ಹೆಚ್ ಎಂ ರುಕ್ಮಿಣಿ ನಾಯಕ್
ಕೋಲ್ಕತಾದ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್‌ನಲ್ಲಿ ಸ್ವಾಮಿ ವಿವೇಕಾನಂದ ಸೇವಾ ಪುರಸ್ಕಾರ ಸಮಾರಂಭ ಆಯೋಜನೆಗೊಂಡಿತ್ತು. ಈ ಪುರಸ್ಕಾರವನ್ನು ಲೋಕಮಾನ್ಯ ಸಮಾಜ ಸೇವಕಿಯರಿಗೆ ಮತ್ತು ಸ್ವಾತಂತ್ರ್ಯ ಸೇನಾನಿಗಳಿಗೆ ಕೊಡುವುದೆಂದು ತೀರ್ಮಾನಿಸಲಾಗಿತ್ತು. ಈ ಪುರಸ್ಕಾರವನ್ನು ಮೊಟ್ಟಮೊದಲಿಗೆ ಪಡೆದ ಹೆಗ್ಗಳಿಕೆ ನಾಗಾರಾಣಿ ಎಂದು ಪ್ರಸಿದ್ಧರಾಗಿದ್ದ ರಾಣಿ ಗೈಡಿನ್ಲ್ಯೂ (Rani Gaidinliu) ಅವರದ್ದು.
ಈಕೆ ಕೇವಲ ತಮ್ಮ ಹದಿಮೂರನೇಯ ವಯಸ್ಸಿನಿಂದಲೇ ಗುರು ಜಾದೋನಾಂಗರು ನಡೆಸಿದ ಸ್ವಾತಂತ್ರ್ಯ ಆಂದೋಲನದಲ್ಲಿ ಧುಮುಕಿದವರು. ಜನರಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯವಾಗಿ ಜಾಗೃತಿಯನ್ನು ಉಂಟು ಮಾಡುತ್ತಾ ಜೇಮಿ, ಲಿಯಾಂಗ್ಮಯ್ ಮತ್ತುರಾಂಗ್‌ಮೈ (ಇವು ಅಲ್ಲಿನ ನಾನಾ ಪಂಗಡಗಳು) ನಾಗಾಗಳನ್ನು ಜೆಲಿಯಾಂಗ್ರಾಂಗ್ ಹೆಸರಿನಲ್ಲಿ ಒಗ್ಗೂಡಿಸಿದರು. ತತ್ಮೂಲಕ ಒಂದು ಸಮರಸ ಸಮಾಜವನ್ನು ಕಟ್ಟಿ, ಜೀವನದ ಕೊನೆ ಉಸಿರಿನವರಿಗೂ ದೇಶ ಹಾಗೂ ಸಮಾಜಸೇವೆ ಮಾಡುತ್ತಲೇ ಇದ್ದವರು.
ಸ್ವಾಮಿ ವಿವೇಕಾನಂದ ಪುರಸ್ಕಾರ ಸಮಾರಂಭವನ್ನು ರಾಣಿ ಗೈಡಿನ್ಲ್ಯೂ ಭಾರತ ಮಾತೆ ಹಾಗೂ ಸ್ವಾಮಿ ವಿವೇಕಾನಂದರ ಪ್ರತಿಮೆ ಎದುರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಅಧ್ಯಕ್ಷೀಯ ಸ್ಥಾನದಿಂದ ಮಾತನಾಡಿದ ಸ್ವಾಮಿ ವಿಜಯಾನಂದರು ರಾಣಿಮಾರವರ ವ್ಯಕ್ತಿತ್ವವನ್ನು ಈ ರೀತಿ ವರ್ಣಿಸಿದರು. “ಭಾರತದ ಇತಿಹಾಸದಲ್ಲಿ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಅನೇಕ ರಾಣಿಯರು ಕಂಡು ಬರುತ್ತಾರೆ. ರಾಣಿ ಲಕ್ಷ್ಮೀಬಾಯಿ, ರಾಣಿ ದುರ್ಗಾವತಿ, ದೇವಿ ಅಹಲ್ಯಾಬಾಯಿ ಹೋಳ್ಕರ್, ಕಣ್ಣಗಿ ಮುಂತಾದವರು ತಮ್ಮತ್ಯಾಗ ಹಾಗೂ ವೀರತ್ವದಿಂದ ಅವಿಸ್ಮರಣೀಯರಾಗಿದ್ದಾರೆ. ರಾಣಿ ಗೈಡಿನ್ಲ್ಯೂ ಕೂಡ ಬ್ರಿಟಿಷರಿಗೆ ನೀರು ಕುಡಿಸಿದವರು ಹಾಗೂ ಸ್ವಾತಂತ್ರ್ಯದ ನಂತರವೂ 1960 ರಿಂದ 1966 ರವರೆಗೆ ನಾಗಾ ಆತಂಕವಾದಿಗಳ ವಿರುದ್ಧ ಹಾಗೂ ಚರ್ಚಿನ ಸೇನೆಯೊಂದಿಗೆ ನಾಗಾಲ್ಯಾಂಡಿನಲ್ಲಿ ಏಕಾಂಗಿಯಾಗಿ ಹೋರಾಡಿದರು. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಈಕೆಯ ಹೆಸರು ಸುವರ್ಣಾಕ್ಷರದಲ್ಲಿ ಬರೆಯಲುಅರ್ಹವಾಗಿದೆ” ಎಂದು ಮನಸಾರೆ ಶ್ಲಾಘಿಸಿದರು.
