Site icon Vistara News

ಗಂಡ ಹೆಂಡತಿ ಜಗಳದಿಂದಾಗಿ ರೇಮಂಡ್ ಕಂಪನಿಗೆ 1500 ಕೋಟಿ ರೂ. ನಷ್ಟ!

Raymond experience RS 1500 crore loss because of Gautam Singhania separation with wife

ನವದೆಹಲಿ: ಕೋಟ್ಯಧೀಶ ಗೌತಮ್ ಸಿಂಘಾನಿಯಾ (Gautam Singhania) ಹಾಗೂ ಅವರ ಪತ್ನಿ ನವಾಜ್ ಮೋದಿ (Nawaz Modi) ಅವರು ಪ್ರತ್ಯೇಕಗೊಂಡಿರುವ ಸುದ್ದಿಯ ಅವರು ಕಂಪನಿ ರೇಮಂಡ್ ಲಿ.(Raymond Limited) ಷೇರುಗಳ ಮೇಲೆ ದುಷ್ಪರಿಣಾಮ ಬೀರಿದೆ. ವಿಶ್ವದ ಅತಿ ದೊಡ್ಡ ಸೂಟ್ ಫ್ಯಾಬ್ರಿಕ್ ಉತ್ಪಾದಕರಲ್ಲಿ ಒಂದಾದ ರೇಮಂಡ್ ಲಿಮಿಟೆಡ್ ಮುಂಬೈ ಷೇರುಪೇಟೆಯಲ್ಲಿ (Mumbai Stock) ಏಳನೇ ದಿನಕ್ಕೆ ಕುಸಿಯಿತು(shares fall). ಹೂಡಿಕೆದಾರರಲ್ಲಿನ ಅನಿಶ್ಚಿತತೆಯ ಈ ಕುಸಿತಕ್ಕೆ ಕಾರಣವಾಗಿದೆ. ಇದರಿಂದಾಗಿ ಒಟ್ಟಾರೆ 1500 ಕೋಟಿ ರೂಪಾಯಿ ಕರಗಿ ಹೋಗಿದೆ.

ಪತ್ನಿ ನವಾಜ್ ಸಿಂಘಾನಿಯಾ ಅವರಿಂದ ಪ್ರತ್ಯೇಕವಾಗುತ್ತಿರುವುದಾಗಿ ಗೌತಮ್ ಸಿಂಘಾನಿಯಾ ಅವರು ನವೆಂಬರ್ 13ರಂದು ಘೋಷಣೆ ಮಾಡಿದ್ದರು. ಅಂದಿನಿಂದಲೂ ರೇಮಂಟ್ ಕಂಪನಿಯ ಷೇರುಗಳು ಶೇ.12ರಷ್ಟು ಕುಸಿತವನ್ನು ದಾಖಲಿಸಿವೆ. 32 ವರ್ಷದ ನವಾಜ್ ಅವರು ಕೂಡ ಕಂಪನಿಯ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ. ಒಟ್ಟಾರೆ ಕಂಪನಿಗೆ 1500 ಕೋಟಿ ರೂ. ನಷ್ಟವಾಗಿದೆ. ಬುಧವಾರ ಕೂಡ ಕಂಪನಿಯ ಷೇರುಗಳು ಶೇ.4.4ರಷ್ಟು ಕುಸಿತವಾಗಿದ್ದು, ಇದು ಅಕ್ಟೋಬರ್ 25ರಿಂದ ಇತ್ತೀಚೆಗೆ ಕಂಪನಿ ಅನುಭವಸಿದ ಅತಿ ದೊಡ್ಡ ನಷ್ಟವಾಗಿದೆ.

ವಿಚ್ಛೇದನ ಸುತ್ತಲಿನ ಅನಿಶ್ಚಿತತೆಯು ಷೇರುಗಳ ಮೇಲೆ ಪರಿಣಾಮ ಬೀರಿದೆ. ಹೀಗೆಯೇ ಮುಂದುವರಿದರೆ ಕಂಪನಿಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಸಿಂಘಾನಿಯ ಅವರ ಪತ್ನಿ ಮಂಡಳಿಯ ಸದಸ್ಯರಾಗಿರುವ ಕಾರಣ, ಇದು ಕಾರ್ಪೊರೇಟ್ ಆಡಳಿತದ ಸಮಸ್ಯೆಯಾಗಿದೆ ಎಂಬುದು ಮಾರುಕಟ್ಟೆಯ ತಜ್ಞರ ಅಭಿಪ್ರಾಯವಾಗಿದೆ.

