Site icon Vistara News

Ram Mandir: ಅಯೋಧ್ಯೆಯಲ್ಲಿ ಇನ್ನು ಮುಂದೆ ರಾಮ ದರ್ಶನಕ್ಕೆ ಹೆಚ್ಚುವರಿ ಸಮಯಾವಕಾಶ

rama

rama

ಅಯೋಧ್ಯೆ: ಜನವರಿ 22ರಂದು ನಡೆದ ಪ್ರಾಣ ಪ್ರತಿಷ್ಠೆ ಸಮಾರಂಭದ ಬಳಿಕ ಅಯೋಧ್ಯೆ ರಾಮ ಮಂದಿರ (Ram Mandir) ಸಾರ್ವಜನಿಕರ ಭೇಟಿಗಾಗಿ ಮುಕ್ತವಾಗಿದೆ. ಭಕ್ತರ ಭೇಟಿಗೆ ಭಾಗಿಲು ತೆರೆದ ಆರಂಭದ ದಿನದಿಂದಲೇ ಜನ ದಟ್ಟನೆ ಕಂಡು ಬಂದಿದ್ದು, ಇದೀಗ ದೇವರ ದರ್ಶನ ಅವಧಿ ಹೆಚ್ಚಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ರಾಮನ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಈ ಹಿಂದೆ ದೇಗುಲದ ಬಾಗಿಲನ್ನು ಬೆಳಗ್ಗೆ 7 ಗಂಟೆಗೆ ತೆರೆಯಲಾಗುತ್ತಿತ್ತು. ಇದೀಗ ಪ್ರವಾಸಿಗರ ನೂಕು ನುಗ್ಗಲು ಗಮನಿಸಿ ದರ್ಶನದ ಸಮಯವನ್ನು ಹೆಚ್ಚಿಸಲಾಗಿದೆ. ಅದಾಗ್ಯೂ ಸುರಕ್ಷತೆಯ ದೃಷ್ಟಿಯಿಂದ ದೇವಾಲಯಕ್ಕೆ ತೆರಳುವ ಕೆಲವು ರಸ್ತೆಗಳಲ್ಲಿ ವಾಹನ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಮತ್ತು ಭಕ್ತರು ಕಾಲ್ನಡಿಗೆಯಲ್ಲಿ ದೇಗುಲಕ್ಕೆ ತೆರಳುವಂತೆ ಸೂಚಿಸಲಾಗಿದೆ. ಅಯೋಧ್ಯೆಯಲ್ಲಿ ಸುರಕ್ಷತೆಗೆ ಒತ್ತು ನೀಡಲಾಗಿದ್ದು, ಬಿಗಿ ಭದ್ರತೆ ಕಲ್ಪಿಸಲಾಗಿದೆ. ಕ್ಷಿಪ್ರ ಕ್ರಿಯಾ ಪಡೆ (Rapid Action Force) ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (Central Reserve Police Force) ಸಿಬ್ಬಂದಿಯನ್ನು ದೇವಾಲಯದ ಹೊರಗೆ ನಿಯೋಜಿಸಲಾಗಿದ್ದು, ಬಸ್ತಿ, ಗೊಂಡಾ, ಅಂಬೇಡ್ಕರ್‌ನಗರ, ಬಾರಾಬಂಕಿ, ಸುಲ್ತಾನ್‌ಪುರ ಮತ್ತು ಅಮೇಥಿಯಿಂದ ರಸ್ತೆಗಳಲ್ಲಿ ತಪಾಸಣೆ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಜನಸಂದಣಿ ನಿಯಂತ್ರಣಕ್ಕಾಗಿ 8,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ದರ್ಶನದ ಅವಧಿ

ಇದೀಗ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಭಕ್ತರಿಗೆ ರಾಮ ದರ್ಸನ ಭಾಗ್ಯ ಲಭಿಸಲಿದೆ. ಮಧ್ಯಾಹ್ನ 12ರಿಂದ 15 ನಿಮಿಷಗಳನ್ನು ‘ಆರತಿ’ ಮತ್ತು ‘ಭೋಗ್’ಗೆ ನಿಗದಿಪಡಿಸಲಾಗಿದೆ. ಈ ಹಿಂದೆ ದೇವರ ದರ್ಶನ ಬೆಳಗ್ಗೆ 7ರಿಂದ ಸಂಜೆ 6 ರವರೆಗೆ ಇತ್ತು ಮತ್ತು ನಡುವೆ ಎರಡು ಗಂಟೆಗಳ ವಿರಾಮವಿತ್ತು.

ಗುರುವಾರ (ಜನವರಿ 25) ‘ಪೌಶ್ ಪೂರ್ಣಿಮಾ’ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಅಯೋಧ್ಯೆಯತ್ತ ಧಾವಿಸಿದ್ದರು. ಮೈ ಕೊರೆಯುವ ಚಳಿ ಮತ್ತು ದಟ್ಟ ಮಂಜಿನ ಹೊರತಾಗಿಯೂ ಭಕ್ತರು ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ʼʼಪರಿಸ್ಥಿತಿಯನ್ನು ಸುಗಮಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಹತ್ತಿರದ ಜಿಲ್ಲೆಗಳಿಂದ ಬರುವ ವಾಹನಗಳು ಅಯೋಧ್ಯೆ ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆʼʼ ಎಂದು ಎಂದು ಅಯೋಧ್ಯೆ ಆಯುಕ್ತ ಗೌರವ್ ದಯಾಳ್ ತಿಳಿಸಿದ್ದಾರೆ.

ಇದನ್ನೂ ಓದಿ: Ram Mandir: ಅಯೋಧ್ಯೆ ರಾಮ ಮಂದಿರದೊಳಗೆ ಎರಡನೇ ದಿನವೇ ಹನುಮಾನ್‌ ಪ್ರವೇಶ!

ಜನಸಂದಣಿ ನಿಯಂತ್ರಣ ಕ್ರಮವನ್ನು ಪರಿಶೀಲಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಕ್ನೋದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ದೇವಾಲಯಕ್ಕೆ ಭೇಟಿ ನೀಡುವ ಗಣ್ಯರು ಮುಂಚಿತವಾಗಿಯೇ ಅಧಿಕಾರಿಗಳಿಗೆ ತಿಳಿಸಲು ಸೂಚಿಸಲಾಗಿದೆ. ಕನಿಷ್ಠ ಮಾರ್ಚ್‌ವರೆಗೆ ರಾಮ ಮಂದಿರಕ್ಕೆ ಭೇಟಿ ನೀಡದಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಕ್ಯಾಬಿನೆಟ್ ಸಹೋದ್ಯೋಗಿಗಳಿಗೆ ಮನವಿ ಮಾಡಿದ್ದಾರೆ. ರಾಮನ ದರ್ಶನಕ್ಕಾಗಿ ಪ್ರತಿದಿನ ಸುಮಾರು ಮೂರು ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಮಧ್ಯೆ ಪ್ರವಾಸಿಗರ ಸಂಖ್ಯೆಯಲ್ಲಿ ಕಂಡುಬಂದ ಭಾರೀ ಏರಿಕೆಯನ್ನು ಪರಿಗಣಿಸಿ ಆರತಿಗಾಗಿ ನಡೆಯುವ ಆನ್‌ಲೈನ್‌ ಬುಕಿಂಗ್ ಅನ್ನು ಜನವರಿ 29ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version