ಸ್ವಾಮಿ ವಿವೇಕಾನಂದ ಪುರಸ್ಕಾರ ಪಡೆದ ನಂತರ ರಾಣಿಮಾತಮ್ಮ ಹೃದಯದ ಭಾವನೆಯನ್ನು ಈ ರೀತಿ ಹಂಚಿಕೊಂಡರು. “ಈದೇಶದ ಸೇವೆ ಇಲ್ಲಿಯ ಧರ್ಮ ಸಂಸ್ಕೃತಿಯ ರಕ್ಷೆ ಮತ್ತು ವಿಕಾಸ ನನ್ನ ಜೀವನದಗುರಿಯಾಗಿದೆ. ನಾಗಾಲ್ಯಾಂಡಿನಲ್ಲಿ ಬೆರೆಳೆಣಿಕೆಯಷ್ಟು ಆತಂಕವಾದಿಗಳನ್ನು ಬಿಟ್ಟರೆ ಉಳಿದೆಲ್ಲ ನಾಗಾಗಳು ಭಾರತ ವರ್ಷವನ್ನು ತಮ್ಮ ದೇವರೆಂದು ತಿಳಿದಿರುವವರು ಹಾಗೂ ಒಪ್ಪಿರುವವರು. ಆದರೆ ನಾಗ ಆತಂಕವಾದಿಗಳ ಹಾಗೂ ಚರ್ಚಿನ ಒತ್ತಡ – ಬೆದರಿಕೆಯಿಂದಾಗಿ ಅವರು ತಮ್ಮದೇಶ ಪ್ರೇಮವನ್ನು ಬಹಿರಂಗಪಡಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಮನೋಬಲ ನೀಡುವ ಅವಶ್ಯಕತೆ ಇದೆ. ಸಮಸ್ತ ಹಿಂದೂ ಸಮಾಜದ ಗಮನವನ್ನು ನಾಗಲ್ಯಾಂಡಿನ ಸಮಸ್ಯೆಯತ್ತ ಹೊರಳಿಸುವ ಅಗತ್ಯವಿದೆ” ಎನ್ನುತ್ತಾ ಜನಾಂಗದ ಬಗ್ಗೆ ತಮಗಿರುವ ಪ್ರೀತಿಯನ್ನು ವಿವರಿಸಿದರು.
