ನವ ದೆಹಲಿ: ಷೇರು ಮಾರುಕಟ್ಟೆಯ ಬಿಗ್ ಬುಲ್ ಎಂದೇ ಖ್ಯಾತರಾಗಿದ್ದ, ಹೂಡಿಕೆಗೆ ಹೊಸ ಭಾಷ್ಯ ಬರೆದಿದ್ದ ರಾಕೇಶ್ ಜುಂಜುನ್‌ವಾಲಾ (Rakesh Jhunjhunwala) ಅವರು ಲಕ್ಷಾಂತರ ಹೂಡಿಕೆದಾರರಿಗೆ ಸ್ಫೂರ್ತಿಯಾಗಿದ್ದರು. ಜುಂಜುನ್‌ವಾಲಾ ಅವರು ಹಲವು ವೇದಿಕೆಗಳಲ್ಲಿ, ಜಾಲತಾಣಗಳಲ್ಲಿ ಹೂಡಿಕೆ ಕುರಿತು ಮಾತನಾಡುತ್ತ ಯುವ ಹೂಡಿಕೆದಾರರಿಗೆ ಪ್ರೇರಣಾದಾಯಕ ಮಾತುಗಳಿಂದ ಹೊಸ ಚೈತನ್ಯ ಮೂಡಿಸುತ್ತಿದ್ದರು. ಅವರು ಷೇರು ಮಾರುಕಟ್ಟೆ, ಹೂಡಿಕೆ ಕುರಿತು ಹೇಳಿದ ಅಗ್ರ ಐದು ಸಲಹೆಗಳು ಹೀಗಿವೆ…
೧. “ಹವಾಮಾನ, ಸಾವು, ಮಾರುಕಟ್ಟೆ ಹಾಗೂ ಮಹಿಳೆಯರನ್ನು ಯಾರೂ ಊಹಿಸಲು, ಅಂದಾಜಿಸಲು ಆಗುವುದಿಲ್ಲ. ಅಷ್ಟಕ್ಕೂ ಷೇರು ಮಾರುಕಟ್ಟೆ ಎಂದರೆ ಮಹಿಳೆ ಇದ್ದಂತೆ. ಅದು ಯಾವಾಗಲೂ ಪ್ರಭುತ್ವ ಸಾಧಿಸಲು ಮುಂದಾಗುತ್ತದೆ, ರಹಸ್ಯದಿಂದ ಕೂಡಿರುತ್ತದೆ, ಯಾವಾಗಲೂ ಅನಿಶ್ಚಿತತೆಯಿಂದ ಕೂಡಿರುತ್ತದೆ. ಹೇಗೆ ನೀವು ಒಬ್ಬ ಮಹಿಳೆ ಮೇಲೆ ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲವೋ ಹಾಗೆಯೇ ಷೇರು ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಲು ಸಾಧ್ಯವಿಲ್ಲ.”
೨. “ಯಾವಾಗಲೂ ಅಲೆಯ ವಿರುದ್ಧ ಈಜಿ. ಯಾರಾದರೂ ಷೇರುಗಳನ್ನು ಮಾರುತ್ತಿದ್ದರೆ ಆಗ ಖರೀದಿಸಿ. ಯಾರಾದರೂ ಷೇರುಗಳನ್ನು ಖರೀದಿಸುತ್ತಿದ್ದರೆ ನೀವು ಮಾರಾಟ ಮಾಡಲು ಮುಂದಾಗಿ.”
೩. “ತರಾತುರಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಎಂದಿಗೂ ಸಂಕಷ್ಟಕ್ಕೆ ದೂಡುತ್ತವೆ, ನಷ್ಟ ಅನುಭವಿಸುವಂತೆ ಮಾಡುತ್ತವೆ. ಷೇರು ಮಾರುಕಟ್ಟೆಯಲ್ಲಿ ನಿಮ್ಮ ಹಣ ಹೂಡಿಕೆ ಮಾಡುವ ಮೊದಲು ನಿಮಗೆ ಎಷ್ಟು ಸಮಯ ಬೇಕೋ ಅಷ್ಟು ಸಮಯ ತೆಗೆದುಕೊಳ್ಳಿ, ತುಂಬ ಯೋಚಿಸಿ ಅಂತಿಮ ನಿರ್ಧಾರಕ್ಕೆ ಬನ್ನಿ.”
೪. “ಯಾವಾಗಲೂ ಷೇರು ಮಾರುಕಟ್ಟೆಯನ್ನು ಗೌರವಿಸಿ. ಮನಸ್ಸು ಹಾಗೂ ಮೆದುಳನ್ನು ಮುಕ್ತವಾಗಿ ಇಟ್ಟುಕೊಳ್ಳಿ. ಯಾವ ಷೇರು ಖರೀದಿಸಬೇಕು, ಹೂಡಿಕೆ ಮಾಡಿದ ಹಣ ಯಾವ ಸಂದರ್ಭದಲ್ಲಿ ಕಳೆದುಕೊಳ್ಳುತ್ತೇವೆ ಎಂಬ ಅಂದಾಜಿರಲಿ. ಜವಾಬ್ದಾರಿಯುತವಾಗಿ ವರ್ತಿಸಿ, ಜವಾಬ್ದಾರಿಯುತವಾಗಿ ಹೂಡಿಕೆ ಮಾಡಿ.”
೫. “ಅವಿವೇಕತನದ ಹೂಡಿಕೆ, ಲಾಭದಲ್ಲಿರುವ ಸಂಸ್ಥೆಗಳನ್ನಷ್ಟೇ ನೋಡಿ ಹೂಡಿಕೆ ಮಾಡದಿರಿ. ಷೇರು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿರುವ, ಲೈಮ್‌ಲೈಟ್‌ನಲ್ಲಿರುವ ಕಂಪನಿಗಳ ಮೇಲೆ ಹೂಡಿಕೆ ಮಾಡದಿರಿ.”
ಇದನ್ನೂ ಓದಿ | ಸೋಲಿಗೆ ಸಿದ್ಧನಿದ್ದೇನೆ ಎನ್ನುತ್ತಲೇ ಆಕಾಸ ಏರ್ಲೈನ್ ಪ್ರಾರಂಭಿಸಿದ್ದ ಬಿಗ್ ಬುಲ್