ಗೌತಮ್ ಸಿಂಘಾನಿಯಾ ತಮ್ಮ 1.4 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದ ಸಂಪತ್ತಿನಲ್ಲಿ 75% ಅನ್ನು ತಮ್ಮ ಇಬ್ಬರು ಹೆಣ್ಣುಮಕ್ಕಳಾದ ನಿಹಾರಿಕಾ, ನಿಸಾ ಹಾಗೂ ತಮಗೆ ನೀಡಬೇಕು ಎಂದು ನವಾಜ್ ಮೋದಿ ಕೋರಿದ್ದಾರೆ. ಸಿಂಘಾನಿಯಾ ಈ ಬೇಡಿಕೆಯನ್ನು ಒಪ್ಪಿಕೊಳ್ಳಲು ಷರತ್ತು ವಿಧಿಸಿದ್ದಾರೆ. ಅವರು ಏಕೈಕ ವ್ಯವಸ್ಥಾಪಕ ಟ್ರಸ್ಟಿಯಾಗಿರುವ ಕುಟುಂಬ ಟ್ರಸ್ಟ್ ಸ್ಥಾಪಿಸಿ ಕುಟುಂಬದ ಸಂಪತ್ತು ಮತ್ತು ಆಸ್ತಿಗಳನ್ನು ಅದಕ್ಕೆ ವರ್ಗಾಯಿಸಲಾಗುವುದು. ಅವರ ಮರಣದ ನಂತರ ಕುಟುಂಬ ಸದಸ್ಯರು ವಾರಸುದಾರರಾಗಿತ್ತಾರೆ ಎಂದು ಗೌತಮ್ ಸಿಂಘಾನಿಯಾ ಸಲಹೆ ನೀಡಿದ್ದರು. ಆದರೆ ಇದಕ್ಕೆ ನವಾಜ್ ಒಪ್ಪಿಗೆ ನೀಡಿಲ್ಲ ಎಂದು ವರದಿ ತಿಳಿಸಿದೆ. ಗೌತಮ್ ಅವರ ಆಸ್ತಿಯ ಮೌಲ್ಯ 11,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಖೈತಾನ್ ಆ್ಯಂಡ್ ಕಂಪನಿಯ ಹಿರಿಯ ಪಾಲುದಾರ ಹಯಗ್ರೀವ್‌ ಖೈತಾನ್ ಅವರನ್ನು ಗೌತಮ್ ಸಿಂಘಾನಿಯಾ ಅವರ ಕಾನೂನು ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಇತ್ತ ನವಾಜ್ ಮುಂಬೈ ಮೂಲದ ಕಾನೂನು ಸಂಸ್ಥೆ ರಶ್ಮಿ ಕಾಂತ್ ಅನ್ನು ಕಾನೂನು ಸಲಹೆಗಾಗಿ ಸಂಪರ್ಕಿಸಿದ್ದಾರೆ. ʼʼಪರಿಹಾರ ವಿಚಾರದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ವಿಶೇಷವಾಗಿ ದಂಪತಿ ತಮ್ಮ ಮಕ್ಕಳ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆʼʼ ಎಂದು ಆಪ್ತ ಮೂಲಗಳು ತಿಳಿಸಿವೆ.

“ಎರಡೂ ಕಡೆಯವರು ತೆಗೆದುಕೊಂಡ ಆರಂಭಿಕ ನಿಲುವಿನ ನಂತರ ಹೆಚ್ಚಿನ ಬೆಳವಣಿಗೆ ಕಂಡು ಬಂದಿಲ್ಲ. ನವಾಜ್ ಮತ್ತು ಗೌತಮ್ ಇಬ್ಬರೂ ತಮ್ಮ ಹೆಣ್ಣುಮಕ್ಕಳ ಭವಿಷ್ಯವನ್ನು ಭದ್ರಪಡಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಅದು ಅವರಿಬ್ಬರಿಗೆ ಆದ್ಯತೆಯ ವಿಷಯ” ಎಂದು ಮೂಲಗಳು ಹೇಳಿವೆ.

ಸಾಲಿಸಿಟರ್ ಆಗಿದ್ದ ನಾದರ್ ಮೋದಿ ಅವರ ಪುತ್ರಿ ನವಾಜ್ ಅವರನ್ನು ಸಿಂಘಾನಿಯಾ 32 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇತ್ತೀಚೆಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ 32 ವರ್ಷಗಳ ಸಂಬಂಧವನ್ನು ಕಡಿದುಕೊಳ್ಳುತ್ತಿರುವ ಬಗ್ಗೆ ತಿಳಿಸಿದ್ದರು. “ಅಷ್ಟು ಹಿತೈಷಿಗಳಲ್ಲದವರು ನಮ್ಮ ಜೀವನದ ಸುತ್ತಲೂ ಸಾಕಷ್ಟು ಆಧಾರರಹಿತ ವದಂತಿಗಳನ್ನು ಹರಡಿದ್ದಾರೆ. ನವಾಜ್ ಮತ್ತು ನಾನು ಇಲ್ಲಿಂದ ವಿಭಿನ್ನ ಮಾರ್ಗಗಳಲ್ಲಿ ಸಂಚರಿಸುತ್ತೇವೆʼʼ ಎಂದಷ್ಟೇ ಬರೆದುಕೊಂಡಿದ್ದರು. ಸ್ಪಷ್ಟ ಕಾರಣ ಬಹಿರಂಗಪಡಿಸಿರಲಿಲ್ಲ.

ಈ ಸುದ್ದಿಯನ್ನೂ ಓದಿ: ಹೆಂಡತಿಯಿಂದ ಪ್ರತ್ಯೇಕವಾದ ರೇಮಂಡ್ ಚೇರ್ಮನ್ ಗೌತಮ್ ಸಿಂಘಾನಿಯಾ!

Exit mobile version