ಅಯೋಧ್ಯೆ: ಇಂದು (ಏಪ್ರಿಲ್ 17) ರಾಮ ನವಮಿ (Ram Navami). ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೊಂಡಿರುವ ಬಾಲಕ ರಾಮನಿಗೆ ಇದು ಮೊದಲ ಶ್ರೀ ರಾಮ ನವಮಿ (Ayodhya Ram Mandir). ಹೀಗಾಗಿ ಈ ಬಾರಿಯ ಹಬ್ಬ ಇನ್ನೂ ವಿಶೇಷ ಎನಿಸಿಕೊಂಡಿದೆ. ಜತೆಗೆ ರಾಮನಿಗೆ ‘ಸೂರ್ಯ ಅಭಿಷೇಕ / ಸೂರ್ಯ ತಿಲಕʼವೂ ಇಂದು ನೆರವೇರಿತು. ಕೋಟ್ಯಂತರ ಭಕ್ತರು ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಂಡರು. ವಿಡಿಯೊ ಇಲ್ಲಿದೆ ನೋಡಿ.
#WATCH | ‘Surya Tilak’ illuminates Ram Lalla’s forehead at the Ram Janmabhoomi Temple in Ayodhya, on the occasion of Ram Navami.
— ANI (@ANI) April 17, 2024
(Source: DD) pic.twitter.com/rg8b9bpiqh
ಗರ್ಭಗೃಹದಲ್ಲಿರುವ ಬಾಲಕ ರಾಮ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕು ತಿಲಕದ ರೀತಿ ಕಂಗೊಳಿಸಿತು. ಈ ಚಮತ್ಕಾರ ನೆರೆದಿದ್ದ ಭಕ್ತರನ್ನು ಭಾವಪರವಶವನ್ನಾಗಿಸಿತು. ಸುಮಾರು 4-5 ನಿಮಿಷಗಳ ಕಾಲ ಪ್ರಭು ಶ್ರೀರಾಮನ ಹಣೆಯ ಮೇಲೆ ಸೂರ್ಯ ತಿಲಕ ಕಂಗೊಳಿಸಿತು. ಇನ್ನು ಪ್ರತಿ ವರ್ಷದ ರಾಮ ನವಮಿಯಂದು ಅಯೋಧ್ಯೆಯಲ್ಲಿ ಬಾಲಕ ರಾಮನಿಗೆ ಈ ರೀತಿ ಸೂರ್ಯ ತಿಲಕ ಇಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಅತ್ತ ಅಸ್ಸಾಂನಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದರು. ನಲ್ಬಾರಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಇಂದು ರಾಮನವಮಿಯ ಐತಿಹಾಸಿಕ ಸಂದರ್ಭವೂ ಆಗಿದೆ. 500 ವರ್ಷಗಳ ಕಾಯುವಿಕೆಯ ನಂತರ, ಭಗವಾನ್ ರಾಮನು ಅಂತಿಮವಾಗಿ ತನ್ನ ಭವ್ಯ ದೇವಾಲಯದಲ್ಲಿ ಕುಳಿತಿದ್ದಾನೆ ಮತ್ತು ಭಗವಾನ್ ರಾಮನಿಗೆ ‘ಸೂರ್ಯ ತಿಲಕ್’ ಹಚ್ಚುವ ಮೂಲಕ ಪವಿತ್ರ ನಗರವಾದ ಅಯೋಧ್ಯೆಯ ರಾಮ ದೇವಾಲಯದಲ್ಲಿ ರಾಮನ ಜನ್ಮ ದಿನವನ್ನು ಆಚರಿಸಲಾಗಿದೆ” ಎಂದು ಅವರು ಹೇಳಿದ್ದಾರೆ. ʼಸೂರ್ಯ ತಿಲಕʼದ ಚಮತ್ಕಾರಿ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶಾದ್ಯಂತ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಲೈವ್ ಪ್ರಸಾರವೂ ಇತ್ತು.
ಏನಿದು ತಂತ್ರಜ್ಞಾನ?
