Site icon Vistara News

RBI: 33 ವರ್ಷಗಳ ನಂತರ ಬ್ರಿಟನ್‌ನಿಂದ 100 ಟನ್‌ಗಿಂತಲೂ ಹೆಚ್ಚು ಪ್ರಮಾಣದ ಚಿನ್ನ ಭಾರತಕ್ಕೆ!

RBI

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌(RBI) ಇಂಗ್ಲೆಂಡ್‌ನಲ್ಲಿದ್ದ ತನ್ನ 100 ಟನ್‌ಗೂ ಅಧಿಕ ಚಿನ್ನವನ್ನು ದೇಶಿಯ ಖಜಾನೆ(vaults)ಗಳಿಗೆ ರವಾನಿಸಿದೆ. ಕಳೆದ 33ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಚಿನ್ನ ಭಾರತಕ್ಕೆ ಬರುತ್ತಿರುವುದು. ಮುಂದಿನ ದಿನಗಳಲ್ಲಿ ಇಷ್ಟೇ ಮೊತ್ತ ಚಿನ್ನವನ್ನು ಆರ್‌ಬಿಐ ಭಾರತಕ್ಕೆ ತರಲಿದೆ. ಇನ್ನು ಈ ಚಿನ್ನವನ್ನು ಕೆಲವೊಂದು ವ್ಯವಸ್ಥಾಪನಾ ಕಾರಣ ಮತ್ತು ವೈವಿಧ್ಯಮಯ ಸಂಗ್ರಹಣೆ ಉದ್ದೇಶದಿಂದ ದೇಶಿಯ ಖಜಾನೆಗಳಿಗೆ ತರಲಾಗುತ್ತಿದೆ.

ಮಾರ್ಚ್ 2023 ರ ಮಾಹಿತಿಯ ಪ್ರಕಾರ, ಆರ್‌ಬಿಐ ಒಟ್ಟು 822.1 ಟನ್ ಚಿನ್ನವನ್ನು ಹೊಂದಿದ್ದು, ಅದರಲ್ಲಿ 413.8 ಟನ್‌ಗಳಷ್ಟು ಚಿನ್ನವನ್ನು ವಿದೇಶದಲ್ಲಿ ಇರಿಸಲಾಗಿದೆ. ಆರ್‌ಬಿಐ ಕಳೆದ ಕೆಲವು ವರ್ಷಗಳಿಂದ ಚಿನ್ನವನ್ನು ಖರೀದಿಸುತ್ತಿದ್ದು, ಕಳೆದ ಹಣಕಾಸು ವರ್ಷದಲ್ಲಿ 27.5 ಟನ್ ಚಿನ್ನವನ್ನು ಖರೀದಿಸಿತ್ತು. ಆ ಮೂಲಕ ಜಾಗತಿಕ ಮಟ್ಟದಲ್ಲಿ ಆರ್‌ಬಿಐ ಚಿನ್ನ ಸಂಗ್ರಹಣೆಯನ್ನು ಹೆಚ್ಚಿಸಿದೆ.

ಅನೇಕ ದೇಶಗಳ ಸೆಂಟ್ರಲ್ ಬ್ಯಾಂಕ್‌ಗಳು ತಮ್ಮ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ ಇರಿಸುತ್ತವೆ. ಇದರಲ್ಲಿ ಭಾರತವೂ ಒಂದು. ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದ ಸಾಕಷ್ಟು ಚಿನ್ನವನ್ನು ಲಂಡನ್‌ನಲ್ಲಿ ಇರಿಸಲಾಗಿದೆ. ‘ಕೆಲವು ವರ್ಷಗಳ ಹಿಂದೆ ಆರ್‌ಬಿಐ ಚಿನ್ನ ಖರೀದಿಸಲು ಆರಂಭಿಸಿತು ಮತ್ತು ಅದನ್ನು ಎಲ್ಲಿ ಸಂಗ್ರಹಿಸಬೇಕು ಎಂದು ನಿರ್ಧರಿಸಿತು. ವಿದೇಶದಲ್ಲಿ ಚಿನ್ನದ ದಾಸ್ತಾನು ಹೆಚ್ಚುತ್ತಿರುವ ಕಾರಣ ಭಾರತಕ್ಕೆ ಸ್ವಲ್ಪ ಚಿನ್ನವನ್ನು ತರಲು ನಿರ್ಧರಿಸಲಾಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬದಲಾಗುತ್ತಿರುವ ರಾಜಕೀಯ ಸಂಗತಿಗಳು ಮತ್ತು ಕರೆನ್ಸಿ ಮೌಲ್ಯ ಏರಿಳಿತದ ಭೀತಿಯಿಂದಾಗಿ ಆರ್‌ಬಿಐ ಈ ಈ ಚಿನ್ನವನ್ನು ಭಾರತಕ್ಕೆ ತರಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಆರ್ಥಿಕ ತಜ್ಞರು ಹೇಳೋದೇನು?

