ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ (Ram Mandir) ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಜನವರಿ 22ರಂದು ಭವ್ಯ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಮ ಜನ್ಮ ಭೂಮಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸತೊಡಗಿದ್ದಾರೆ. ಜತೆಗೆ ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮವೂ ಚಿಗಿತುಕೊಂಡಿದೆ. ಹೋಟೆಲ್ ಉದ್ಯಮಿಗಳೂ ಇತ್ತ ಧಾವಿಸುತ್ತಿದ್ದಾರೆ. ಮಾತ್ರವಲ್ಲ ಹಿರಿಯ ನಾಗರಿಕರು ಅಯೋಧ್ಯೆಯಲ್ಲಿ ಜಾಗ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ.
ದೇಶದ ವಿವಿಧೆಡೆಯ ಮತ್ತು ವಿದೇಶಗಳಿಂದ ಹಲವು ಹೂಡಿಕೆದಾರರು ಇಲ್ಲಿನ ಜಾಗ ಖರೀದಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದರಿಂದ ಭೂಮಿಯ ಬೆಲೆ ಗಗನಕ್ಕೇರಿದೆ. ಕೆಲವೆಡೆ ಕೇವಲ ನಾಲ್ಕರಿಂದ ಐದು ವರ್ಷಗಳಲ್ಲಿ ನಾಲ್ಕರಿಂದ ಹತ್ತು ಪಟ್ಟು ಬೆಲೆ ಹೆಚ್ಚಾಗಿದೆ. ರಿಯಲ್ ಎಸ್ಟೇಟ್‌ನ ಈ ಚೇತರಿಕೆ ದೇಶಾದ್ಯಂತದ ಹೂಡಿಕೆದಾರರನ್ನು ಆಕರ್ಷಿಸಿದೆ. ಅನಿವಾಸಿ ಭಾರತೀಯರು ಮಾತ್ರವಲ್ಲಿ ದೇಶದ ಹಿರಿಯ ನಾಗರಿಕರು ಇಲ್ಲಿ ಮನೆ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗುತ್ತಿದ್ದಾರೆ ಎಂದು ರಿಯಲ್ ಎಸ್ಟೇಟ್ ದಲ್ಲಾಳಿಗಳು ಹೇಳುತ್ತಾರೆ.
ಆಸ್ತಿಯ ಬೆಲೆ ಎಷ್ಟಿದೆ?
ವಿಶೇಷ ಎಂದರೆ ರಾಮ ಮಂದಿರ ಇರುವ ಅಯೋಧ್ಯೆ ಮಾತ್ರವಲ್ಲ ನಗರದ ಹೊರ ವಲಯದಲ್ಲಿಯೂ ಭೂಮಿಗೆ ಬೇಡಿಕೆ ಹೆಚ್ಚಾಗಿದೆ. ಉದಾಹರಣೆಗೆ ಫೈಜಾಬಾದ್ ರಸ್ತೆಯ ಭಾಗ. 2019ರಲ್ಲಿ ಇಲ್ಲಿ ಚದರ ಅಡಿಯ ಭೂಮಿಗೆ 400ರಿಂದ 700 ರೂ. ಇತ್ತು. 2023ರ ಅಕ್ಟೋಬರ್ ವೇಳೆಗೆ ಚದರ ಅಡಿಗೆ 1,500 ರೂ.ಗಳಿಂದ 3,000 ರೂ.ಗೆ ಬೆಲೆ ಏರಿಕೆಯಾಗಿದೆ. ಅದೇ ರೀತಿ ಅಯೋಧ್ಯೆ ನಗರದಲ್ಲಿ ಭೂಮಿಯ ಬೆಲೆ 2019ರಲ್ಲಿ ಪ್ರತಿ ಚದರ ಅಡಿಗೆ 1,000-2,000 ರೂ.ಗಳಿಂದ ಪ್ರಸ್ತುತ ಪ್ರತಿ ಚದರ ಅಡಿಗೆ 4,000-6,000 ರೂ.ಗೆ ಹೆಚ್ಚಳವಾಗಿದೆ. ಅಂದರೆ 2019-2023ರ ಅವಧಿಯಲ್ಲಿ ಭೂಮಿಯ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆ ದಾಖಲಿಸಿದೆ.
ಅಯೋಧ್ಯೆಯಲ್ಲಿ ನೀವು ಆಸ್ತಿ ಖರೀದಿಸಲು ಮುಂದಾಗುತ್ತಿದ್ದರೆ ಕೆಲವೊಂದು ವಿಚಾರಗಳಲ್ಲಿ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಸಂಭಾವ್ಯ ಮನೆ ಖರೀದಿದಾರರು ಭೂ ಬಳಕೆಯನ್ನು ನಿಯಂತ್ರಿಸುವ ಸ್ಥಳೀಯ ವಲಯ ಕಾನೂನು ಮತ್ತು ನಿಬಂಧನೆಗಳನ್ನು ಪರಿಶೀಲಿಸಬೇಕು. ಅಲ್ಲದೆ ಅಯೋಧ್ಯೆಯ ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ದೃಷ್ಟಿಯಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ನಿರ್ಮಾಣ ಅಥವಾ ಅಭಿವೃದ್ಧಿ ಚಟುವಟಿಕೆಗಳ ಮೇಲೆ ಕೆಲವು ನಿರ್ಬಂಧಗಳು ಇರಬಹುದು. ಇದರತ್ತಲೂ ಗಮನ ಹರಿಸಬೇಕು.