ರಾಣಿಮಾರವರ ಸತತ ಪ್ರಯತ್ನದಿಂದಾಗಿ ನಾಗ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ದೇಶದ ನಾನಾ ಭಾಗಗಳಿಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಲಾಯಿತು. ಇಂದು ಬೇರೆ ಬೇರೆ ಸಂಘಟನೆಗಳ ನೂರಾರು ವಿದ್ಯಾರ್ಥಿ ನಿಲಯಗಳಲ್ಲಿ ಸೂಮಾರು 2000 ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ನಾಗಾ ಸಮಾಜದಲ್ಲಿ ಯಾವುದೇ ಹೆಣ್ಣು ಮಕ್ಕಳು ಅವಿವಾಹಿತರಾಗಿ ಉಳಿದಿಲ್ಲ. ದೇಶ ಹಾಗೂ ಸಮಾಜ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟ ಉದಾಹರಣೆಗಳಿಲ್ಲ. ರಾಣಿಮಾ ಇಂತಹ ಆದರ್ಶವನ್ನು ಸಮಾಜದ ಮುಂದೆತಮ್ಮ ಬದುಕಿನ ಮೂಲಕ ಮುಂದಿಟ್ಟರು. ಇವರಿಂದ ಪ್ರೇರಿತರಾಗಿ ಅನೇಕ ಮಹಿಳೆಯರು ಅವಿವಾಹಿತರಾಗುಳಿದು ದೇಶ ಸೇವೆಗೆ ಹಾಗೂ ಸಮಾಜ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟರು.
ಹೀಗೆ ಆದರ್ಶ ಮಹಿಳೆಯಾಗಿ ಹೊರಹೊಮ್ಮಿದ ರಾಣಿ ಗೈಡಿನ್ಲ್ಯೂರವರು 1915 ಜನವರಿ 26ರಂದು ಮಣಿಪುರದ ರಾಂಗ್‌ಮೈಗ್ರಾಮದಲ್ಲಿ ಜನಿಸಿದರು. ಇವರತಂದೆ ಲೋಥೋನಾಂಗ ತಾಯಿ ಕೆಲುವತಲಿನ್ಲಿಯೂರ. ತಂದೆ ಸಾಮಾಜಿಕ ವ್ಯವಸ್ಥೆಯಲ್ಲಿ ಆಡಳಿತ ಜವಾಬ್ದಾರಿಯನ್ನು ನಿರ್ವಹಿಸುವ ಪಾಮಯ ಜನಾಂಗದ ಪ್ರಮುಖರಾಗಿದ್ದರು. ಹೀಗೆ ರಾಣಿಮಾರಿಗೆ ನಾಯಕತ್ವಗುಣ, ವಂಶದ ಬಳುವಳಿಯಾಗಿರಬಹುದು. ತಂದೆ ತಾಯಿ ಹಾಗೂ ಗ್ರಾಮಸ್ಥರು ಈ ಮಗುವನ್ನು ದೈವದತ್ತವೆಂದು ಭಾವಿಸಿದರು. ಮುಂದೆ ಹೀಗೆ ಆಧ್ಯಾತ್ಮಿಕ ತಳಹದಿಯಲ್ಲಿ ಹೋರಾಟ ನಡೆಸಿದರು.
ಹುಟ್ಟಿನಿಂದಲೇ ಸದೃಢ ಹಾಗೂ ಸುಂದರ ಬಾಲಕಿ. ಶಾಂತ ಸ್ವಭಾವದವಳು. ಚಿಕ್ಕಂದಿನಿಂದ ಧ್ಯಾನಸ್ಥಳಾಗುತ್ತಿದ್ದಳು. ಬೆಳೆಯುತ್ತಾ ಬೆಳೆಯುತ್ತಾ ಸ್ವತಂತ್ರಚಿಂತನೆ, ಜಿಜ್ಞಾಸೆ, ಅಂತರ್ಮುಖತೆ ಇವರ ಪ್ರವೃತ್ತಿಯಾಯಿತು. ಇಂತಹ ಅಪೂರ್ವ ವ್ಯಕ್ತಿತ್ವದ ಈಕೆಯನ್ನು ಜನ ದುರ್ಗೆಯ ಅವತಾರವೆಂದು ನಂಬಿದ್ದರು.
ಸನಾತನ ಧರ್ಮದ ಪ್ರಚಾರ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡಿದ್ದ ಜಾತೋನಾಂಗರನ್ನು ತಮ್ಮ ಗುರುವಾಗಿ ಸ್ವೀಕರಿಸಿದರು. ಅವರ ಪ್ರಭಾವದಿಂದ ಭೌತಿಕ ಸುಖ ಹಾಗೂ ಪ್ರಾಪಂಚಿಕ ಆಕರ್ಷಣೆಯಿಂದ ದೂರ ಸರಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು.