ಇನ್ನು ಒಂದೇ ಬಾರಿ ಇಷ್ಟು ದೊಡ್ಡ ಮಟ್ಟದಲ್ಲಿ ಚಿನ್ನವನ್ನು ಭಾರತಕ್ಕೆ ತರುತ್ತಿರುವ ಬಗ್ಗೆ ಪ್ರಸಿದ್ದ ಆರ್ತಿಕ ತಜ್ಞ ಸಂಜೀವ್‌ ಸನ್ಯಾಲ್‌ ಟ್ವೀಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾರಿಗೂ ತಿಳಿಯದಂತೆ ಆರ್‌ಬಿಐ ತನ್ನ 100 ಟನ್ ಚಿನ್ನದ ನಿಕ್ಷೇಪಗಳನ್ನು ಯುಕೆಯಿಂದ ಭಾರತಕ್ಕೆ ಹಿಂತಿರುಗಿಸಿದೆ. ಹೆಚ್ಚಿನ ದೇಶಗಳು ತಮ್ಮ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಅಥವಾ ಅಂತಹ ಕೆಲವು ಸ್ಥಳಗಳ ಖಜಾನೆಗಳಲ್ಲಿ ಇರಿಸುತ್ತವೆ. ಭಾರತವು ಈಗ ತನ್ನ ಹೆಚ್ಚಿನ ಚಿನ್ನವನ್ನು ತನ್ನದೇ ಆದ ಖಜಾನೆಗಳಲ್ಲಿ ಇಟ್ಟುಕೊಳ್ಳುತ್ತದೆ. 1991 ರಲ್ಲಿ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ ಮಧ್ಯೆ ನಾವು ರಾತ್ರೋರಾತ್ರಿ ಚಿನ್ನವನ್ನು ಸಾಗಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:Theft Case : ದೇವರ ಹರಕೆ ಕುರಿಯನ್ನೇ ಕದ್ಯೊಯ್ದ ಕಳ್ಳರು; ಸೂಪರ್‌ ಮಾರ್ಕೆಟ್‌ಗಳಲ್ಲಿ ಖದೀಮರ ಕೈಚಳಕ

1991ರಲ್ಲಿ ಏನಾಗಿತ್ತು?

1991 ರಲ್ಲಿ, ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಚಂದ್ರಶೇಖರ್ ನೇತೃತ್ವದ ಸರ್ಕಾರ ಹಣವನ್ನು ಸಂಗ್ರಹಿಸಲು ಚಿನ್ನವನ್ನು ಒತ್ತೆ ಇಟ್ಟಿತ್ತು. ಜುಲೈ 4 ಮತ್ತು 18 ರ ನಡುವೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್‌ನಲ್ಲಿ 46.91 ಟನ್ ಚಿನ್ನವನ್ನು ಒತ್ತೆ ಇಟ್ಟು, $400 ಮಿಲಿಯನ್ ಸಾಲ ಪಡೆದುಕೊಂಡಿತ್ತು. ಸುಮಾರು 15 ವರ್ಷಗಳ ಹಿಂದೆ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರದ ಅಡಿಯಲ್ಲಿ ಆರ್‌ಬಿಐ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 200 ಟನ್ ಚಿನ್ನವನ್ನು ಖರೀದಿಸಿತು.

Exit mobile version