ಬುಲ್”ಗೆ ಕಾಡುತ್ತಿತ್ತು. ಆದರೆ, ಈ ಕೊರಗು ೨೦೦೪ರಲ್ಲಿ ನೀಗಿತು. ಮಗಳು ನಿಷ್ಠಾ ಜನನದ ಬಳಿಕ ರಾಕೇಶ್ ಅವರ ಉತ್ಸಾಹಕ್ಕೆ ಮೇರೆಯೇ ಇರಲಿಲ್ಲ ಎಂಬುದಾಗಿ ಅವರ ಕುಟುಂಬಸ್ಥರೇ ತಿಳಿಸಿದ್ದಾರೆ. ಅಲ್ಲದೆ, ೨೦೦9ರಲ್ಲಿ ಅವಳಿ ಗಂಡುಮಕ್ಕಳ ತಂದೆಯಾದ ರಾಕೇಶ್, ಅವರಿಗೆ ಆರ್ಯಮಾನ್ ಹಾಗೂ ಆರ್ಯವೀರ್ ಎಂದು ನಾಮಕರಣ ಮಾಡಿದ್ದಾರೆ.
ಕುಟುಂಬವೇ ಸರ್ವಸ್ವ ಎಂದು ಭಾವಿಸಿದ್ದ ರಾಕೇಶ್ ಜುಂಜುನ್‌ವಾಲಾ, “ನನಗೆ ನನ್ನ ಮಕ್ಕಳಿಗಿಂತ ಬೇರೆ ಯಾವುದೂ ಮುಖ್ಯವಲ್ಲ. ಹಾಗೆಯೇ, ನಾನು ಜೀವನದುದ್ದಕ್ಕೂ ಪ್ರೀತಿಸುವ ಏಕೈಕ ಮಹಿಳೆ ಎಂದರೆ ಅದು ರೇಖಾ ಮಾತ್ರ. ಬೇರೆ ಮಹಿಳೆಗೆ ನನ್ನ ಜೀವನದಲ್ಲಿ ಜಾಗವೇ ಇಲ್ಲ” ಎಂದು ಹೇಳಿದ್ದರು.
ಇದನ್ನೂ ಓದಿ | ನೂತನ ಆಕಾಸ ಏರ್ಲೈನ್ಸ್ ಪ್ರಾರಂಭಿಸಿದ್ದ, ಖ್ಯಾತ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಇನ್ನಿಲ್ಲ