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಹಭಾಗಿತ್ವದಲ್ಲಿ ಒಪ್ಟಿಕಾ ಎಂಬ ಕಂಪನಿ ಈ ಸೂರ್ಯ ತಿಲಕ ಯೋಜನೆಯನ್ನು ರೂಪಿಸಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ ಯಂತ್ರ ಅಭಿವೃದ್ಧಿಪಡಿಸಲಾಗಿದೆ. ಒಂದಿಷ್ಟು ನಿಮಿಷ ರಾಮನ ಹಣೆ ಮೇಲೆ ತಿಲಕದಂತೆ ಸೂರ್ಯನ ಕಿರಣ ಬೀಳಲಿದೆ. ಇಲ್ಲಿ ಅಳವಡಿಸಲಾದ ಆಪ್ಟೋಮೆಕಾನಿಕಲ್ ಸಿಸ್ಟಮ್ ಅತಿಗೆಂಪು ಫಿಲ್ಟರ್‌ನಿಂದ ಮಾಡಲ್ಪಟ್ಟಿದೆ. ಇದಕ್ಕೆ ನಿಖರ ಮಸೂರ ಮತ್ತು ಕನ್ನಡಿಗಳನ್ನು ಬಳಸಿ ವಿಶಿಷ್ಟ ವಿನ್ಯಾಸವನ್ನು ಒದಗಿಸಲಾಗಿದೆ. ಈ ಅಂಶಗಳು ನೈಸರ್ಗಿಕ ಸೂರ್ಯನ ಬೆಳಕನ್ನು ಬಳಸಿಕೊಂಡು ದೈವಿಕ ಸಂಕೇತವಾಗಿ ತಿಲಕವನ್ನು ಉಂಟು ಮಾಡುತ್ತವೆ. ಇದು ನೇರವಾಗಿ ರಾಮನ ಹಣೆಯ ಮೇಲೆ ಮೂಡುವಂತೆ ವ್ಯವಸ್ಥೆ ಮಾಡಲಾಗಿದೆ.
ಪ್ರಯೋಗ ಯಶಸ್ವಿ
ರಾಮ ನವಮಿಗೆ ಮುಂಚಿತವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಯೋಧ್ಯೆಯೊಳಗಿನ ಶ್ರೀ ರಾಮಲಲ್ಲಾ ವಿಗ್ರಹಕ್ಕೆ ಎರಡನೇ ಬಾರಿ ಯಶಸ್ವಿಯಾಗಿ ಸೂರ್ಯ ತಿಲಕ ಅಥವಾ ಸೂರ್ಯಾಭಿಷೇಕವನ್ನು ನಡೆಸಿತ್ತು. ಈ ಹಿಂದೆ ಏಪ್ರಿಲ್ 8ರಂದು ಮೊದಲ ಬಾರಿಗೆ ಇದರ ಪ್ರಯೋಗ ನಡೆಸಲಾಗಿತ್ತು.
ಇದನ್ನೂ ಓದಿ: Ayodhya Ram Mandir: ಜನ್ಮದಿನದ ಸಂಭ್ರಮಕ್ಕೆ ಕಾತರ; ರಾಮಲಲ್ಲಾನಿಗೆ ಸೂರ್ಯ ಕಿರಣ ಅಭಿಷೇಕ ಪ್ರಯೋಗ ಸಕ್ಸೆಸ್!
ಅಯೋಧ್ಯೆಯಲ್ಲಿ ಭಕ್ತಜನ ಸಾಗರ
ಇನ್ನು ಅಯೋಧ್ಯೆ ರಾಮ ಮಂದಿರದತ್ತ ಭಕ್ತ ಜನ ಸಾಗರವೇ ಹರಿದು ಬಂದಿದೆ. ಮಂದಿರ ಉದ್ಘಾಟನೆಯಾದ ಬಳಿಕ ಆಚರಿಸುತ್ತಿರುವ ಮೊದಲ ರಾಮ ನವಮಿ ಆಗಿರುವ ಕಾರಣದಿಂದ ಅಯೋಧ್ಯೆಗೆ ಲಕ್ಷಾಂತರ ಜನ ಭಕ್ತರು ಬರುವ ನಿರೀಕ್ಷೆಯಿದೆ. ರಾಮನಿಗೆ ಉಣಬಡಿಸಲು 56 ಬಗೆಯ ಪ್ರಸಾದಗಳನ್ನು ಸಿದ್ಧಪಡಿಸಲಾಗಿದೆ.