Site icon Vistara News

Ratna Bhandar: ಒಂದೇ ವಾರದಲ್ಲಿ ಎರಡನೇ ಬಾರಿ ತೆರೆದ ಪುರಿ ಜಗನ್ನಾಥನ ʼರತ್ನ ಭಂಡಾರʼ

Ratna Bhandar

ಭುವನೇಶ್ವರಂ: 12ನೇ ಶತಮಾನದ ಪುರಿಯ ಜಗನ್ನಾಥ ದೇವಾಲಯ(Puri Jagannath Temple)ದ ಖಜಾನೆಯಾದ ರತ್ನ ಭಂಡಾರವನ್ನು ಇಂದು ಮತ್ತೆ ತೆರೆಯಲಾಯಿತು. ಕಳೆದ ವಾರವಷ್ಟೇ ಪುರಿ ಜಗನ್ನಾಥನ ರತ್ನ ಭಂಡಾರ(Ratna Bhandar)ವನ್ನು ಬರೋಬ್ಬರಿ 46ವರ್ಷಗಳ ಬಳಿ ತೆರೆಯಲಾಗಿತ್ತು. ಒಂದು ವಾರದ ಅಂತರದಲ್ಲಿ ಎರಡನೇ ಬಾರಿಗೆ ತೆರೆಯಲಾಗಿದೆ. ಅಲ್ಲಿನ ದುರಸ್ತಿಕಾರ್ಯ ಮತ್ತು ಆಭರಣಗಳ ಲೆಕ್ಕಹಾಕುವ ಪ್ರಕ್ರಿಯೆಗಾಗಿ ಅವುಗಳನ್ನು ತಾತ್ಕಾಲಿಕ ಸ್ಟ್ರಾಂಗ್ ರೂಮ್‌(Strong Room)ಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇಂದು ಬೆಳಗ್ಗೆ 9.51ಕ್ಕೆ ರತ್ನ ಭಂಡಾರವನ್ನು ಪುನಃ ತೆರೆಯಲಾಗಿದ್ದು, ಪುರಿ ಜಗನ್ನಾಥನಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಒಡಿಶಾ ಸರ್ಕಾರವು ಸ್ಥಾಪಿಸಿದ ಮೇಲ್ವಿಚಾರಣಾ ಸಮಿತಿಯ ಸದಸ್ಯರು ಭಂಡಾರವನ್ನು ತೆರೆದು ಅದರಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಸ್ಥಳಾಂತರಿಸಿದರು.

ದೇವಸ್ಥಾನ ಪ್ರವೇಶಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಮತ್ತು ಒರಿಸ್ಸಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಬಿಸ್ವನಾಥ್ ರಾತ್, “ಭಂಡಾರದ ಒಳಕೋಣೆಯೊಳಗೆ ಸಂಗ್ರಹವಾಗಿರುವ ಎಲ್ಲಾ ಬೆಲೆಬಾಳುವ ವಸ್ತುಗಳ ಸ್ಥಳಾಂತರವನ್ನು ಸುಗಮವಾಗಿ ಪೂರ್ಣಗೊಳಿಸಲು ನಾವು ಜಗನ್ನಾಥನ ಆಶೀರ್ವಾದವನ್ನು ಕೋರಿದ್ದೇವೆ” ಎಂದು ಹೇಳಿದರು.

1978ರಲ್ಲಿ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ತೆಗೆದಿದ್ದಾಗ 128.38 ಕೆ.ಜಿ ಚಿನ್ನ ಸಿಕ್ಕಿತ್ತು. ಚಿನ್ನದ ಸುಮಾರು 454 ಆಭರಣಗಳು ದೊರಕಿದ್ದವು. ಇನ್ನು, ಇದೇ ಖಜಾನೆಯಲ್ಲಿ 221.53 ಕೆ.ಜಿ ಬೆಳ್ಳಿ ಇತ್ತು. ಬೆಳ್ಳಿಯ 293 ಆಭರಣಗಳು ದೊರಕಿದ್ದವು. ಆಗ ಸುಮಾರು 70 ದಿನಗಳವರೆಗೆ ಅಧಿಕಾರಿಗಳು ಶೋಧನೆ ನಡೆಸಿದ್ದರು. ಈಗ ಮತ್ತೆ ರತ್ನ ಭಂಡಾರದ ಆಭರಣಗಳನ್ನು ಲೆಕ್ಕ ಹಾಕಲಾಗುತ್ತದೆ ಎಂದು ತಿಳಿದುಬಂದಿದೆ

ಒಡಿಶಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಬಿಸ್ವನಾಥ್ ರಾತ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಈ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದೆ. ಸರ್ಕಾರದ ಅನುಮೋದನೆಯನ್ನು ಪಡೆದ ನಂತರ, ದಾಸ್ತಾನುಗಳಿಗೆ ಮಾರ್ಗದರ್ಶನ ನೀಡಲು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (SOP)ಸ್ಥಾಪಿಸಲಾಯಿತು. ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತವು (SJTA), ಅದರ ಮುಖ್ಯ ಆಡಳಿತಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದೆ.

ಅನಂಗಭೀಮ ದೇವ ಕ್ರಿಶ 1238ರವರೆಗೆ ಒಡಿಶಾ ಪ್ರದೇಶದ ರಾಜನಾಗಿದ್ದ. ಈತನ ಅಧಿಕಾರದ ಅವಧಿಯಲ್ಲಿ ಪುರಿ ದೇವಾಲಯಕ್ಕೆ 1.25 ಲಕ್ಷ ತೊಲ ಚಿನ್ನವನ್ನು ದಾನವಾಗಿ ನೀಡಿದ್ದ ಎಂಬ ಇತಿಹಾಸ ಇದೆ. 1465ರಲ್ಲಿ ರಾಜ ಕಪಿಲೇಂದ್ರ ದೇವ್‌ ಕೂಡ ಸಾಕಷ್ಟು ಚಿನ್ನವನ್ನು ದಾನ ಮಾಡಿರುವ ಬಗ್ಗೆ ಉಲ್ಲೇಖ ಇದೆ.

1979ರಲ್ಲಿ ಬರೋಬ್ಬರಿ 70 ದಿನಗಳ ಕಾಲ ಸಂಪತ್ತಿನ ಮೌಲ್ಯವನ್ನು ಸಮಿತಿ ಲೆಕ್ಕ ಹಾಕಿತ್ತು. ಆದರೆ ಅದರ ಪೂರ್ತಿ ಮಾಹಿತಿಯನ್ನು ಸರ್ಕಾರ ಸಾರ್ವಜನಿಕಗೊಳಿಸಿರಲಿಲ್ಲ. ಈ ವಿಚಾರ ಕೋರ್ಟ್​ ಮೆಟ್ಟಿಲೇರಿತ್ತು. 2018ರಲ್ಲಿ ಒಡಿಶಾ ಸರ್ಕಾರಕ್ಕೆ ದೇವಸ್ಥಾನದ ರತ್ನ ಭಂಡಾರದ ಕೋಣೆಯ ಬಾಗಿಲು ತೆರೆದು ನಿಧಿಯ ಮೌಲ್ಯ ಮಾಪನ ಮಾಡುವಂತೆ ಹೈಕೋರ್ಟ್​ ಸೂಚನೆ ನೀಡಿತ್ತು.

ಇದನ್ನೂ ಓದಿ: Puri Jagannath temple: ಬರೋಬ್ಬರಿ 46 ವರ್ಷಗಳ ಬಳಿಕ ತೆರೆದ ಪುರಿ ಜಗನ್ನಾಥನ ರತ್ನ ಭಂಡಾರ

Exit mobile version