Site icon Vistara News

Rashtrapati Bhavan: ಮೋದಿ ಪ್ರಮಾಣ ವಚನ ಸಮಾರಂಭದ ವೇಳೆ ಕಾಣಿಸಿಕೊಂಡಿದ್ದು ಚಿರತೆಯಲ್ಲ; ಪೊಲೀಸರ ಸ್ಪಷ್ಟನೆ

Rashtrapati Bhavan

Rashtrapati Bhavan

ನವದೆಹಲಿ: ಎನ್‌ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಸಹಿತ ಸಚಿವರು ಜೂನ್‌ 9ರಂದು ದೆಹಲಿಯ ರಾಷ್ಟ್ರಪತಿ ಭವನ (Rashtrapati Bhavan)ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೀಗ ಈ ಪ್ರಮಾಣ ವಚನ ಸಮಾರಂಭದ ತುಣುಕೊಂದು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕಾರ್ಯಕ್ರಮ ನಡೆಯುತ್ತಿರುವಾಗ ರಾಷ್ಟ್ರಪತಿ ಭವನದಲ್ಲಿ ನಿಗೂಢ ಪ್ರಾಣಿಯೊಂದು ಅಡ್ಡಾಡುತ್ತಿರುವುದು ಕಂಡು ಬಂದಿರುವುದೇ ಇದಕ್ಕೆ ಪ್ರಮುಖ ಕಾರಣ. ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅದನ್ನು ಚಿರತೆ ಎಂದು ಕರೆದಿದ್ದರು. ಈ ಮೂಲಕ ವ್ಯಾಪಕ ಚರ್ಚೆ ನಡೆದಿತ್ತು. ಇದೀಗ ದೆಹಲಿ ಪೊಲೀಸರು ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಕೇವಲ ಬೆಕ್ಕು ಮತ್ತು ಯಾವುದೇ ಚಿರತೆ ಅಲ್ಲ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ (Viral News).

ಬಿಜೆಪಿಯ ದುರ್ಗಾ ದಾಸ್ ಉಯಿಕೆ ಅವರು ಕೇಂದ್ರ ಸಚಿವರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ, ವೇದಿಕೆಯ ಹಿನ್ನೆಲೆಯಲ್ಲಿ ಪ್ರಾಣಿಯೊಂದು ಓಡಾಡಿತ್ತು. ಹೆಚ್ಚಿನವರು ಇದನ್ನು ಆಗ ಗಮನಿಸಿರಲಿಲ್ಲ. ಬಳಿಕ ಇದನ್ನು ವಿಡಿಯೊದಲ್ಲಿ ಗುರುತಿಸಿದ ನೆಟ್ಟಿಗರು ಇದನ್ನು ಚಿರತೆ ಎಂದು ಕರೆದಿದ್ದರು. ಹೀಗಾಗಿ ಈ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆ ನಡೆದಿತ್ತು.

ಭಾರತದ ಪ್ರಧಾನ ಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸಹಜವಾಗಿ ಬಿಗಿ ಭದ್ರತೆಯ ಕಾರ್ಯಕ್ರಮವಾಗಿದ್ದು, ರಾಷ್ಟ್ರದ ಮುಖಂಡರು, ರಾಜಕೀಯ ನಾಯಕರು, ಉದ್ಯಮಿಗಳು, ಪ್ರಮುಖ ಚಲನಚಿತ್ರ ನಟರು ಸಾಕ್ಷಿಗಳಾಗಿದ್ದರು. ಇಷ್ಟೆಲ್ಲ ಭದ್ರತೆ ನಡುವೆಯೂ ಚಿರತೆ ಕಾಣಿಸಿಕೊಂಡಿದೆ ಎಂಬ ವಿಚಾರವೇ ಅನೇಕರಲ್ಲಿ ಭಯ ಹುಟ್ಟಿಸಿತ್ತು.

ಪೊಲೀಸರ ಸ್ಪಷ್ಟನೆ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ದೆಹಲಿ ಪೊಲೀಸರು, ʼʼರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರದ ವೇಳೆ ಸೆರೆಯಾದ ಪ್ರಾಣಿಯ ಚಿತ್ರವನ್ನು ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಚಿರತೆ ಎಂದು ಕರೆದಿವೆ. ಆದರೆ ಇದು ನಿಜವಲ್ಲ. ಕ್ಯಾಮೆರಾದಲ್ಲಿ ಸೆರೆಯಾದ ಪ್ರಾಣಿ ಸಾಮಾನ್ಯ ಮನೆಯ ಬೆಕ್ಕು. ದಯವಿಟ್ಟು ಇಂತಹ ಕ್ಷುಲ್ಲಕ ವದಂತಿಗಳಿಗೆ ಕಿವಿಗೋಡಬೇಡಿ” ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಕವಿದಿದ್ದ ಆತಂಕದ ಕಾರ್ಮೋಡವನ್ನು ನಿವಾರಿಸಿದ್ದಾರೆ.

ಇದನ್ನೂ ಓದಿ: PM Narendra Modi: ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಿಗೂಢ ಪ್ರಾಣಿ! ವಿಡಿಯೋ ಇದೆ ನೋಡಿ

ನೆಟ್ಟಿಗರ ಚರ್ಚೆ

ರಾಷ್ಟ್ರಪತಿ ಭವನದಲ್ಲಿ ಚಿರತೆ ಕಾಣಿಸಿಕೊಂಡಿದೆ ಎನ್ನುವಾಗಲೇ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದವು. ಅನೇಕರು ಇದನ್ನು ನಂಬಿರಲಿಲ್ಲ. ಇನ್ನು ಕೆಲವರು, ವಿಸ್ತಾರವಾದ ರಾಜಪಥ ಹಾಗೂ ರಾಷ್ಟ್ರಪತಿ ಭವನದ ಆವರಣದಲ್ಲಿ ಚಿರತೆ ಬಂದು ಹುದುಗಿಕೊಂಡಿರುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗುವುದಿಲ್ಲ. ʼಅಮೃತ್ ಉದ್ಯಾನ್ʼ ಎಂದು ಕರೆಯಲಾಗುವ ಉದ್ಯಾನ 15 ಎಕರೆಗಳಷ್ಟು ಹರಡಿದ್ದು, ಹಲವು ಕಡೆ ದಟ್ಟವಾದ ಕಾಡು ಇದೆ. ಈಸ್ಟ್ ಲಾನ್, ಸೆಂಟ್ರಲ್ ಲಾನ್, ಲಾಂಗ್ ಗಾರ್ಡನ್ ಮತ್ತು ಸರ್ಕ್ಯುಲರ್ ಗಾರ್ಡನ್ ಇದರ ಮೂಲ ಆಕರ್ಷಣೆಗಳಾಗಿವೆ. ಹರ್ಬಲ್ ಗಾರ್ಡನ್, ಟ್ಯಾಕ್ಟೈಲ್ ಗಾರ್ಡನ್, ಬೋನ್ಸಾಯ್ ಗಾರ್ಡನ್ ಮತ್ತು ಆರೋಗ್ಯ ವನಗಳು ಇಲ್ಲಿವೆ. ಹೀಗಾಗಿ ಇಲ್ಲಿಂದ ಚಿರತೆ ಕಣ್ತಪ್ಪಿಸಿ ಬಂದಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದರು. ಸದ್ಯ ಗೊಂದಲ ನಿವಾರಣೆಯಾಗಿದೆ.

Exit mobile version