Site icon Vistara News

Ram Mandir: ಜ.22ರಂದು ಅಮೆರಿಕದಲ್ಲೂ ರಾಮನ ಜಪ; ನ್ಯೂಯಾರ್ಕ್‌ನಲ್ಲಿ ಲೈವ್‌ ಟೆಲಿಕಾಸ್ಟ್‌

Times Square

Ram Mandir consecration ceremony to be live telecast at New York's Times Square

ವಾಷಿಂಗ್ಟನ್: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ‌ (Ram Mandir) ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಇನ್ನು ರಾಮಮಂದಿರದ ಉದ್ಘಾಟನೆಯ ಕಾರ್ಯಕ್ರಮವನ್ನು ದೇಶಾದ್ಯಂತ ಬೂತ್‌ ಮಟ್ಟದಲ್ಲೂ ಲೈವ್‌ ಟೆಲಿಕಾಸ್ಟ್‌ಗೆ (Live Telecast) ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ, ಅಮೆರಿಕದಲ್ಲೂ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಲೈವ್‌ ಟೆಲಿಕಾಸ್ಟ್‌ ಇರಲಿದೆ ಎಂದು ತಿಳಿದುಬಂದಿದೆ.

ಹೌದು, ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಪ್ರತಿಷ್ಠಿತ ಟೈಮ್ಸ್‌ ಸ್ಕ್ವೇರ್‌ನಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಲೈವ್‌ ಟೆಲಿಕಾಸ್ಟ್‌ ಆಗಲಿದೆ. ಬೃಹತ್‌ ಪರದೆಯ ಮೇಲೆ ರಾಮಮಂದಿರ ಉದ್ಘಾಟನೆಯ ಕಾರ್ಯಕ್ರಮವನ್ನು ಅಮೆರಿಕದಲ್ಲಿ ನೆಲೆಸಿರುವ ರಾಮನ ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಾಣಪ್ರತಿಷ್ಠಾಪನೆ ಬಳಿಕ ನರೇಂದ್ರ ಮೋದಿ ಅವರು ಮಾತನಾಡಲಿದ್ದು, ಇದರ ನೇರಪ್ರಸಾರಕ್ಕೂ ವ್ಯವಸ್ಥೆ ಮಾಡಲಾಗಿದೆ. 2020ರ ಆಗಸ್ಟ್‌ 5ರಂದು ನರೇಂದ್ರ ಮೋದಿ ಅವರು ರಾಮಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸುವಾಗ ಟೈಮ್ಸ್‌ ಸ್ಕ್ವೇರ್‌ನಲ್ಲಿ ರಾಮಮಂದಿರದ ಡಿಜಿಟಲ್ ಚಿತ್ರ ಪ್ರದರ್ಶಿಸಲಾಗಿತ್ತು.‌

ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಉದ್ಘಾಟನೆ ದಿನ ಪ್ರಾಯೋಗಿಕವಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಇದೇ ತಂತ್ರಜ್ಞಾನ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Ram Halwa: ರಾಮಮಂದಿರ ಉದ್ಘಾಟನೆಗಾಗಿ ಸಿದ್ಧವಾಗಲಿದೆ 7 ಸಾವಿರ ಕೆಜಿ ರಾಮ ಹಲ್ವಾ; ವಿಶೇಷ ಏನು?

ಯಾವೆಲ್ಲ ಸೆಲೆಬ್ರಿಟಿಗಳಿಗೆ ಆಹ್ವಾನ?

ಸ್ಯಾಂಡಲ್‌ವುಡ್‌ನ ಯಶ್‌ ಹಾಗೂ ರಿಷಬ್‌ ಶೆಟ್ಟಿ ಅವರಿಗೆ ರಾಮಮಂದಿರ ಟ್ರಸ್ಟ್‌ ಆಹ್ವಾನ ನೀಡಿದೆ ಎಂದು ತಿಳಿದುಬಂದಿದೆ. ಇನ್ನು ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌, ರಣಬೀರ್‌ ಕಪೂರ್‌, ಮಾಧುರಿ ದೀಕ್ಷಿತ್‌, ಅಕ್ಷಯ್‌ ಕುಮಾರ್‌, ಆಲಿಯಾ ಭಟ್‌, ಆಯುಷ್ಮಾನ್‌ ಕುರಾನ, ಅಜಯ್‌ ದೇವಗನ್‌, ಅನುಪಮ್‌ ಖೇರ್‌, ಸಂಜಯ್‌ ಲೀಲಾ ಬನ್ಸಾಲಿ ಸೇರಿ ಹಲವು ನಟ-ನಟಿಯರು, ನಿರ್ದೇಶಕರಿಗೆ ಆಹ್ವಾನಿಸಲಾಗಿದೆ.

ದಕ್ಷಿಣ ಭಾರತದ ಚಿತ್ರರಂಗದ ಗಣ್ಯರಾದ ರಜನಿಕಾಂತ್‌, ಚಿರಂಜೀವಿ, ಮೋಹನ್‌ಲಾಲ್‌, ಧನುಶ್‌, ಪ್ರಭಾಸ್ ಅವರಿಗೂ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ದೇಶದ ಸುಮಾರು 4 ಸಾವಿರ ಸಂತರು ಪಾಲ್ಗೊಳ್ಳಲಿದ್ದಾರೆ. ಇಡೀ ಕಾರ್ಯಕ್ರಮದಲ್ಲಿ ಸುಮಾರು 10-15 ಸಾವಿರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version