ವಾಷಿಂಗ್ಟನ್: ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ರಾಮನ ಜಪ ಶುರುವಾಗಿದೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಕೂಡ ರಾಮಮಂದಿರ (Ram Mandir) ಉದ್ಘಾಟನೆಯ ಸಂತಸದಲ್ಲಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಅಮೆರಿಕದಲ್ಲಿ ಇಂಗ್ಲಿಷ್‌ನ ರಾಮ್ (RAM) ಅಕ್ಷರಗಳ ಮೇಲೆ ಟೆಸ್ಲಾ ಕಾರುಗಳನ್ನು (Tesla Cars) ನಿಲ್ಲಿಸಿ, ಲೈಟ್ ಶೋ ನಡೆಸುವ ಮೂಲಕ ರಾಮನ ಮೇಲಿನ ಭಕ್ತಿಯನ್ನು ಪ್ರದರ್ಶಿಸಿದ್ದಾರೆ. ಹಾಗೆಯೇ, ರಾಮಮಂದಿರ ಉದ್ಘಾಟನೆಯ ದಿನ ವಿಶೇಷ ಲೈಟ್ ಶೋ ಕೂಡ ಆಯೋಜಿಸಿದ್ದಾರೆ.
ಸುಮಾರು 100ಕ್ಕೂ ಅಧಿಕ ಟೆಸ್ಲಾ ಕಾರುಗಳ ಮಾಲೀಕರು ತಮ್ಮನ್ನು ತಾವು ರಾಮ್ ಜಿ ಗಿಲಾಹರಿಯಾನ್ ಆಫ್ ಗ್ರೇಟರ್ ಹ್ಯೂಸ್ಟನ್ ಎಂದು ಕರೆದುಕೊಂಡಿದ್ದು, ಇವರು ಶ್ರೀ ಗುರುವಾಯುರಪ್ಪನ್ ಕೃಷ್ಣ ದೇವಾಲಯದಲ್ಲಿ ಶುಕ್ರವಾರ (ಜನವರಿ 19) ಸಂಜೆ ರಾಮ್ ಎಂಬ ಇಂಗ್ಲಿಷ್ ಅಕ್ಷರಗಳ ರೀತಿ ಕಾರುಗಳನ್ನು ನಿಲ್ಲಿಸಿದ್ದಾರೆ. ಇವರು ಅಪ್‌ಲೋಡ್ ಮಾಡಿದ ವಿಡಿಯೊ ಈಗ ಭಾರಿ ವೈರಲ್ ಆಗಿದೆ. ಇದನ್ನು ವೀಕ್ಷಿಸಲು ನೂರಾರು ರಾಮಭಕ್ತರು ಜಮಾಯಿಸಿದ್ದು, ಜೈ ಶ್ರೀರಾಮ್ ಎಂಬ ಘೋಷಣೆಗಳನ್ನೂ ಕೂಗಿದ್ದಾರೆ.
ಅಮೆರಿಕದಲ್ಲೂ ರಾಮನ ಜಪ ಜೋರಾಗಿದೆ. ಇಲ್ಲಿನ 10 ರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಬೃಹತ್ ಜಾಹೀರಾತು ಫಲಕಗಳನ್ನು ಹಾಕಲಾಗಿದೆ. ಪ್ರಾಣ ಪ್ರತಿಷ್ಠೆಯ ನಿಮಿತ್ತವಾಗಿ ಪ್ರಪಂಚದಾದ್ಯಂತ ನೂರಾರು ಕಡೆ ಹಲವು ಕಾರ್ಯಕ್ರಮಗಳು ಮತ್ತು ಆಚರಣೆಗಳು ನಡೆಯುತ್ತಿವೆ. ಅವುಗಳಲ್ಲಿ, ಅಮೆರಿಕದಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಲ್ಲಿನ ಹಿಂದೂ ಸಮುದಾಯದ ಸಹಯೋಗದೊಂದಿಗೆ, 10 ರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಬಿಲ್‌ಬೋರ್ಡ್‌ಗಳನ್ನು ಸ್ಥಾಪಿಸಿದೆ. ಇದು ಅಯೋಧ್ಯೆಯಲ್ಲಿ ನಡೆಯಲಿರುವ ಭವ್ಯವಾದ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದ ಕುರಿತ ಸಂದೇಶವನ್ನು ಪ್ರದರ್ಶಿಸುತ್ತಿವೆ.
ಇದನ್ನೂ ಓದಿ: Ram Mandir: ರಾಮಮಂದಿರ ಪ್ರತಿಷ್ಠಾಪನೆ ದಿನವನ್ನು ರಾಮನವಮಿಯಂತೆ ಆಚರಿಸಿ: ರವಿಶಂಕರ್ ಗುರೂಜಿ
ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ 55 ದೇಶಗಳಿಂದ ಸುಮಾರು 100ಕ್ಕೂ ಅಧಿಕ ಗಣ್ಯರು ಅಯೋಧ್ಯೆಗೆ ಆಗಮಿಸಲಿದ್ದಾರೆ. ಜರ್ಮನಿ, ಫಿಜಿ, ಫಿನ್‌ಲ್ಯಾಂಡ್, ಅಮೆರಿಕ, ಬ್ರಿಟನ್, ಜರ್ಮನಿ, ಇಂಡೋನೇಷ್ಯಾ, ಐರ್ಲೆಂಡ್, ಜಪಾನ್, ಕೀನ್ಯಾ, ಕೊರಿಯಾ, ಮಾರಿಷಸ್, ನಾರ್ವೆ ಸೇರಿ 55 ದೇಶಗಳ ಗಣ್ಯರು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಂಗಾಪುರ, ಸ್ಪೇನ್, ಶ್ರೀಲಂಕಾ, ಜಾಂಬಿಯಾ, ವಿಯೇಟ್ನಾಂ, ಉಗಾಂಡ, ವೆಸ್ಟ್ ಇಂಡೀಸ್ ದೇಶಗಳ ನಾಯಕರು ಕೂಡ ಪಟ್ಟಿಯಲ್ಲಿದ್ದಾರೆ. ವಿದೇಶಗಳಿಂದ ಆಗಮಿಸುವ ಎಲ್ಲ ಗಣ್ಯರು ಜನವರಿ 21ರಂದೇ ಅಯೋಧ್ಯೆಗೆ ತೆರಳಲಿದ್ದಾರೆ. ಅವರಿಗಾಗಿ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