Site icon Vistara News

Rashtrapati Bhavan Halls Renamed: ರಾಷ್ಟ್ರಪತಿ ಭವನದ ಎರಡು ಹಾಲ್‌ಗಳ ಹೆಸರು ಬದಲಾವಣೆ; ಕಾಂಗ್ರೆಸ್‌ ಕಿಡಿ

Rashtrapati Bhavan Halls Renamed

ಹೊಸದಿಲ್ಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನವ ದೆಹಲಿಯ ರಾಷ್ಟ್ರಪತಿ ಭವನದ ಆವರಣದಲ್ಲಿರುವ ʼಮೊಘಲ್‌ ಗಾರ್ಡನ್‌ʼ ಅನ್ನು ʼಅಮೃತ ಉದ್ಯಾನʼ ಎಂದು ಮರು ನಾಮಕರಣದ ಬೆನ್ನಲ್ಲೇ ಇದೀಗ ರಾಷ್ಟ್ರಪತಿ ಭವನ(Rashtrapati Bhavan Halls Renamed)ದ ದರ್ಬಾರ್‌ ಹಾಲ್‌(Durbar Hall) ಮತ್ತ ಅಶೋಕ ಹಾಲ್‌(Ashok Hall)ಗೆ ಮರುನಾಮಕರಣ ಮಾಡಲಾಗಿದೆ. ದರ್ಬಾರ್‌ ಹಾಲ್‌ಗೆ ಗಣತಂತ್ರ ಮಂಟಪ ಮತ್ತು ಅಶೋಕ್‌ ಹಾಲ್‌ಗೆ ಅಶೋಕ ಮಂಟಪ ಎಂದು ಮರುನಾಮಕರಣ ಮಾಡಲಾಗಿದೆ.

ರಾಷ್ಟ್ರಪತಿ ಭವನದಿಂದ ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಭವ್ಯವಾದ ಕಟ್ಟಡದ ವಾತಾವರಣವು ಭಾರತೀಯ ಸಾಂಸ್ಕೃತಿಕ ಮೌಲ್ಯಗಳು ಮತ್ತು ನೈತಿಕತೆಯನ್ನು ಪ್ರತಿಬಿಂಬಿಸುವಂತೆ ಮಾಡಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ‘ದರ್ಬಾರ್ ಹಾಲ್’ ರಾಷ್ಟ್ರೀಯ ಪ್ರಶಸ್ತಿಗಳ ಪ್ರದಾನದಂತಹ ಪ್ರಮುಖ ಸಮಾರಂಭಗಳು ಮತ್ತು ಆಚರಣೆಗಳ ಸ್ಥಳವಾಗಿದೆ. ‘ದರ್ಬಾರ್’ ಎಂಬ ಪದವು ಭಾರತೀಯ ಆಡಳಿತಗಾರರು ಮತ್ತು ಬ್ರಿಟಿಷರ ನ್ಯಾಯಾಲಯಗಳು ಮತ್ತು ಅಸೆಂಬ್ಲಿಗಳನ್ನು ಸೂಚಿಸುತ್ತದೆ. ಭಾರತವು ಸ್ವತಂತ್ರಗೊಂಡ ನಂತರ ಅದು ಪ್ರಸ್ತುತತೆಯನ್ನು ಕಳೆದುಕೊಂಡಿವೆ. ಹೀಗಾಗಿ ದರ್ಬಾರ್‌ ಹಾಲ್‌ಗೆ ಗಣತಂತ್ರ ಮಂಟಪ ಮರುನಾಮಕರಣ ಮಾಡಲಾಗಿದೆ.

ಅಶೋಕ ಹಾಲ್‌ ಮೂಲತಃ ನೃತ್ಯ ಪ್ರದರ್ಶನಕ್ಕೆ ಇದ್ದಂತಹ ವಿಶಾಲವಾದ ಕೊಠಡಿಯಾಗಿದೆ. ಅಶೋಕ ಎಂಬ ಪದವು “ಎಲ್ಲಾ ದುಃಖಗಳಿಂದ ಮುಕ್ತ” ಅಥವಾ “ಯಾವುದೇ ದುಃಖದಿಂದ ದೂರವಿರುವ” ವ್ಯಕ್ತಿಯನ್ನು ಸೂಚಿಸುತ್ತದೆ. ಅಲ್ಲದೆ, ‘ಅಶೋಕ’ ಸಾಮ್ರಾಟ ಅಶೋಕನನ್ನು ಸೂಚಿಸುತ್ತದೆ, ಇದು ಏಕತೆ ಮತ್ತು ಶಾಂತಿಯುತ ಸಹಬಾಳ್ವೆಯ ಸಂಕೇತವಾಗಿದೆ. ಹೀಗಾಗಿ ಅಶೋಕ ಮಂಟಪ ಎಂದು ಹೆಸರು ಬದಲಾವಣೆ ಮಾಡಲಾಗಿದೆ.

ಇನ್ನು ಈ ಮಧ್ಯೆ ರಾಷ್ಟ್ರಪತಿ ಭವನದ ಹಾಲ್‌ಗಳ ಮರುನಾಮಕರಣದ ಬಗ್ಗೆ ಪ್ರತಿಪಕ್ಷಗಳು ಆಕ್ರೋಶ ಹೊರ ಹಾಕಿವೆ. ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾಧ್ರಾ ಪ್ರತಿಕ್ರಿಯಿಸಿದ್ದು, ಇದು ʼದರ್ಬಾರ್‌ʼನ ವಿಚಾರವಲ್ಲ. ಇದು ಶೆಹನ್‌ಶಾನ ಪರಿಕಲ್ಪನೆ ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: Paris Olympics: ಪರಂಪರೆಗಳ ದೇಶ ಪ್ಯಾರಿಸ್​ನಲ್ಲಿ ನಾಳೆಯಿಂದ ಪ್ರಜ್ವಲಿಸಲಿದೆ ಒಲಿಂಪಿಕ್ಸ್ ಜ್ಯೋತಿ

Exit mobile version