ನವ ದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧದ ಆರೋಪವನ್ನು ಸಿಬಿಐಗೆ ವಹಿಸುವವರೆಗೂ ಪಟ್ಟು ಬಿಡಲು ಸಿದ್ಧವಾಗಿಲ್ಲದ ಬಿಜೆಪಿ ನಾಯಕ ರಮೇಶ್ ಜಾರಕಹೊಳಿ (Ramesh Jarkiholi), ರಾಜ್ಯದಲ್ಲಿ ಫಲ ಸಿಗಲಿಲ್ಲ ಎಂದರಿತು ನವದೆಹಲಿಗೆ ತೆರಳಿದ್ದಾರೆ.
ಗುರುವಾರ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಮನೆಯಲ್ಲಿ ಭೇಟಿ ಮಾಡಿದ ಜಾರಕಿಹೊಳಿ, ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ ಮಾಡಿದರು. ಆದರೆ ಮೊದಲು ದೂರು ದಾಖಲಿಸಲು ಸಿಎಂ ಸಲಹೆ ನೀಡಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ ನೇರವಾಗಿ ನವದೆಹಲಿಗೆ ಜಾರಕಿಹೊಳಿ ತೆರಳಿದ್ದಾರೆ.
ದೆಹಲಿಯಲ್ಲಿ ಪ್ರಮುಖವಾಗಿ ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಅವರನ್ನು ರಮೇಶ್ ಜಾರಕಿಹೊಳಿ ಭೇಟಿ ಮಾಡಲಿದ್ದಾರೆ. ಶುಕ್ರವಾರ ಬೆಳಗ್ಗೆ ರಾಜ್ಯ ಬಿಜೆಪಿ ಪ್ರಭಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸುವ ಕುರಿತು ಇಬ್ಬರನ್ನೂ ಒತ್ತಾಯ ಮಾಡಲಿದ್ದಾರೆ ಎನ್ನಲಾಗಿದೆ. ಜತೆಗೆ ಸಚಿವ ಸಂಪುಟ ವಿಸ್ತರಣೆ ಕುರಿತೂ ಮಾತುಕತೆ ನಡೆಸುವ ಸಾಧ್ಯತೆಯಿದೆ.
ಇದನ್ನೂ ಓದಿ : Ramesh Jarkiholi : ರಮೇಶ್ ಜಾರಕಿಹೊಳಿ ವಿರುದ್ಧ ಅವಾಚ್ಯ ಶಬ್ದಗಳಿಂದ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಎಂಎಲ್‌ಸಿ ರವಿ
ಶುಕ್ರವಾರ ಮದ್ಯಾಹ್ನ ಅರುಣ್ ಸಿಂಗ್ ಕರ್ನಾಟಕಕ್ಕೆ ಆಗಮಿಸಲಿದ್ದು, ಎರಡು ದಿನ ಪ್ರವಾಸ ಮಾಡಲಿದ್ದಾರೆ. ವಿವಿಧ ಸಭೆ, ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಹಾಗೆಯೇ ರಾಜ್ಯ ಕೋರ್ ಕಮಿಟಿ ಸಭೆಯೂ ನಡೆಯಲಿದ್ದು, ಮುಂದಿನ ಕಾರ್ಯತಂತ್ರಗಳ ಕುರಿತು ಮಹತ್ವದ ನಿರ್ಧಾರ ಮಾಡಲಾಗುತ್ತದೆ. ಇದೆಲ್ಲದರ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ನವದೆಹಲಿ ಪ್ರವಾಸ ಕುತೂಹಲ ಮೂಡಿಸಿದೆ.