Site icon Vistara News

Ram Temple: ರಾಮಮಂದಿರ ಉದ್ಘಾಟನೆಗೆ ರಾಮ, ಸೀತೆಗೂ ಆಹ್ವಾನ! ವಿಐಪಿ ಲಿಸ್ಟ್‌ನಲ್ಲಿ ಯಾರಿದ್ದಾರೆ?

arun and deepika

arun and deepika

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ(Ram Mandir)ದ ಕಾಮಗಾರಿಯು ಕೊನೆಯ ಹಂತಕ್ಕೆ ಬಂದು ನಿಂತಿದೆ. 2024ರ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ಮಾಡಲಾಗುತ್ತದೆ. ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾನೆ (Pran Pratishta) ನೆರವೇರಿಸಿ, ಗರ್ಭಗುಡಿಯಲ್ಲಿ ಇರಿಸಿ ಪೂಜೆ ಮಾಡಲಾಗುತ್ತದೆ. ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದೀಗ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಲಾಗುತ್ತಿದೆ.

ಆಹ್ವಾನ ಪಡೆದ ಗಣ್ಯರು

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸುಮಾರು 3,000 ವಿವಿಐಪಿಗಳು, ದೇಶದ ವಿವಿಧ ಭಾಗಗಳಿಂದ 4,000 ಸಂತರು ಮತ್ತು ಸಾಧುಗಳು, 50 ದೇಶಗಳ ಪ್ರತಿನಿಧಿಗಳು ಮತ್ತು ರಾಮ ಮಂದಿರ ಚಳವಳಿಯ ಭಾಗವಾಗಿದ್ದ ‘ಕರ ಸೇವಕರ’ ಕುಟುಂಬ ಸದಸ್ಯರು ಸೇರಿದಂತೆ 7,000ಕ್ಕೂ ಹೆಚ್ಚು ಜನರಿಗೆ ಆಹ್ವಾನ ಪತ್ರಗಳನ್ನು ಕಳುಹಿಸಿದೆ.

“ಸಂತರು, ಸಿನಿಮಾ, ಕ್ರೀಡಾ ತಾರೆಯರು, ಉದ್ಯಮಿಗಳು, ವಿಜ್ಞಾನಿಗಳು, ನ್ಯಾಯಾಧೀಶರು, ಪತ್ರಕರ್ತರು, ರಾಜಕಾರಣಿಗಳು ಹೀಗೆ ಎಲ್ಲ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳನ್ನು ಆಹ್ವಾನಿಸಿದ್ದೇವೆ. ಜತೆಗೆ ಕವಿಗಳು, ಗಾಯಕರು, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಿಗೆ ಆಹ್ವಾನಗಳನ್ನು ಕಳುಹಿಸಲಾಗುತ್ತಿದೆ ಎಂದು ಅಯೋಧ್ಯೆಯ ವಿಶ್ವ ಹಿಂದೂ ಪರಿಷತ್‌ನ ಪ್ರಾದೇಶಿಕ ವಕ್ತಾರ ಶರದ್ ಶರ್ಮಾ ಹೇಳಿದ್ದಾರೆ.

ರಾಮ ಮಂದಿರ ಟ್ರಸ್ಟ್‌ನ 3,000 ವಿವಿಐಪಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್‌ ಬಚ್ಚನ್, ಬಾಲಿವುಡ್ ನಟ ಅಕ್ಷಯ್ ಕುಮಾರ್, ನಟಿ ಕಂಗನಾ ರಾಣಾವತ್‌, ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್, ಯೋಗ ಗುರು ರಾಮ್‌ದೇವ್‌ ಮತ್ತು ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ, ರತನ್ ಟಾಟಾ ಮತ್ತು ಗೌತಮ್ ಅದಾನಿ ಸೇರಿದ್ದಾರೆ. ಇದಲ್ಲದೆ ಪ್ರಸಿದ್ಧ ಟಿವಿ ಧಾರಾವಾಹಿ ‘ರಾಮಾಯಣ’ದಲ್ಲಿ ರಾಮನ ಪಾತ್ರವನ್ನು ನಿರ್ವಹಿಸಿದ ನಟ ಅರುಣ್ ಗೋವಿಲ್ ಮತ್ತು ಸೀತೆಯ ಪಾತ್ರವನ್ನು ನಿರ್ವಹಿಸಿದ ದೀಪಿಕಾ ಚಿಖ್ಲಿಯಾ ಅವರನ್ನು ಸಹ ಟ್ರಸ್ಟ್ ಆಹ್ವಾನಿಸಿದೆ.

ಪ್ರತಿಷ್ಠಾಪನಾ ಸಮಾರಂಭಕ್ಕೆ ಸುಮಾರು 50 ದೇಶಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಅಲ್ಲದೆ, ರಾಮ ಮಂದಿರ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡ ಕರ ಸೇವಕರಿಗೆ ಗೌರವ ಮತ್ತು ಕೃತಜ್ಞತೆ ಸಲ್ಲಿಸುವ ಸಂಕೇತವಾಗಿ ಅವರ ಕುಟುಂಬ ಸದಸ್ಯರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.

ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ವಿರಾಟ್​ ಕೊಹ್ಲಿ, ಸಚಿನ್​​ಗೆ ಆಹ್ವಾನ

ನಾಲ್ಕು ವೇದಗಳಲ್ಲಿ ಪರಿಣತಿ ಹೊಂದಿರುವ ವಿದ್ವಾಂಸರನ್ನು ಒಳಗೊಂಡ ವಾರಣಾಸಿಯ 21 ಪಂಡಿತರ ತಂಡವೂ ಸಮಾರಂಭದಲ್ಲಿ ಭಾಗವಹಿಸಲಿದೆ. ಖ್ಯಾತ ವೈದಿಕ ವಿದ್ವಾಂಸ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ತಂಡವನ್ನು ಮುನ್ನಡೆಸಲಿದ್ದು, ಅವರ ಇಬ್ಬರು ಪುತ್ರರಾದ ಪಂಡಿತ್ ಜೈಕೃಷ್ಣ ದೀಕ್ಷಿತ್ ಮತ್ತು ಸುನಿಲ್ ದೀಕ್ಷಿತ್ ಮತ್ತು ಕಾಶಿಯ ಇತರ 18 ಪಂಡಿತರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಯೋಧ್ಯೆಯ ರಾಮ ದೇವಾಲಯದ ಗರ್ಭಗುಡಿಯಲ್ಲಿ ಇರಿಸಬೇಕಾದ ವಿಗ್ರಹದ ಕೆಲಸ ಬಹುತೇಕ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version