ಕೇವಲ ತಮ್ಮ ಹದಿನಾರನೇ ವಯಸ್ಸಿನಲ್ಲಿ ನಾಯಕಿಯಾಗಿ ಜನರನ್ನು ಉತ್ತಮ ಮಾರ್ಗದಲ್ಲಿ ನಡೆಸತೊಡಗಿದರು. ಯುವಜನಾಂಗಕ್ಕೆ ಸಂದೇಶ ನೀಡುತ್ತಾ “ನಾವು ನಾಗಾಗಳು ಯಾವತ್ತೂ ಸ್ವತಂತ್ರರಾಗಿಯೇ ಇರುವೆವು. ನಾವೆಂದಿಗೂ ಯಾರದಾಸ್ಯವನ್ನೂ ಒಪ್ಪಿಕೊಂಡವರಲ್ಲ ಅಂದ ಮೇಲೆ ಎಲ್ಲಿಂದಲೋ ಬಂದ ಬ್ರಿಟಿಷರಿಗೆ ನಮ್ಮ ಮೇಲೆ ಆಡಳಿತ ನಡೆಸಲು ಯಾವ ಅಧಿಕಾರವಿದೆ? ಅವರ ದಬ್ಬಾಳಿಕೆಯನ್ನು ನಾವು ಸಹಿಸಬಾರದು. ಅವರಿಗೆ ತೆರಿಗೆಕೊಡಬಾರದು. ಅವರ ಕಾನೂನುಗಳನ್ನು ಪಾಲಿಸಬಾರದು. ಅವರ ಯಾವುದೇ ಕೆಲಸದಲ್ಲಿ ಕಾರ್ಮಿಕರಾಗಿ ದುಡಿಯಬೇಕಾಗಿಲ್ಲ. ಕೂಲಿ ಆಳುಗಳಂತೆ ಅವರ ಸರಕುಗಳನ್ನು ಹೊರುವುದು ಸರಿಯಲ್ಲ. ಒಟ್ಟಿನಲ್ಲಿ ಅವರನ್ನು ನಮ್ಮ ನಮ್ಮ ಊರುಗಳಲ್ಲಿ ಪ್ರವೇಶಿಸಲು ಬಿಡಕೂಡದು” ಎಂದು ಭವಿಷ್ಯದದಾರಿಯನ್ನು ತೋರಿಸಿದರು, ಸ್ಫೂರ್ತಿತುಂಬಿದರು.
ಬ್ರಿಟಿಷ್ ಸರ್ಕಾರ ಮೋಸದಿಂದ ರಾಣಿಮಾರ ಗುರುಗಳಾದ ಜಾದೋನಾಂಗರನ್ನು ಸೆರಿ ಹಿಡಿಯಿತು. ಜೈಲಿನಲ್ಲಿ ಅವರನ್ನು ಭೇಟಿ ಮಾಡಿದರಾಣಿ ಮಾತಮ್ಮ ಭಾಷೆಯಲ್ಲಿ– “ಸ್ವಾತಂತ್ರ್ಯ ನಮ್ಮ ಜನ್ಮ ಸಿದ್ಧ ಹಕ್ಕು. ಬ್ರಿಟಿಷರ ಕುರುಡು ಆಡಳಿತ ಕೊನೆಗೊಳಿಸಿ ಅವರ ಮಿಷಿನರಿಗಳಿಂದ ನಮ್ಮ ಧರ್ಮವನ್ನು ರಕ್ಷಿಸುವುದು ನನ್ನ ಜೀವನದ ಗುರಿಯಾಗಿದೆ. ತಾವು ಬಂಧನದಲ್ಲಿದ್ದರೂ ನಾವು ಈ ಹೋರಾಟ ಮುಂದುವರಿಸುತ್ತೇವೆ. ನಿಮ್ಮನ್ನು ಮೋಸದಿಂದ ಬಂಧಿಸಿದ ಬ್ರಿಟಿಷರು ಇದರ ದಂಡತೆರಬೇಕಾಗುವುದು. ತಾವು ಭಾರತ ಮಾತೆಯ ಸುಪುತ್ರರು. ದೇಶ ತಮ್ಮನ್ನು ಗೌರವಿಸುವುದು”. ಒಬ್ಬ ಶಿಷ್ಯೆ ತನ್ನ ಗುರುವಿಗೆ ಸಲ್ಲಿಸಬಹುದಾದ ಅತ್ಯಂತ ದೊಡ್ಡ ಕಾಣಿಕೆ ಇದಲ್ಲವೇ?!