ಮೂಲ ಸೌಕರ್ಯ
ನೀವು ಹೂಡಿಕೆ ಮಾಡಲು ಬಯಸುವ ಪ್ರದೇಶದಲ್ಲಿನ ಮೂಲಸೌಕರ್ಯಗಳ ಸ್ಥಿತಿಯನ್ನು ಪರಿಶೀಲಿಸುವುದು ಮುಖ್ಯ. ಆಸ್ತಿ ಖರೀದಿ ಒಪ್ಪಂದಕ್ಕೆ ತೊಡಗುವ ಮೊದಲು ನೀರು ಸರಬರಾಜು, ವಿದ್ಯುತ್ ಮತ್ತು ಒಳಚರಂಡಿ ವ್ಯವಸ್ಥೆಗಳಂತಹ ಮೂಲ ಸೌಕರ್ಯಗಳ ಲಭ್ಯತೆಯನ್ನು ಪರಿಶೀಲಿಸುವುದು ಅಗತ್ಯ. ಅಲ್ಲದೆ ಅಸ್ತಿತ್ವದಲ್ಲಿರುವ ಸೌಕರ್ಯವು ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆಯೇ ಎಂದು ನಿರ್ಣಯಿಸುವುದು ಸಹ ಮುಖ್ಯ. ಮುಖ್ಯ ರಸ್ತೆ, ಹೆದ್ದಾರಿ, ಸಾರ್ವಜನಿಕ ಸಂಪರ್ಕ ವ್ಯವಸ್ಥೆ ಹೇಗಿದೆ ಎನ್ನುವುದನ್ನೂ ಗಮನಿಸಬೇಕು.
ಭವಿಷ್ಯದ ಅಭಿವೃದ್ಧಿ ಯೋಜನೆ
ಯಾವುದೇ ಮೂಲ ಸೌಕರ್ಯ / ಉದ್ದೇಶಿತ ಅಭಿವೃದ್ಧಿ ಯೋಜನೆಗಳು ಅಥವಾ ಅಸ್ತಿತ್ವದಲ್ಲಿರುವ ಯೋಜನೆ ಮತ್ತು ಅಭಿವೃದ್ಧಿ ಮಾನದಂಡಗಳಲ್ಲಿನ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳಲು ನಗರದ ಮಾಸ್ಟರ್ ಪ್ಲ್ಯಾನ್ ಬಗ್ಗೆ ಕೂಲಂಕುಷ ಅಧ್ಯಯನ ಅಗತ್ಯ. ಅಲ್ಲದೆ ಭೂ ಬಳಕೆಯ ಮೇಲೆ ಮತ್ತು ಆಸ್ತಿಯ ಮೌಲ್ಯದ ಮೇಲೆ ಪರಿಣಾಮ ಬೀರುವ ಸ್ಥಳೀಯ ನಿಯಮಗಳಲ್ಲಿ ಯಾವುದೇ ಪ್ರಸ್ತಾವಿತ ಬದಲಾವಣೆಗಳ ಬಗ್ಗೆ ಮಾಹಿತಿ ಹೊಂದಿರಬೇಕು. ಹೋಟೆಲ್ ಉದ್ಯಮದ ಬೆಳವಣಿಗೆಯೊಂದಿಗೆ ವಾಣಿಜ್ಯ ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ತಕ್ಷಣ ಅವಕಾಶಗಳು ಹೆಚ್ಚಬಹುದು. ಇತ್ತ ವಸತಿ ಯೋಜನೆಗಳ ಬೆಳವಣಿಗೆಗೆ ಸಮಯ ತೆಗೆದುಕೊಳ್ಳಬಹುದು.
ಇದನ್ನೂ ಓದಿ: Ram Mandir: ರಾಮ ಮಂದಿರ ದೇಗುಲಕ್ಕೆ ಹರಿದು ಬಂತು ದೇಣಿಗೆ; ಇದುವರೆಗೆ ಸಂಗ್ರಹವಾಗಿದ್ದು ಎಷ್ಟು?
ಟೌನ್‌ಶಿಪ್ ಮತ್ತು ಹೋಟೆಲ್
ಅಯೋಧ್ಯೆ ನಗರದಲ್ಲಿ ಹಲವು ಟೌನ್ ಶಿಪ್‌ಗಳು ಮತ್ತು ಖಾಸಗಿ ಹೋಟೆಲ್‌ಗಳು ತಲೆ ಎತ್ತುವ ನಿರೀಕ್ಷೆ ಇದೆ. ಇದಕ್ಕಾಗಿ ಸರ್ಕಾರವು ಭೂಮಿಯನ್ನು ಮಂಜೂರು ಮಾಡಿದೆ. ಇದು ಚೌಡಾ ಕೋಸಿ, ರಿಂಗ್ ರಸ್ತೆ ಮತ್ತು ಲಕ್ನೋ-ಗೋರಖ್‌ಪುರ ಹೆದ್ದಾರಿಯ ಸುತ್ತಲೂ ಇದೆ. ಅಯೋಧ್ಯೆ ಡೆವಲಪ್‌ಮೆಂಟ್ ಅಥಾರಿಟಿ (Ayodhya Development Authority) ಇಲ್ಲಿ ವಸತಿ ಯೋಜನೆ ಆರಂಭಿಸಲಿದೆ. ಸುಮಾರು 80 ಎಕ್ರೆಯಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. 2023ರ ಏಪ್ರಿಲ್ ಮತ್ತು ನವೆಂಬರ್ ನಡುವೆ ಅಯೋಧ್ಯೆಯಲ್ಲಿ 30,000 ಮಾರಾಟ ಪತ್ರಗಳು ನೋಂದಾಯಿಸಲ್ಪಟ್ಟಿವೆ. ಆ ಪೈಕಿ ಶೇ. 80ರಷ್ಟು ಭೂ ವ್ಯವಹಾರಕ್ಕೆ ಸಂಬಂಧಪಟ್ಟವು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