ನವ ದೆಹಲಿ: ಇಂದು ನಿಧನರಾದ ಖ್ಯಾತ ಉದ್ಯಮಿ ರಾಕೇಶ್ ಜುಂಜುನ್‌ವಾಲಾ (Rakesh Jhunjhunwala death) 2021ರ ಅಕ್ಟೋಬರ್ನಲ್ಲೊಮ್ಮೆ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದರು. ಇವರಿಬ್ಬರೂ ಪರಸ್ಪರ ಮಾತುಕತೆ ನಡೆಸಿದ್ದರು. ಆಗ ಎರಡು ವಿಚಾರಗಳಿಗೆ ಇದು ದೊಡ್ಡ ಸುದ್ದಿಯಾಗಿತ್ತು. ಅವೆರಡೂ ವಿವಾದಾತ್ಮಕ ವಿಚಾರಗಳೇ ಆಗಿದ್ದವು. ಪ್ರಧಾನಿ ಮೋದಿ ಭೇಟಿಯ ವೇಳೆ ರಾಕೇಶ್ ಜುಂಜುನ್‌ವಾಲಾ ಹಾಕಿದ್ದ ಶರ್ಟ್ ಬಗ್ಗೆ ಅನೇಕರು ಪ್ರಶ್ನಿಸಿದ್ದರು. ಹಾಗೇ ಇನ್ನೊಂದು ವರ್ಗದ ಜನರು, ರಾಕೇಶ್ ಜುಂಜುನ್‌ವಾಲಾ ಕುರ್ಚಿ ಮೇಲೆ ಕುಳಿತಿದ್ದರೆ, ಪ್ರಧಾನಿ ಮೋದಿ ಅವರ ಎದುರು ನಿಂತು ಮಾತನಾಡುತ್ತಿದ್ದಾರೆ. ಮೋದಿಯವರು ಕಾರ್ಪೊರೇಟ್ ಕ್ಷೇತ್ರಕ್ಕೆ ಅದೆಷ್ಟು ಗೌರವ-ಆದ್ಯತೆ ಕೊಡುತ್ತಾರೆ ಎಂಬುದಕ್ಕೆ ಈ ಫೋಟೋ ಸಾಕ್ಷಿ ಎಂದು ವ್ಯಂಗ್ಯವಾಡಿದ್ದರು.
ಕಾಂಗ್ರೆಸ್ ಕಟು ಟೀಕೆ !
ರಾಕೇಶ್ ಜುಂಜುನ್ವಾಲಾಗೆ ಬಹುಕಾಲದಿಂದಲೂ ಡಯಾಬಿಟಿಸ್ ಸಮಸ್ಯೆ ಇತ್ತು. ಇನ್ನೂ ಹಲವು ಆರೋಗ್ಯ ತೊಂದರೆಗಳನ್ನು ಹೊಂದಿದ್ದ ಅವರು ಹೆಚ್ಚಾಗಿ ವೀಲ್ಚೇರ್ ಮೇಲೇ ಇರುತ್ತಿದ್ದರು. ಹಾಗೇ ಕಳೆದ ವರ್ಷ ಅಕ್ಟೋಬರ್ನಲ್ಲಿ ಪ್ರಧಾನಂತ್ರಿಯನ್ನು ಅವರು ಭೇಟಿ ಮಾಡಿದಾಗಲೂ ಹೀಗೆ ಕುರ್ಚಿ ಮೇಲೆ ಕುಳಿತೇ ಇದ್ದರು. ಅವರ ಎದುರು ಪ್ರಧಾನಿ ನಿಂತು ಮಾತಾಡುತ್ತಿದ್ದರು. ಇವರಿಬ್ಬರ ಫೋಟೋ ಸೆರೆಹಿಡಿಯುತ್ತಿರುವ ವ್ಯಕ್ತಿಯ ಪ್ರತಿಬಿಂಬ, ಅಲ್ಲೇ ಇರುವ ಕಿಟಕಿಯ ಗಾಜಿನಲ್ಲಿ ಕಾಣುತ್ತಿತ್ತು. ಆ ಫೋಟೋ ನೋಡಿದ ಕಾಂಗ್ರೆಸ್ಸಿಗರು, ಉದ್ಯಮಿಯ ಎದುರು ಈ ದೇಶದ ಪ್ರಧಾನಿ ಕೈಕಟ್ಟಿ ನಿಲ್ಲುವುದು ಎಂದರೇನು? ಎಂಬರ್ಥದ ಪ್ರಶ್ನೆ, ಟೀಕೆಗಳನ್ನು ಪ್ರತಿಪಕ್ಷಗಳು ಮಾಡಿದ್ದವು.
ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿವಿ, ಈ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡು ‘ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡುತ್ತಿರುವ ಅತಿದೊಡ್ಡ ವ್ಯಾಪಾರಿ (ಮೋದಿ) ಮತ್ತು ಸ್ಟಾಕ್ ಮಾರ್ಕೆಟ್ನ ಪ್ರಮುಖ ವ್ಯಾಪಾರಿ (ರಾಕೇಶ್ ಜುಂಜುನ್‌ವಾಲಾ) ಭೇಟಿಯಾದರು. ಇವರಿಬ್ಬರೂ ಸೇರಿ ಈಗ ಏನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ?’ ಎಂದು ಟೀಕಾತ್ಮಕ ಕ್ಯಾಪ್ಷನ್ ಬರೆದಿದ್ದರು. ಕಾಂಗ್ರೆಸ್ನ ಇನ್ನೊಬ್ಬ ನಾಯಕ ವಿನಯ್ಕುಮಾರ್ ದೋಕಾನಿಯಾ ಟ್ವೀಟ್ ಮಾಡಿ ‘ನೋಡಿ ಭಕ್ತರೇ, ನಿಮ್ಮ ಸಾಹೇಬನಿಗೆ ಮತ್ತೊಬ್ಬ ಗುರು ಸಿಕ್ಕಿದ್ದಾರೆ’ ಎಂದಿದ್ದರು. ಹೀಗೆ ಹಲವರು ಈ ಫೋಟೋವನ್ನು ನೋಡಿ ವ್ಯಂಗ್ಯ ಮಾಡಿದ್ದೇ ಮಾಡಿದ್ದು.
ಅದಕ್ಕೆ ಮತ್ತೊಂದು ವರ್ಗದ ಜನರು ಪ್ರತಿಕ್ರಿಯೆ ನೀಡಿ ‘ರಾಕೇಶ್ ಜುಂಜುನ್‌ವಾಲಾ ಕುರ್ಚಿ ಮೇಲೆ ಕುಳಿತಿದ್ದು, ತಾನು ಶ್ರೀಮಂತ ಎಂಬ ಗರ್ವದಿಂದಲ್ಲ. ಹದಗೆಟ್ಟ ಆರೋಗ್ಯದ ಕಾರಣಕ್ಕೆ. ಪ್ರಧಾನಿ ಮೋದಿ ಅವರೆದುರು ನಿಂತು ಸೌಹಾರ್ದಯುತವಾಗಿ ಮಾತಾಡಿದ್ದಾರೆಯೇ ಹೊರತು, ಆತನೊಬ್ಬ ಉದ್ಯಮಿ ಎಂದಲ್ಲ’ ಎಂದು ಹೇಳಿದ್ದರು. ಹಾಗೇ. ರಾಕೇಶ್ ಜುಂಜುನ್‌ವಾಲಾ ನಿರ್ಮಲಾ ಸೀತಾರಾಮನ್ರನ್ನು ಭೇಟಿಯಾದ ಫೋಟೋ ಕೂಡ ತುಂಬ ವೈರಲ್ ಆಗಿತ್ತು. ಅದರಲ್ಲಿಯೂ ಅವರು ಗಾಲಿಕುರ್ಚಿ ಮೇಲೆ ಕುಳಿತಿದ್ದು ಕಾಣಿಸುತ್ತದೆ.