ಇಷ್ಟರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ರಾಣಿ ಗೈಡಿನ್ಲ್ಯೂರವರ ಶಕ್ತಿ ಸಾಮರ್ಥ್ಯದ ಅರಿವಾಗಿತ್ತು. ಆಕೆಯನ್ನು ಬಂಧಿಸುವ ಪ್ರಯತ್ನ ನಡೆದಿತ್ತು. ಈ ವಿಷಯ ತಿಳಿದ ರಾಣಿ ಮಾತಮ್ಮಯುದ್ಧ ಪರಿಣಿತರೊಂದಿಗೆ ಮಣಿಪುರದ ರಾಜಸ್ಥಾನದಲ್ಲಿ ಭೂಗತರಾಗಿದ್ದುಕೊಂಡು ಹೋರಾಟ ನಡೆಸಿದರು. ಕೇವಲ ಏಳು ತಿಂಗಳಲ್ಲಿ ಬ್ರಿಟಿಷ್ ಸರ್ಕಾರವನ್ನು ನಡುಗಿಸಿದರು. ಗುರಿಯೆಡೆಗೆ ದೃಷ್ಟಿ ಇದ್ದವರಿಗೆ ಹಸಿವು ನಿದ್ದೆ ಪರಿಶ್ರಮಯಾವುದರ ಪರಿವಿಯೂ ಇರಲಿಲ್ಲ. ಇದು ಅವರ ಆಧ್ಯಾತ್ಮಿಕ ಒಲವೂ ಇದ್ದಿರಬಹುದು.
ಬ್ರಿಟಿಷ್ ಸರ್ಕಾರ ಆಕೆಯನ್ನು ಬಂಧಿಸಲು ಸತತ ಪ್ರಯತ್ನ ಹಾಕಿತು. ಆಕೆಯನ್ನು ಹಿಡಿದುಕೊಟ್ಟವರಿಗೆ ರೂ.200, ರೂ.500 ರವರೆಗೆ ಬಹುಮಾನ ಘೋಷಿಸಿದರು. ಆ ಗ್ರಾಮದ ಹತ್ತು ವರ್ಷದ ಕಂದಾಯವನ್ನು ಮನ್ನಾ ಮಾಡಲಾಗುವುದು ಎಂದು ಸಾರಿದರು. ಜನರಿಗೆ ಕಿರುಕುಳ ನೀಡಲು ಆರಂಭಿಸಿದರು. ಇದನ್ನು ತಪ್ಪಿಸಲುತನ್ನ ಜನರ ಪ್ರಾಣರಕ್ಷಣೆಗಾಗಿ ಆಕೆ ಬ್ರಿಟಿಷರಿಗೆ ಸೆರೆಯಾದಳು. ಸರ್ಕಾರ ವಿಚಾರಣೆಯ ನಾಟಕ ವಾಡಿ ಅಜೀವಪರ್ಯಂತ ಕಾರಾಗ್ರಹ ಶಿಕ್ಷೆ ವಿಧಿಸಿತು. 17 ವರ್ಷದ ಸಿಂಹಿಣಿಯನ್ನು ಪಂಜರದಲ್ಲಿ ಕೂಡಿಡಲಾಯಿತು.
ರಾಣಿ ಗೈಡಿನ್ಲ್ಯೂರವ ಸೆರೆಸಿಕ್ಕ ನಂತರ ವಿಹರಕ್ಕಾ ಆಂದೋಲನವು ಕ್ರಮೇಣ ದುರ್ಬಲವಾಯಿತು. ಬ್ರಿಟೀಷರು ಅಸ್ಸಾಂ, ನಾಗಾ ಹಿಲ್ಸ್ ಹಾಗೂ ಮಣಿಪುರಗಳಲ್ಲಿ ವಿಕಾಸ ಕಾರ್ಯವನ್ನು ತಡೆಹಿಡಿದರು. ಅಲ್ಲಿಯಜನ ಬಡತನ, ಅಜ್ಞಾನ, ದೌರ್ಬಲ್ಯದಿಂದ ನರಳುವಂತೆ ಮಾಡಿದರು. ಎಲ್ಲಿಯವರೆಗೆ ಆ ಜನಾಂಗ ಮತಾಂತರಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅವರ ಏಳಿಗೆ ಸಾಧ್ಯವಿಲ್ಲ ಎಂಬ ಅಭಿಪ್ರಾಯ ಮೂಡಿಸಲಾಯಿತು.
ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನ 1947 ಆಗಸ್ಟ್ 15 ರಂದು ರಾಣಿತಮ್ಮ 15 ವರ್ಷಗಳ ಬಂಧನದಿಂದ ಮುಕ್ತರಾದರು. ಆಗ ಅವರಿಗೆ ಕೇವಲ 37 ವರ್ಷ. ಜೈಲಿನಿಂದ ಬಿಡುಗಡೆಯಾದರೂ ಅವರಿಗೆ ಮಣಿಪುರ ನಾಗಾಲ್ಯಾಂಡ್ ಮೊದಲಾದಕಡೆ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು. ಇದರಿಂದ ಆಕೆಗೆ ಬಹಳ ನೋವಾಯಿತು. ತನ್ನ ತಮ್ಮನ ಮನೆಯಲ್ಲಿ ಗೃಹ ಬಂಧಿಯಾಗಿ ಇರಲು ಸರ್ಕಾರ ಅನುಮತಿ ನೀಡಿತು. ಆದರೆ ಸಾಮಾನ್ಯ ಜನರು ಆಕೆಯನ್ನು ದೇವತೆ ಎಂಬಂತೆ ಗೌರವಿಸಿದರು.
ರಾಷ್ಟಾçದ್ಯಂತ ಹಿಂದೂ ಸಂಘಟನೆಗಳು ಆಕೆಯನ್ನು ಗೌರವಿಸಿ ಆಕೆಯ ಬೆನ್ನೆಲುಬಾಗಿ ನಿಂತವು. ಬಿಂದುವಿನಲ್ಲಿ 1985 ಜನವರಿಯಲ್ಲಿ ನಡೆದ ಪ್ರಥಮ ರಾಷ್ಟ್ರೀಯ ವನವಾಸಿ ಮಹಾಸಮ್ಮೇಳನದಲ್ಲಿ ರಾಣಿ ಗೈಡಿನ್ಲ್ಯೂ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. 2ಸಾವಿರಕ್ಕೂ ಹೆಚ್ಚು ಮಾತೆಯರು ದೇಶದ ಎಲ್ಲಾ ಕಡೆಯಿಂದ ಭಾಗವಹಿಸಿದರು. ರಾಣಿಮಾ ಮಹಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿರಾಷ್ಟ್ರ ನಿರ್ಮಾಣದಲ್ಲಿ ಹೆಣ್ಣು ಮಕ್ಕಳು ಭಾಗವಹಿಸುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿಜನವರಿ 26ರಂದು ರಾಣಿಮಾರನ್ನುಒಂದು ಶೃಂಗರಿಸಿದ ರಥದಲ್ಲಿ ಕುಳ್ಳಿರಿಸಲಾಯಿತು. ಆಕೆಯ ಅಕ್ಕಪಕ್ಕದಲ್ಲಿ ಇಬ್ಬರು ಯುವತಿಯರು ರೈಫಲ್ ಹಿಡಿದು ನಿಂತಿದ್ದರು. ಶೋಭಾಯಾತ್ರೆಯ ಮುಂದುಗಡೆ 24 ಜನ ಮಹಿಳೆಯರು ಮೋಟರ್ ಸೈಕಲ್ ಸವಾರಿ ಮಾಡಿ ಹೆಣ್ಣು ಮಕ್ಕಳ ಶಕ್ತಿಯನ್ನು ಪ್ರದರ್ಶಿಸಿ ರಾಣಿ ಮಾಗೇಗೌರವ ಸಮರ್ಪಿಸಿದರು.
ರಾಣಿಮಾರ ಶೌರ್ಯ, ನಿಷ್ಠೆ, ಧೈರ್ಯ, ಸಾಹಸದ ಕಥೆಗಳನ್ನು ಹಿರಿಯರು ತಮ್ಮ ಮನೆಯ ಮಕ್ಕಳಿಗೆ ಹೇಳಿ ಸ್ಫೂರ್ತಿತುಂಬಿದರು. ರಾಣಿಮಾರ ಬಗ್ಗೆ ಅವರಿಗೆಲ್ಲ ಅಪಾರ ಗೌರವ ಭಕ್ತಿ ಇತ್ತು ಏಕೆಂದರೆ ರಾಣಿಮಾ ಭಾರತೀಯತೆಯ ಪ್ರತೀಕವಾಗಿದ್ದರು.