ವಿವಾದಕ್ಕೆ ಕಾರಣವಾದ ಫೋಟೋ
ಹಾಕಿದ್ದ ಶರ್ಟ್ ನೋಡಿ ವ್ಯಂಗ್ಯ ಮಾಡಿದ್ದ ನೆಟ್ಟಿಗರು
ಅದೇ ವೇಳೆ ಇನ್ನೊಂದು ಕಾರಣಕ್ಕೂ ಜುಂಜುನ್‌ವಾಲಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ಮಾಡಿದ ವೇಳೆ ಅವರ ಶರ್ಟ್ ಸುಕ್ಕಾಗಿತ್ತು ಎಂಬ ಒಂದು ಕ್ಷುಲ್ಲಕ ಗಲಾಟೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಎಬ್ಬಿಸಲಾಗಿತ್ತು. ಜುಂಜುನ್‌ವಾಲಾ ಭೇಟಿಯ ನಂತರ ಪ್ರಧಾನಿ ಮೋದಿ, ತಾವಿಬ್ಬರೂ ಒಟ್ಟಿಗೇ ನಿಂತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ರಾಕೇಶ್ ಜುಂಜುನ್‌ವಾಲಾ ಅಂಗಿ ಇಸ್ತ್ರಿಯಿಲ್ಲದೆ, ಸುಕ್ಕುಸುಕ್ಕಾಗಿರುವುದು ಕಾಣುತ್ತದೆ. ಅದನ್ನು ನೋಡಿದ ಅನೇಕರು ‘ಈ ದೇಶದ ಪ್ರಧಾನಮಂತ್ರಿಯನ್ನು ಭೇಟಿ ಮಾಡುವಾಗ ಇಸ್ತ್ರಿ ಇರುವ ಶರ್ಟ್ ತೊಟ್ಟು ಹೋಗಬೇಕು ಎಂದು ತಿಳಿಯುವುದಿಲ್ಲವಾ?’ ಎಂದು ಪ್ರಶ್ನಿಸಿದ್ದರು.
ತಮ್ಮ ವಿರುದ್ಧದ ಈ ಟೀಕೆಗೆ ಸಂದರ್ಶನವೊಂದರಲ್ಲಿ ಅತ್ಯಂತ ಶಾಂತವಾಗಿ ಉತ್ತರಿಸಿದ್ದ ರಾಕೇಶ್ ಜುಂಜನ್ವಾಲಾ ‘ನಾನು ಹೋಗೋವಾಗ ನನ್ನ ಶರ್ಟ್ಗೆ ಇಸ್ತ್ರಿ ಮಾಡಿಸಿದ್ದೆ. 600 ರೂಪಾಯಿ ಕೊಟ್ಟು ಐರನ್ ಹಾಕಿಸಿದ್ದೆ. ಆದರೂ ಅದು ಸುಕ್ಕಾದರೆ ನಾನೇನು ಮಾಡಲಿ? ಅಷ್ಟಕ್ಕೂ ಶರ್ಟ್ ಹೇಗಿದ್ದರೇನು? ನಾನು ಯಾರಾದರೂ ಕ್ಲೈಂಟ್ ಭೇಟಿ ಮಾಡಬೇಕಾ? ಗ್ರಾಹಕರ ಎದುರು ಕುಳಿತು ಮಾತಾಡುವುದಿದೆಯಾ? ನಿಮಗೆ ಗೊತ್ತಾ, ನಾನು ಮೊಣಕಾಲು ಉದ್ದದ ಚಡ್ಡಿ ಧರಿಸಿ ನನ್ನ ಆಫೀಸಿಗೆ ಹೋಗುತ್ತೇನೆ’ ಎಂದಿದ್ದರು. ಅಂದರೆ ನಾನು ಬಟ್ಟೆಗೆ ಅಷ್ಟೊಂದು ಪ್ರಾಮುಖ್ಯತೆ ಕೊಡುವುದಿಲ್ಲ ಎಂದು ತಿಳಿಸಿದ್ದರು.
ಈ ಫೋಟೋದಲ್ಲಿ ರಾಕೇಶ್ ಜುಂಜುನ್‌ವಾಲಾ ಶರ್ಟ್ ಸುಕ್ಕಾಗಿದ್ದನ್ನು ನೋಡಬಹುದು
ಇದನ್ನೂ ಓದಿ: ನೂತನ ಆಕಾಸ ಏರ್ಲೈನ್ಸ್ ಪ್ರಾರಂಭಿಸಿದ್ದ, ಖ್ಯಾತ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಇನ್ನಿಲ್ಲ