ರಾಣಿ ಗೈಡಿನ್ಲ್ಯೂರವರ ಹೋರಾಟದ ಬದುಕನ್ನು ಶ್ಲಾಘಿಸುತ್ತಾ ನಾನಾ ಪ್ರಶಸ್ತಿಗಳು ಅರಸಿ ಬಂದವು. ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡವು. ಅವುಗಳಲ್ಲಿ ಮುಖ್ಯವಾದವು ಸ್ವಾತಂತ್ರ್ಯ ಸೇನಾನಿ ತಾಮ್ರ ಪತ್ರ ಪುರಸ್ಕಾರ 1972, ಆಗಸ್ಟ್ ಸ್ವಾತಂತ್ರ್ಯದ ರಜತಮಹೋತ್ಸವದ ಸಂದರ್ಭದಲ್ಲಿ ಸಂದ ಪದ್ಮಭೂಷಣ (1972 ಜನವರಿ 26), ಭಗವಾನ್ ಬಿರಸಾ ಮುಂಡ ಪುರಸ್ಕಾರ-1996(ಮರಣದ ನಂತರ), ಒಂದು ರೂಪಾಯಿ ಬೆಲೆಯ ಅಂಚೆ ಚೀಟಿಯ ಬಿಡುಗಡೆ ಪ್ರಮುಖವಾದವು. ಭಾರತ ಸರ್ಕಾರ ಭಾರತೀಯ ಇತಿಹಾಸದ ಐದು ಪ್ರಮುಖ ನಾರಿಯರ ಸಮ್ಮಾನದಲ್ಲಿ ಸ್ತ್ರೀಶಕ್ತಿ ಪುರಸ್ಕಾರ ಪ್ರಾರಂಭ ಮಾಡಿದ್ದು ಅವರಲ್ಲಿ ರಾಣಿ ರಾಣಿ ಗೈಡಿನ್ಲ್ಯೂ ಸಹ ಒಬ್ಬರು. ಉಳಿದವರು ಅಹಲ್ಯ ಬಾಯಿ ಹೊಳ್ಕರ್, ಕಣ್ಣಗಿ, ಜೀಜಾಬಾಯಿ.
ಸ್ವಾತಂತ್ರ್ಯದ ನಂತರವೂ ದೇಶದ ಅಖಂಡತೆ ಹಾಗೂ ಸಾರ್ವಭೌಮತ್ವದ ಸುರಕ್ಷೆಗಾಗಿ ಜೀವಮಾನವಿಡೀ ಹೋರಾಡಿದ ಮಹಾನಾಯಕಿ ರಾಣಿ ಗೈಡಿನ್ಲ್ಯೂ 1993 ಫೆಬ್ರವರಿ 17ರಂದು ದೈವಾಧೀನರಾದರು. ಆದರೂ ಭಾರತದೇಶದ ಲಕ್ಷಾಂತರ ಪ್ರಾಥಃಸ್ಮರಣೀಯರಲ್ಲಿ ರಾಣಿ ಗೈಡಿನ್ಲ್ಯೂ ಸಹ ಒಬ್ಬರೆಂದು ಹೆಮ್ಮೆ ಎನಿಸುತ್ತದೆ. ಇಂಥವರ ತ್ಯಾಗ ಬಲಿದಾನಗಳಿಂದ ವನವಾಸಿಗಳ ಇಂದಿನ ಬದುಕು ಸುಂದರಗೊಳ್ಳುತ್ತಿದೆ. ಇಂತಹವರ ಸಂತತಿ ದಿನೇ ದಿನೇ ವೃದ್ಧಿಸಲಿ ಎಂಬುದೇ ನಮ್ಮ ಆಶಯ.
ಲೇಖಕರು ಸಂಚಾಲಕರು, ಶ್ರೀ ಅನ್ನಪೂರ್ಣೇಶ್ವರಿ ಮುಷ್ಟಿ ಅಕ್ಕಿ ಯೋಜನೆ, ಶಿವಮೊಗ್ಗ